Advertisement

ಮಂಗಳೂರು ಗಲಭೆ ಪೂರ್ವಯೋಜಿತ: ನಳಿನ್‌ ಕುಮಾರ್‌ ಕಟೀಲ್‌

09:59 AM Dec 25, 2019 | Team Udayavani |

ಬೆಂಗಳೂರು: ಮಂಗಳೂರು ಗಲಭೆ ಪೂರ್ವಯೋಜಿತ ಎಂಬುದು ಬಹಿರಂಗವಾಗಿದೆ. ಈ ಗಲಭೆ ಹಿಂದೆ ಎಸ್‌ಡಿಪಿಐ, ಪಿಎಫ್ಐ, ಯುಡಿಎಫ್, ಕಾಂಗ್ರೆಸ್‌ನ ಕೈವಾಡವಿದ್ದು, ಕಾಂಗ್ರೆಸ್‌ ಉತ್ತರ ನೀಡಬೇಕು. ಎಸ್‌ಡಿಪಿಐ, ಯುಡಿಎಫ್ ಸಂಘಟನೆಗಳನ್ನು ನಿಷೇಧಿಸಬೇಕು ಎಂಬುದು ನಮ್ಮ ಬೇಡಿಕೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಆಗ್ರಹಿಸಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಗಲಭೆ ಪೂರ್ವಯೋಜಿತ ಎಂಬ ನಮ್ಮ ಹೇಳಿಕೆ ಸಿಸಿಟಿವಿ ದೃಶ್ಯಾವಳಿಗಳಿಂದ ಸ್ಪಷ್ಟವಾಗಿದೆ. ದೊಣ್ಣೆ, ಲಾಠಿ ಹಿಡಿದು ಮುಖ ಮುಚ್ಚಿಕೊಂಡು ಪ್ರತಿಭಟನೆ ನಡೆಸುವ ಅಗತ್ಯವೇನು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕಿದೆ. ಅದಕ್ಕೆ ವಿರೋಧವಿಲ್ಲ. ಆದರೆ ಪ್ರತಿಭಟನೆ ಹೆಸರಿನಲ್ಲಿ ದಾಂಧಲೆ ಮಾಡುವುದು ಕಾನೂನಿಗೆ ವಿರುದ್ಧ ಎಂದು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾನಾ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಮಂಗಳೂರಿನಲ್ಲಿ ಗಲಭೆಯಾಗುವ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸ್‌ ಇಲಾಖೆ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿತು. ಬಳಿಕ ಪೊಲೀಸ್‌ ಆಯುಕ್ತರು ಎಲ್ಲ ಸಂಘಟನೆಗಳ ಮುಖಂಡರನ್ನು ಕರೆಸಿ ಮನವಿ ಮಾಡಿದರು. ಅದರಂತೆ ಪ್ರತಿಭಟನೆ ಹಿಂಪಡೆದು ನಿಷೇಧಾಜ್ಞೆ ಅವಧಿ ಮುಗಿದ ಬಳಿಕ ಪ್ರತಿಭಟನೆ ನಡೆಸುವುದಾಗಿ ಎಲ್ಲ ಮುಸ್ಲಿಂ ಸಂಘಟನೆಗಳು ತಿಳಿಸಿದ್ದವು. ಆದರೂ ಮರುದಿನ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುವ ಕಾರ್ಯ ನಡೆಯಿತು ಎಂದವರು ಆರೋಪಿಸಿದರು.

