ಮಂಗಳೂರು: ಭಾರತ್ ಬಂದ್ ಗೆ ಉತ್ತರ ಕರ್ನಾಟಕ ಸೇರಿದಂತೆ ಮಂಗಳೂರು, ಉಡುಪಿ, ಕುಂದಾಪುರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಹಾಗೂ ಸರ್ಕಾರಿ ಬಸ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಮತ್ತೊಂದೆಡೆ ಮಂಗಳೂರಿನಲ್ಲಿ ಬಸ್ ಹಾಗೂ ಹೋಟೆಲ್ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ಸೋಮವಾರ ನಡೆದಿದೆ.
ಜ್ಯೋತಿ ಸರ್ಕಲ್ ಹಾಗೂ ಕುಲಶೇಖರದಲ್ಲಿ ಟಯರ್ ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬಲ್ಮಠ ಸಮೀಪ ಬಸ್ ಗೆ ಕಲ್ಲುತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ.
ಏತನ್ಮಧ್ಯೆ ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬಂದ ದುಷ್ಕರ್ಮಿಯೊಬ್ಬ ಕದ್ರಿಯ ಶಿವಭಾಗ್ ರೆಸ್ಟೋರೆಂಟ್ ಮೇಲೆ ಕಲ್ಲುತೂರಾಟ ನಡೆಸಿದ್ದು, ರೆಸ್ಟೋರೆಂಟ್ ನ ಕಿಟಕಿ ಗಾಜು ಪುಡಿ,ಪುಡಿಯಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ರೆಸ್ಟೋರೆಂಟ್ ಮಾಲಕರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದು, ಸಂಚಾರ ಬಿಕೋ ಎನ್ನುತ್ತಿದೆ. ಬೆಂಗಳೂರು ಸೇರಿದಂತೆ ದೂರ ಪ್ರಯಾಣದ ಬಸ್ ಗಳು ನಗರಕ್ಕೆ ಆಗಮಿಸುತ್ತಿವೆ ಎಂದು ವರದಿ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಕೆಎಸ್ ಆರ್ ಟಿಸಿ ಮೇಲೆ ಕಲ್ಲುತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ. ಕೆಲವೆಡೆ ಬಲವಂತದಿಂದ ಬಂದ್ ಮಾಡಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ.