Advertisement

Mangaluru; ಕರಾವಳಿಯ ಋಣ ತೀರಿಸಲು ಸಾಧ್ಯವಿಲ್ಲ:ನಟ ಅನಂತನಾಗ್‌

10:58 PM Sep 03, 2023 | Team Udayavani |

ಮಂಗಳೂರು: ಬಾಲ್ಯದಲ್ಲಿ ಓಡಾಡಿಕೊಂಡಿದ್ದ ಕರಾವಳಿಯಲ್ಲೇ 75ನೇ ವರ್ಷದ ಸಂಭ್ರಮಾಚರಣೆ ಮಾಡಿರುವುದು ಧನ್ಯತೆ, ಸಾರ್ಥಕ್ಯ ಭಾವ ಮೂಡಿಸಿದೆ. ಮಂಗಳಾದೇವಿಯ ಕೃಪೆಯಿಂದಲೇ ಇದು ಸಾಧ್ಯವಾಗಿದ್ದು, ಪ್ರತಿದಿನ ಈ ಕ್ಷಣವನ್ನು ನೆನಪಿಸುವಂತೆ ಮಾಡಿದೆ. ಕರಾವಳಿಯ ಅಭಿಮಾನದ ಈ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ನಟ ಅನಂತನಾಗ್‌ ಹೇಳಿದರು.

Advertisement

ಅನಂತ್‌ನಾಗ್‌-75 ಅಭಿನಂದನ ಸಮಿತಿ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 75ನೇ ಹುಟ್ಟು ಸಂಭ್ರಮ ಮತ್ತು ವೃತ್ತಿ ಜೀವನದ 50ರ ಸಂಭ್ರಮದ ಹಿನ್ನೆಲೆಯಲ್ಲಿ ರವಿವಾರ ನಗರದ ಕೊಡಿಯಾಲಬೈಲ್‌ನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾದ “ಅನಂತ ಅಭಿನಂದನೆ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕಾಸರಗೋಡಿನ ಆನಂದಾಶ್ರಮದಲ್ಲಿ 6 ವರ್ಷ ಕಳೆದಿದ್ದೆ. ಗುರುಗಳೇ ಸಾಕ್ಷಾತ್‌ ದೇವರು ಎನ್ನುವ ವಿಚಾರವನ್ನು ಅಲ್ಲಿ ಕಲಿತಿದ್ದೆ ಎಂದರು. ಇದೇ ವೇಳೆ ಹಾಡು ಮತ್ತು ಡೈಲಾಗ್‌ಗಳ ಮೂಲಕ ರಂಜಿಸಿದರು.

ರಾಜಕಾರಣವೆನ್ನುವ ಪಾತ್ರ!
ರಾಜಕೀಯದಲ್ಲಿ ಸ್ವಲ್ಪ ಸಮಯ ಪಾತ್ರ ಎನ್ನುವ ರೀತಿಯಲ್ಲಿದ್ದೆ. ರಾಜಕಾರಣಿಗಳ ಜೀವನ ಎಷ್ಟು ಕಷ್ಟ ಎನ್ನುವುದು ವಿಧಾನ ಪರಿಷತ್‌ ಸದಸ್ಯನಾಗಿದ್ದಾಗ ತಿಳಿಯಿತು. 90ರ ದಶಕದಲ್ಲಿ ವಿಧಾನಸಭೆಗೆ ಆಯ್ಕೆಯಾದಾಗ ನೈಜತೆ ಅರಿವಾಯಿತು. ಇನ್ನು ವೈಯಕಿಕ್ತ ಜೀವನದ ಕಡೆಗೆ ಯಾವ ಗಮನವನ್ನೂ ಕೊಡಲು ಆಗುವುದಿಲ್ಲ, ರೋಲ್‌ ಮುಗಿಯಿತು ಎಂದು ರಾಜಕಾರಣದಿಂದ ಹಿಂದೆ ಸರಿದೆ ಎಂದರು.ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಅವರು ಮಾತನಾಡಿ, ಅನಂತ ನಾಗ್‌ ಅವರು ರಾಜ್ಯದ ಸ್ವಾಭಿಮಾನದ ವ್ಯಕ್ತಿತ್ವ.

