ಮಂಗಳೂರು: ಭೂ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ತಾಲೂಕುವಾರು ತಂಡಗಳು ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಆ.16ರಿಂದ 21ರೊಳಗೆ ಸ್ಥಳ ಪರಿಶೀಲಿಸಿ ಸಂಭಾವ್ಯ ಭೂಕುಸಿತ ಪ್ರದೇಶಗಳನ್ನು ತಾಂತ್ರಿಕವಾಗಿ ಅಧ್ಯಯನ ಮಾಡಿ ಭೂಕುಸಿತ ತಡೆಯಲು ಸೂಕ್ತ ರಚನೆಗಳನ್ನು ತಯಾರಿಸಲು ಕ್ರಿಯಾ ಯೋಜನೆ ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದ್ದಾರೆ.
ದಿಲ್ಲಿಯ ಎನ್‌ಡಿಎಂಎ ನೀಡಿರುವ ಮಾರ್ಗಸೂಚಿ ಅನುಸಾರ ಭೂಕುಸಿತ ತಡೆಗಟ್ಟುವ ಬಗ್ಗೆ ಕ್ರಿಯಾ ಯೋಜನೆ ಯನ್ನು ಸಿದ್ಧಪಡಿಸಲು ವಿವಿಧ ಇಲಾಖೆ ಅಧಿಕಾರಿಗಳು/ಸದಸ್ಯರನ್ನೊಳಗೊಂಡ ಸಮಿತಿಯ ಸಭೆ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಜರಗಿದ್ದು, ಈ ವೇಳೆ ಕೆಲವು ನಿರ್ಣಯವನ್ನು ಕೈಗೊಳ್ಳಲಾಯಿತು.
ಭೂಕುಸಿತ ತಡೆಗಟ್ಟಲು ಪಿಡಬ್ಲ್ಯುಡಿ, ಪಿಆರ್‌ಇಡಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ರಸ್ತೆ ಬದಿಗಳಲ್ಲಿ ಈಗಾಗಲೇ ಗುಡ್ಡಗಳನ್ನು ಕತ್ತರಿಸಿರುವ ಪ್ರದೇಶಗಳನ್ನು ಜಿಯೋ- ಟ್ಯಾಗ್ಡ್ ಛಾಯಾಚಿತ್ರಗಳನ್ನು ಹಾಗೂ ಆ ಪ್ರದೇಶಗಳಲ್ಲಿರುವ ಮನೆಗಳ/ಜನಸಂಖ್ಯೆ ಮಾಹಿತಿಯನ್ನು ವೆಬ್ ಪೋರ್ಟಲ್‌ನಲ್ಲಿ ಆ.15 ರೊಳಗೆ ದಾಖ ಲಿಸುವಂತೆ ನಿರ್ದೇಶಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭಾವ್ಯ ಭೂಕುಸಿತ ಪ್ರದೇಶಗಳನ್ನು ಗುರುತಿಸುವ ಸಲುವಾಗಿ ಗಮನಿಸ ಬೇಕಾದ ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳಲು ಹಾಗೂ ತುರ್ತಾಗಿ ಭೂಕುಸಿತ ತಡೆಗಟ್ಟಲು ರಚಿಸ ಬಹುದಾದ ರಚನೆಗಳನ್ನು ತಿಳಿಯಲು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕನಿಸಮ್ ಬೆಂಗಳೂರು ವಿಜ್ಞಾನಿಗಳೊಂದಿಗೆ ಚರ್ಚಿಸಲಾಯಿತು.
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯ ಗುರುತಿಸಲಾದ 28 ಸಂಭಾವ್ಯ ಭೂಕುಸಿತ ಪ್ರದೇಶಗಳ ನಕಾಶೆ ಗಳು 1:50000 ಸ್ಕೇಲ್‌ನಲ್ಲಿದ್ದು, ಇವುಗಳ ವಿವರವಾದ ಅಧ್ಯಯನಕ್ಕೆ ಹಾಗೂ ತಾಂತ್ರಿಕ ಶಿಫಾರಸಿಗಾಗಿ 1:10000 ಅಥವಾ 1:1000 ಸ್ಕೇಲ್‌ನಲ್ಲಿ ನಕಾಶೆ ಸಿದ್ಧಪಡಿಸಲು ತೀರ್ಮಾನಿಸಲಾಯಿತು.
ಪ್ರಸ್ತುತ ಸಂಭಾವ್ಯ ಭೂಕುಸಿತ ಪ್ರದೇಶಗಳಲ್ಲಿ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕ್ರಮ ಕೈಗೊಳ್ಳುವಂತೆ ಹಾಗೂ ಅಧ್ಯಯನದ ಬಳಿಕ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳುವಂತೆ ಎನ್‌ಐಆರ್‌ಎಂನ ನಿರ್ದೇಶಕರು ಅಭಿಪ್ರಾಯಿಸಿದರು.
ಕಟ್ಟಡ ನಿರ್ಮಾಣ ಸಮಯದಲ್ಲಿ ಭೂಕುಸಿತವಾಗದಂತೆ ತಡೆಗಟ್ಟಲು ಆವಶ್ಯಕ ಕ್ರಮ ಕೈಗೊಳ್ಳುವ ಕುರಿತು ನಗರ ಯೋಜನೆ ಜಂಟಿ ನಿರ್ದೇಶಕರು, ಮುಡಾ ಆಯುಕ್ತರು, ಕ್ರೆಡಾಯ್ ಸದಸ್ಯರು ಸಮಾಲೋಚಿಸಿ ಮಾರ್ಗಸೂಚಿಯನ್ನು ಸಿದ್ಧಪಡಿಸುವ ಉಸ್ತುವಾರಿಯನ್ನು ಜಿ.ಪಂ. ಸಿಇಒಗೆ ವಹಿಸಲಾಯಿತು.
ಸೇತುವೆ ಸುಸ್ಥಿರತೆಗೆ ಕ್ರಮ
ಜಿಲ್ಲೆಯ ಎಲ್ಲ ಸೇತುವೆಗಳ ಸುಸ್ಥಿರತೆ ಬಗ್ಗೆ ಪರಿಶೀಲಿಸಿ, ದೃಢೀಕರಣವನ್ನು ನೀಡುವಂತೆ ಪಿಡಬ್ಲೂ Âಡಿ, ಪಿಆರ್‌ಇಡಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರ ಸ್ಥಳೀಯ ಸಂಸ್ಥೆಗಳ ಇಲಾಖೆಯ ಕಾರ್ಯಪಾಲಕ ಅಭಿಯಂತರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.