ಮಂಗಳೂರು : ಬ್ಯಾಂಕ್‌ನಿಂದ ವಾಹನ ಸಾಲ ಪಡೆದು ಸರಿಯಾಗಿ ಸಾಲದ ಕಂತು ಮರುಪಾವತಿ ಮಾಡಿದ್ದರೂ ಖಾತೆಯನ್ನು ಎನ್‌ಪಿಎ ಎಂದು ಘೊಷಿಸಿದ್ದಲ್ಲದೆ, ವಾಹನವನ್ನೂ ಮಾರಾಟ ಮಾಡಿದ ಬ್ಯಾಂಕ್‌ನ ಕ್ರಮವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯ ಕಾನೂನಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟು, ದಂಡ ವಿಧಿಸಿದೆ.
ಬ್ಯಾಂಕ್ ಶಾಖೆಯು ದಾನೇಶ್ ಅವರಿಗೆ ನಷ್ಟ ಪರಿಹಾರವಾಗಿ 1 ಲಕ್ಷ ರೂ. ಮೊತ್ತಕ್ಕೆ ಶೇ. 10 ಬಡ್ಡಿ ಸೇರಿಸಿ ನೀಡುವಂತೆ ತೀರ್ಪು ನೀಡಿದ್ದಾರೆ.
ಹಿಂದಿನ ಕಾರ್ಪೋರೆಶನ್ ಬ್ಯಾಂಕ್ ಕಾವೂರು ಶಾಖೆಯಿಂದ ಎಂ.ಎಸ್. ದಾನೇಶ್ ಸಾಲ ಪಡೆದು ವಾಹನ ಖರೀದಿಸಿದ್ದರು. ಇವರ ವಿರುದ್ಧ ಬ್ಯಾಂಕ್(ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ)ನವರು ವಾಣಿಜ್ಯ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ 289/2020ನ್ನು ಸಾಲ ಮರುಪಾವತಿಯ ಆದೇಶಕ್ಕಾಗಿ ಹೂಡಿದ್ದು ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿಸಿಲ್ಲ ಎಂದು ವಾದಿಸಿ ವಾಹನವನ್ನು ಮುಟ್ಟುಗೋಲು ಹಾಕಿ ಮಾರಾಟ ಮಾಡಿದ್ದರು.
ಇದನ್ನೂ ಓದಿ : ಕೊಡಗು : ರೈಲ್ವೇ ಕಂಬಿ ಬೇಲಿಯಲ್ಲಿ ಸಿಲುಕಿ ಪರದಾಡಿದ ಕಾಡಾನೆ
ಎರಡೂ ಪಕ್ಷಗಾರರ ಸಾಕ್ಷ್ಯಾಧಾರ ಗಮನಿಸಿದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ, ಸಾಲಗಾರ ದಾನೇಶ್ ಅವರು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿದ್ದರು. ಅಲ್ಲದೆ ಉಳಿತಾಯ ಖಾತೆಯಿಂದ ಸಾಲದ ಖಾತೆಗೆ ಹಣವನ್ನು ವರ್ಗಾಯಿಸುವಂತೆ ವಿನಂತಿಸಿದ್ದರೂ ಬ್ಯಾಂಕ್ ಕರ್ತವ್ಯ ಮರೆತು ಅವರ ಸಾಲದ ಖಾತೆಯನ್ನು ಎನ್‌ಪಿಎ ಎಂದು ಘೊಷಿಸಿ, ವಾಹನ ಮುಟ್ಟುಗೋಲು ಹಾಕಿರುವುದು ಕಾನೂನಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟರು. ಪ್ರತಿವಾದಿಯ ಪರವಾಗಿ ವಕೀಲ ಕೆ.ಎಸ್. ನಂಬಿಯಾರ್ ಹಾಗೂ ವಿವೇಕ್ ನಂಬಿಯಾರ್ ವಾದಿಸಿದ್ದರು.