ಕಾಲ ನಿರ್ಣಾಯಕರಾಗಿದ್ದು, ನಾವು “ಅನಂತನಾಗ್‌ ಕಾಲದಲ್ಲಿ’ ಇದ್ದವರು ಎಂದು ಗೌರವದಿಂದ ಹೇಳಬಹುದು. ಪಾತ್ರಕ್ಕೆ ಜೀವ ಕೊಡುವ ನಟ, ಕರ್ನಾಟಕದ ಅಮಿತಾಭ್‌ ಬಚ್ಚನ್‌ ಎಂದರು.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಶಂಕರ್‌ನಾಗ್‌ ಅವರಲ್ಲಿ ನಿರ್ದೇಶಕನ ಕೌಶಲವಿದ್ದರೆ, ಅನಂತನಾಗ್‌ ಉತ್ತಮ ನಾಯಕ ನಟ. ಸಹಜ ನಟನೆ ಅವರ ವಿಶೇಷತೆಯಾಗಿದ್ದು, ಆದರಿಂದಲೇ ಯಶಸ್ಸು ಕಂಡಿದ್ದಾರೆ ಎಂದರು.

ಚಲನಚಿತ್ರ ನಟ ರಿಷಭ್‌ ಶೆಟ್ಟಿ ಮಾತನಾಡಿ, ಚಲನಚಿತ್ರ ರಂಗದ 50 ವರ್ಷ ಮಹಾನ್‌ ಸಾಧನೆಗೆ ದಾದಾ ಸಾಹೇಬ್‌ ಪಾಲ್ಕೆ, ಪದ್ಮವಿಭೂಷಣ ಸಿಗಬೇಕಿತ್ತು. ಅನಂತನಾಗ್‌ ಅವರಿಗೆ ಸಂದಾಗ ಮಾತ್ರ ಪ್ರಶಸ್ತಿಗೆ ಗೌರವ ಸಿಗುವುದು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ಅನಂತನಾಗ್‌ ನಟನೆಯ ಬಳಿಕ, ಕಾಸರಗೋಡಿನ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರು ಬಂದರೆ ಧ್ವನಿ ಎತ್ತುವ ಮಟ್ಟಕ್ಕೆ ಹೋಗಿದೆ. ಅವರು ನಟನೆ ಎಷ್ಟು ಪರಿಣಾಮ ಬೀರಿದೆ ಎನ್ನುವುದನ್ನು ಯೋಚಿಸಬಹುದು ಎಂದರು.

ಪತ್ನಿ ಗಾಯತ್ರಿ ಅನಂತನಾಗ್‌, ಪುತ್ರಿ ಅದಿತಿ, ಅಳಿಯ ವಿವೇಕ್‌, ಶಾಸಕ ವೇದವ್ಯಾಸ ಕಾಮತ್‌, ನಟ ಡಾ| ದೇವದಾಸ್‌ ಕಾಪಿಕಾಡ್‌, ಉದ್ಯಮಿ ವಾಸುದೇವ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ್‌ ನಾಯಕ್‌, ಕರ್ನಾಟಕ ಮಾಧ್ಯಮ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯಕ್ರಮ ಸಂಚಾಲಕ ಗೋಪಿನಾಥ ಭಟ್‌, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಗಿರಿಧರ ಶೆಟ್ಟಿ, ರಂಗ ಸಂಗಾತಿ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ, ನರೇಶ್‌ ಶೆಣೈ ಉಪಸ್ಥಿತರಿದ್ದರು.

ಶಶಿರಾಜ್‌ ಕಾವೂರು ಪ್ರಸ್ತಾವನೆಗೈದರು. ಪತ್ರಕರ್ತ ಮನೋಹರ ಪ್ರಸಾದ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next