Advertisement
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದಿಂದ ದ.ಕ. ಜಿಲ್ಲೆಯ ಕಿನ್ನಿಗೋಳಿ, ಮಳವೂರು, ಕರೋಪಾಡಿ, ಸಂಗಬೆಟ್ಟು, ಮಾಣಿ, ಸರಪಾಡಿ ಹಾಗೂ ನರಿಕೊಂಬು ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಂಡಿದೆ. ಈ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದೇ ಸ್ವರೂಪದಲ್ಲಿ ಹೊಸತಾಗಿ ಮೂಡುಬಿದಿರೆ, ಉಳಾಯಿಬೆಟ್ಟು ಹಾಗೂ ಇಳಂತಿಲದಲ್ಲಿ ಯೋಜನೆಯ ಪ್ರಾರಂಭಿಕ ಕಾಮಗಾರಿ ಆರಂಭಗೊಂಡಿದೆ. ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕಾರ್ಕಳ, ಹೆಬ್ರಿ, ಕಾಪು ತಾಲೂಕಿಗೆ ಒಳಪಟ್ಟ ಹೊಸ ಯೋಜನೆ ಅನುಷ್ಠಾನ ಹಂತದಲ್ಲಿದೆ.
ದ.ಕ. ಜಿಲ್ಲೆಯ ಅಲಂಕಾರು ಹಾಗೂ ಇತರ 299 ಜನವಸತಿಗಳಿಗೆ (ಕಡಬ ತಾಲೂಕಿನ 203, ಪುತ್ತೂರು ತಾಲೂಕಿನ 53 ಹಾಗೂ ಬೆಳ್ತಂಗಡಿ ತಾಲೂಕಿನ 44) 230 ಕೋ.ರೂ ಅಂದಾಜಿನಲ್ಲಿ ಕುಮಾರಧಾರ ನದಿಗೆ ಅಡ್ಡಲಾಗಿ ಶಾಂತಿಮೊಗರುವಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದೆ. ಬಂಟ್ವಾಳ ತಾಲೂಕಿನ ಅಳಕೆ ಮತ್ತು ಇತರ 123 ಜನವಸತಿ, ಪುತ್ತೂರು ತಾಲೂಕಿನ 319, ಕಡಬ ತಾಲೂಕಿನ 51 ಹಾಗೂ ಸುಳ್ಯ ತಾಲೂಕಿನ 243 ಜನವಸತಿಗಳಿಗೆ ಸೇರಿ 780 ಕೋ.ರೂ. ಅಂದಾಜಿನಲ್ಲಿ ನೇತ್ರಾವತಿ ನದಿಗೆ ಕಾಗೆಕಾನ ಗ್ರಾಮದ ಸಮೀಪ ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆ ಇದಾಗಿದೆ. ಹಾಗೂ ಕಡಬ ತಾಲೂಕಿನ ಕುಟ್ರಾಪ್ಪಾಡಿ ಮತ್ತು ಇತರ 131 ಜನವಸತಿ ಪ್ರದೇಶಗಳಿಗೆ 102 ಕೋ.ರೂ ವೆಚ್ಚದಲ್ಲಿ ಗುಂಡ್ಯ ನದಿಗೆ ಕೊಲ್ಯದಕಟ್ಟೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆ ಟೆಂಡರ್ ಹಂತದಲ್ಲಿದೆ. ಅನುಷ್ಠಾನ ಹಂತದಲ್ಲಿ 5 ಯೋಜನೆ
ಈ ಮಧ್ಯೆ, ಈಗಾಗಲೇ ಆರಂಭವಾಗಿರುವ ಬೆಳ್ತಂಗಡಿ ತಾಲೂಕಿನ ಇಳಂತಿಲ ಹಾಗೂ ಇತರ 209 ಜನವಸತಿಗಳಿಗೆ 176 ಕೋ.ರೂ ಅಂದಾಜಿನಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನೇತ್ರಾವತಿ ನದಿಗೆ ಪೆರ್ನೆ ಗ್ರಾಮದ ಬಿಳಿಯೂರು ಬಳಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಯೋಜಿಸಲಾಗಿದೆ. ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ 132 ಜನವಸತಿ ಪ್ರದೇಶಗಳಿಗೆ 91 ಕೋ.ರೂ ವೆಚ್ಚದಲ್ಲಿ ಕೈಗೆತ್ತಿಕೊಂಡ ಉಳಾಯಿಬೆಟ್ಟು ಯೋಜನೆಯೂ ಶೇ.10 ಪ್ರಗತಿಯಲ್ಲಿದೆ. ಇನ್ನು, ಮೂಡುಬಿದಿರೆ ಹಾಗೂ ಮಂಗಳೂರು ತಾಲೂಕಿನ 583 ಜನವಸತಿ ಪ್ರದೇಶಕ್ಕೆ 183 ಕೋ.ರೂ ವೆಚ್ಚದಲ್ಲಿ ನೀರುಣಿಸುವ ಯೋಜನೆ ಶೇ.50ರಷ್ಟು ಪೂರ್ಣವಾಗಿದೆ.
