ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ವಾಮಂಜೂರಿನ ನಿಶಾಂತ್ ಶೆಟ್ಟಿ(35) ಬಂಧಿತ ಆರೋಪಿ.
ಈತ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿಸಿಕೊಂಡು ಮಂಗಳೂರು ನಗರಕ್ಕೆ ರೈಲಿನಲ್ಲಿ ಸಾಗಾಟ ಮಾಡಿಕೊಂಡು ಮಂಗಳೂರಿನ ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ತೊಕ್ಕೊಟ್ಟು ಒಳಪೇಟೆಯ ಕೃಷ್ಣನಗರ ಪರಿಸರದಲ್ಲಿ ಗೂಡ್ಸ್ ಟೆಂಪೋವೊಂದರಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿ ಸಾಗಿಸುತ್ತಿದ್ದ 1,50,000 ರೂ. ಮೌಲ್ಯದ 6 ಕೆಜಿ 325 ಗ್ರಾಂ ಗಾಂಜಾವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್‌ಎಚ್ ಎಂ, ಪಿಎಸ್‌ಐ ಬಸವರಾಜಪ್ಪ ಮತ್ತು ಸಿಸಿಬಿ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಯ ವಿರುದ್ಧ ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅಕ್ರಮ ಪಿಸ್ತೂಲ್ ಹೊಂದಿದ ಪ್ರಕರಣ, ಕಳವು ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ ಸರಕಳ್ಳತನ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ವಿಟ್ಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಮತ್ತು ಕಳ್ಳತನ ಪ್ರಕರಣ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹೀಗೆ ಒಟ್ಟು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Sushil Rinku: ಆಪ್‌ನ ಏಕೈಕ ಸಂಸದ ಸುಶೀಲ್ ರಿಂಕು ಬಿಜೆಪಿ ಸೇರ್ಪಡೆ