Advertisement

ನಕಲಿ ದಾಖಲೆ ಸೃಷ್ಟಿಸಿ ಕಾಲೇಜಿನ ಹೆಸರು ಬದಲಿಸಿ ವಂಚನೆ

11:42 PM Apr 29, 2023 | Team Udayavani |

ಮಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾಲೇಜಿನ ಹೆಸರನ್ನು ಬದಲಾಯಿಸಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್‌, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ (ಸೆನ್‌) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗುರುದೇವ ಎಜುಕೇಶನ್‌ ಫೌಂಡೇಶನ್‌ನ ಅಧ್ಯಕ್ಷ ರಾಮ ಮೋಹನ ರೈ ದೂರು ನೀಡಿದವರು. ಮಹೇಶ್‌ ಫೌಂಡೇಶನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ರತೀಶ್‌ ಬಿ.ಎನ್‌., ಟ್ರಸ್ಟಿಗಳಾದ ನಾರಾಯಣ ಬಿ., ಎಸ್‌. ಸಚ್ಚಿದಾನಂದ ಕುಮಾರ್‌, ರೇಣು ಪರಾಗ್‌ ಓಲಾ, ಪ್ರಜ್ಞ ವಿರಾಜ್‌ ಶೆಟ್ಟಿ ಮತ್ತು ವ್ಯವಸ್ಥಾಪಕ ಪ್ರಶಾಂತ್‌ ಆರೋಪಿಗಳು.

ಪ್ರಕರಣದ ವಿವರ
ಗುರುದೇವ ಎಜುಕೇಶನ್‌ ಫೌಂಡೇಶನ್‌ ಮಠದಕಣಿಯಲ್ಲಿರುವ ಕಟ್ಟಡ ಮತ್ತು ಸ್ಥಳವನ್ನು 2021ರ ಎ. 20ರಂದು 30 ವರ್ಷಗಳ ರಿಜಿಸ್ಟರ್ಡ್‌ ಕರಾರು ಪತ್ರದ ಮುಖಾಂತರ ಪಡೆದಿತ್ತು. ಬಳಿಕ ಮಹೇಶ್‌ ಫೌಂಡೇಶನ್‌ನವರ ವಿನಂತಿಯ ಮೇರೆಗೆ 2021ರ ಸೆ. 3ರಂದು ತಿಂಗಳ ಬಾಡಿಗೆಗೆ ನೀಡಲಾಗಿತ್ತು. ಗುರುದೇವ ಎಜುಕೇಶನ್‌ ಫೌಂಡೇಶನ್‌ ಪಿವಿಎಸ್‌ ಸರ್ಕಲ್‌ ಬಳಿ ಬ್ರಿಲಿಯಂಟ್‌ ಪಿಯು ಕಾಲೇಜನ್ನು ನಡೆಸುತ್ತಿದ್ದು ಹೊಸತಾಗಿ ಶೋನಾ ಪಿಯು ಕಾಲೇಜು ಆರಂಭಿ ಸಲು ಇಲಾಖೆಯಿಂದ ಮಂಜೂರಾತಿ ಪಡೆದಿತ್ತು.

ಕಾಲೇಜಿನ ಹೆಸರು ಬದಲಾವಣೆ
ಇಲಾಖೆ ಆದೇಶ ನೀಡಿದ ವಿಷಯ ತಿಳಿದು ಮಹೇಶ್‌ ಫೌಂಡೇಶನ್‌ನ ಟ್ರಸ್ಟಿಗಳು ಹಾಗೂ ವ್ಯವಸ್ಥಾಪಕರು ಸೇರಿ ನಕಲಿ ಮೊಹರು ಮತ್ತು ದಾಖಲೆಗಳನ್ನು ಸೃಷ್ಟಿಸಿ ಪೋರ್ಜರಿ ಸಹಿ ಮಾಡಿ “ಶೋನಾ ಪಿಯು ಕಾಲೇಜು’ ಹೆಸರನ್ನು “ಮಂಗಳೂರು ಮಹೇಶ್‌ ಪಿಯು ಕಾಲೇಜು’ ಎಂದು ಬದಲಾಯಿಸಲು ಪ.ಪೂ. ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಅನಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ.

ಈ ನಕಲಿ ದಾಖಲೆಯ ಆಧಾರದಲ್ಲಿ “ಶೋನಾ ಪಿಯು ಕಾಲೇಜು’ ಎಂಬುದನ್ನು “ಮಂಗಳೂರು ಮಹೇಶ್‌ ಪಿಯು ಕಾಲೇಜು’ ಎಂದು ಬದಲಾಯಿಸಲಾಗಿದೆ. ಈ ಆಧಾರದಲ್ಲಿ ಮಹೇಶ್‌ ಫೌಂಡೇಶನ್‌ ಸಂಸ್ಥೆಯ ಟ್ರಸ್ಟಿಗಳು ನೂರಾರು ವಿದ್ಯಾರ್ಥಿಗಳನ್ನು ಅನಧಿಕೃತವಾಗಿ ಸೇರ್ಪಡೆಗೊಳಿಸಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ. ಶುಲ್ಕ ಪಡೆದುಕೊಂಡಿದ್ದಾರೆ. ಇದರಿಂದಾಗಿ ಸಂಸ್ಥೆಯ ಪ್ರತಿಷ್ಠೆ ಮತ್ತು ಹೆಸರು ಹಾಳಾಗಿದೆ. ಈ ರೀತಿ ನಕಲಿ ದಾಖಲೆ ಸೃಷ್ಟಿಸಿ ಮಹೇಶ್‌ ಫೌಂಡೇಶನ್‌ ಸಂಸ್ಥೆಯ ಟ್ರಸ್ಟಿಗಳು ವಂಚನೆ ಮಾಡಿದ್ದಾರೆ. ಅಲ್ಲದೆ ಕಳೆದ 10 ತಿಂಗಳಿಂದ ಬಾಡಿಗೆ ಕೊಟ್ಟಿಲ್ಲ. ಬಾಕಿ ಬಾಡಿಗೆ ಮೊತ್ತ 1 ಕೋಟಿ ರೂ.ಗಳಿಗೂ ಅಧಿಕವಾಗಿದೆ. ಅಲ್ಲದೆ ಆರೋಪಿಗಳು ಸಂಸ್ಥೆಯ ಪೀಠೊಪಕರಣಗಳನ್ನು ನಾಶ ಮಾಡಿದ್ದಾರೆ. ಜೀವಬೆದರಿಕೆ ಹಾಕಿದ್ದಾರೆ ಎಂದು ರಾಮ ಮೋಹನ ರೈ ಅವರು ನೀಡಿರುವ ದೂರಿನಂತೆ ಎಫ್ಐಆರ್‌ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next