Related Articles
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ 788 ಗ್ರಾಮೀಣ ಜನವಸತಿ ಹಾಗೂ ಬೈಂದೂರು ಪಡುವರಿ ಹಾಗೂ ಯಡ್ತರೆ ಪಟ್ಟಣದ ಜನವಸತಿಗೆ 613 ಕೋ.ರೂ. ಯೋಜನೆಯಲ್ಲಿ ಕುಡಿಯುವ ನೀರು ಒದಗಿಸುವುದು ಹಾಗೂ ಕಾರ್ಕಳ, ಹೆಬ್ರಿ ಹಾಗೂ ಕಾಪು ತಾಲೂಕಿನ 1904 ಜನವಸತಿ ಪ್ರದೇಶಗಳಿಗೆ 1600 ಕೋ.ರೂ ಅಂದಾಜು ವೆಚ್ಚದ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
Advertisement
ಬಹು ಗ್ರಾಮ “ಬಹು ವೇಗ’ ಪಡೆಯಲಿ!ಇತ್ತೀಚಿನ ವರ್ಷಗಳಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆ ನೀರಿನ ಸಮಸ್ಯೆ ಎದುರಿಸುತ್ತಿದೆ. ನೇತ್ರಾವತಿ ಸಹಿತ ಇತರ ನದಿಗಳು ವರ್ಷದಿಂದ ವರ್ಷಕ್ಕೆ ಸೊರಗುತ್ತಿವೆ. ಗ್ರಾಮಾಂತರ ಭಾಗದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ, ಎರಡು ಜಿಲ್ಲೆಯ ಗ್ರಾಮಾಂತರ ಭಾಗದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಬಹು ಗ್ರಾಮ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಎರಡೂ ಯೋಜನೆಗಳು ಅನುಷ್ಠಾನ ಹಂತ ಮಾತ್ರ ಕುಂಟುತ್ತ ಸಾಗುತ್ತಿದೆ ಎಂಬುದು ಸ್ಥಳೀಯರ ಆಕ್ಷೇಪ. 8 ಯೋಜನೆ ಅನುಷ್ಠಾನ
ದ.ಕ. ಜಿಲ್ಲೆಯಲ್ಲಿ ಹೊಸದಾಗಿ 6 ಹಾಗೂ ಉಡುಪಿ ಜಿಲ್ಲೆಯಲ್ಲಿ 2 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಕಾರಣದಿಂದ ತಡವಾಗಿತ್ತು. ಯೋಜನೆಗೆ ವೇಗ ನೀಡುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ವಹಿಸಲಾಗುವುದು.
– ಎನ್.ಡಿ. ರಘುನಾಥ್ ಹಾಗೂ ಉದಯ್ ಕುಮಾರ್ ಶೆಟ್ಟಿ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ
-ದ.ಕ. ಹಾಗೂ ಉಡುಪಿ
– ದಿನೇಶ್ ಇರಾ