ಕಾಶ್ಮೀರ ಶೈಲಿಯಲ್ಲಿ ಆಕ್ರಮಣ
ಆ ಪ್ರತಿಭಟನೆಯಲ್ಲಿ ಕಾಶ್ಮೀರ ಶೈಲಿಯಲ್ಲಿ ಪೊಲೀಸರ ಮೇಲೆ ಆಕ್ರಮ ನಡೆಯಿತು. ಗಲಭೆ ನಡೆಸಲು ಹೊರ ರಾಜ್ಯದ ಜನರು ಬಂದಿದ್ದಾರೆ ಎಂದು ನಾವು ಹೇಳಿದ್ದೆವು. ಇದೀಗ ಸಿಸಿಟಿವಿ ದೃಶ್ಯಾವಳಿಗಳಿಂದ ಸ್ಪಷ್ಟವಾಗಿದೆ. ಇದರ ಹಿಂದೆ ಕಾಂಗ್ರೆಸ್‌ ಕೈವಾಡವಿದೆ.

ಹೇಗೆಂದರೆ ಗಲಭೆ ನಡೆದ ಮುನ್ನಾ ದಿನ ಮಾಜಿ ಸಚಿವರು, ವಕೀಲರು, ಕಾನೂನು ತಿಳಿದವರು ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕರ್ನಾಟಕಕ್ಕೆ ಬೆಂಕಿ ಬೀಳುತ್ತದೆ ಎಂದು ಹೇಳಿದ್ದರು. ಹಾಗಾಗಿ ಅವರಿಗೆ ಮೊದಲೇ ಈ ಬಗ್ಗೆ ಅಂದಾಜು ಇತ್ತು, ಗಲಭೆಯ ವಾಸನೆ ಇತ್ತು ಎಂದು ನನಗೆ ಅನ್ನಿಸುತ್ತದೆ. ಅಲ್ಲದೇ ಅವರು ಪೂರ್ವ ತಯಾರಿ ಮಾಡಿದ್ದರೆ ಎಂಬ ಪ್ರಶ್ನೆ ಮೂಡುತ್ತದೆ. ಕಾಂಗ್ರೆಸ್‌ ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

Advertisement

2017ರಲ್ಲಿ ತಾವು ಮಂಗಳೂರಿಗೆ ಬೆಂಕಿ ಹಚ್ಚುತ್ತೇವೆ ಎಂಬ ಹೇಳಿಕೆ ನೀಡಿದ್ದ ಪರಿಣಾಮವೇ ಗಲಭೆ ನಡೆದಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ನಳಿನ್‌ ಕುಮಾರ್‌ ಕಟೀಲು, ಆಗ ನಾನು ಸಾಂದರ್ಭಿಕವಾಗಿ ಹೇಳಿದ್ದೆ. ಬಾಯಿ ತಪ್ಪಿ ಹೇಳಿದ್ದಕ್ಕೆ ಕ್ಷಮೆ ಕೇಳಿದ್ದೇನೆ. ಅದು ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ ಎಂದರು.

ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರು ಸರಕಾರದ ಆಸ್ತಿಪಾಸ್ತಿ ಹಾನಿ ಮಾಡಿದರೆ, ಸಾರ್ವಜನಿಕ ಸೊತ್ತನ್ನು ನಾಶಪಡಿಸಿದರೆ ಕ್ರಮ ಕೈಗೊಳ್ಳಿ ಎಂಬ ಅರ್ಥದಲ್ಲಿ ಕಂಡಲ್ಲಿ ಗುಂಡಿಕ್ಕಿ ಎಂದು ಹೇಳಿದ್ದಾರೆ. ಹಾಗೆಂದು ಅವರ ಹೇಳಿಕೆಯನ್ನು ನಾನು ಸಮರ್ಥಿಸುವುದಿಲ್ಲ ಮತ್ತು ಇಂಥದಕ್ಕೆಲ್ಲ ನನ್ನ ಒಪ್ಪಿಗೆ ಇಲ್ಲ ಎಂದರು.

ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರಕಾರ 10 ಲ. ರೂ. ಪರಿಹಾರ ನೀಡಿರುವುದು ಮುಖ್ಯಮಂತ್ರಿಗಳ ತೀರ್ಮಾನ ಎಂದು ನಳಿನ್‌ ಕುಮಾರ್‌ ಕಟೀಲು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next