Advertisement

‘ಸಮತೂಕದ ಆಹಾರ, ವ್ಯಾಯಾಮದಿಂದ ಆರೋಗ್ಯ’

06:25 AM Jan 21, 2019 | Team Udayavani |

ಮಹಾನಗರ: ಬದಲಾದ ಜೀವನ ಶೈಲಿಯಿಂದ ಆಹಾರ ಕ್ರಮ ಹಾಗೂ ಶಾರೀರಿಕ ಚಟವಟಿಕೆಗಳಲ್ಲಿ ಏರುಪೇರುಗಳಾಗಿವೆ. ಇದರಿಂದ ನೂರೆಂಟು ಕಾಯಿಲೆಗಳು ನಮ್ಮನ್ನು ಅರಸಿಕೊಂಡು ಬರುತ್ತಿವೆ. ಆದ್ದರಿಂದ ಸಮತೂಕದ ಆಹಾರ ಹಾಗೂ ವ್ಯಾಯಾಮ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಅತೀ ಅಗತ್ಯ ಎಂದು ಉಡುಪಿ ಎಸ್‌.ಡಿ.ಎಂ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಶ್ರೀನಿವಾಸ ಆಚಾರ್ಯ ಅಭಿಪ್ರಾಯಪಟ್ಟರು.

Advertisement

ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಪುತ್ತೂರು ಶ್ರೀ ಸರಸ್ವತಿ ಚಾರಿಟೆಬಲ್‌ ಟ್ರಸ್ಟ್‌ ಸಹಯೋಗದಲ್ಲಿ ರವಿವಾರ ಶಾರದಾ ವಿದ್ಯಾಲಯದಲ್ಲಿ ನಡೆದ ಆಹಾರೋತ್ಸವ, ಆಯುರ್ವೇದ ಚಿಕಿತ್ಸೆ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ವೇಗದ ಜೀವನ ಶೈಲಿಗೆ ಹೊಂದಿಕೊಂಡಿರುವವರು ದೈನಂದಿನ ಚಟುವಟಿಕೆಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಿ ದರೆ ಉತ್ತಮ ಆರೋಗ್ಯವನ್ನು ತಮ್ಮದಾಗಿ ಸಿಕೊಳ್ಳಬಹುದು. ಅನಿಯಮಿತ ಆಹಾರವು ದೇಹದ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಪದ್ಧತಿ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಹಾಗೂ ಶಾರೀರಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಸನಾತನ ಮೌಲ್ಯಗಳಿಗೆ ಮತ್ತೆ ಜೀವ
ಮುಖ್ಯ ಅತಿಥಿಯಾಗಿದ್ದ ಶ್ರೀ ಸರಸ್ವತಿ ಚಾರಿಟೆಬಲ್‌ ಟ್ರಸ್ಟ್‌ ನ ಮ್ಯಾನೇಜಿಂಗ್‌ ಟ್ರಸ್ಟಿ, ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಮಾತನಾಡಿ, ಒಂದೊಮ್ಮೆ ಮಾನ್ಯತೆ ಕಳೆದುಕೊಳ್ಳುವ ಭಯ ಹೊಂದಿದ್ದ ಭಾರತದ ಸನಾತನ ಮೌಲ್ಯಗಳಿಗೆ ಮತ್ತೆ ಜೀವ ಬರತೊಡಗಿದೆ. ಯೋಗ ಜಗತ್ತಿನ ಎಲ್ಲ ದೇಶಗಳಲ್ಲೂ ಸ್ಥಾನ ಪಡೆದುಕೊಳ್ಳುತ್ತಿರುವ ಇದಕ್ಕೊಂದು ಉತ್ತಮ ಉದಾಹರಣೆ ಎಂದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಹತ್ವ
ಉಡುಪಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯ ಡಾ| ಮಹಮ್ಮದ್‌ ರಫೀಕ್‌ ಅವರು ನಿತ್ಯ ಜೀವನದಲ್ಲಿ ಆಹಾರ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಹತ್ವ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು. ಕೆ.ಎಸ್‌. ಕಲ್ಲೂರಾಯ, ಪ್ರದೀಪ್‌ ಕುಮಾರ್‌ ಕಲ್ಕೂರ, ಡಾ| ರವಿ ಗಣೇಶ್‌, ರಾಜೇಶ್‌ ಪಾದೆಕಲ್ಲು ಮೊದಲಾದವರು ಉಪಸ್ಥಿತರಿದ್ದರು. ದಯಾನಂದ ಕಟೀಲು ನಿರೂಪಿಸಿದರು.

Advertisement

ಆರೋಗ್ಯ ಕಾಳಜಿ ಅಗತ್ಯ
ವೇಗದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ತೋರುವುದನ್ನು ಮರೆತ್ತಿದ್ದೆವು. ಇದೀಗ ಅದರ ಬೆಲೆ ಅರಿವಾಗತೊಡಗಿದೆ. ಆ ಕಾರಣಕ್ಕೆ ಹಿರಿಯರು ಬಳಸುತ್ತಿದ್ದ ಸಾವಯವ ಆಹಾರಗಳಿಗೆ ಈಗ ಹೆಚ್ಚಿನ ಪ್ರಾಶಸ್ತ್ಯ ಬರುತ್ತಿದೆ. ಆರೋಗ್ಯದಿಂದ ಸಕಲವೂ ಲಭ್ಯ. ಹಾಗಾಗಿ ಆರೋಗ್ಯದ ಕಾಳಜಿ ಅಗತ್ಯ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಹೇಳಿದರು.

ಶಿಬಿರದ ವಿಶೇಷತೆ
ಶಿಬಿರದಲ್ಲಿ ಸಾವಯವ ಉತ್ಪನ್ನಗಳ ಮಾರಾಟ, ತಜ್ಞ ವೈದ್ಯರಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಾತ್ಯಕ್ಷಿಕೆ, ಉಪನ್ಯಾಸ, ಉಚಿತ ಆಯುರ್ವೇದ ಚಿಕಿತ್ಸೆ , ಔಷಧಗಳ ವಿತರಣೆ, ಪ್ರಕೃತಿ ಚಿಕಿತ್ಸಾ ಆಹಾರದ ವೈವಿಧ್ಯತೆಗಳ ತಯಾರಿಸುವ ವಿಧಾನ ಮತ್ತು ಸವಿಯುವ ಅವಕಾಶ, ಖಾದಿ ಬಟ್ಟೆಗಳ ಮಾರಾಟ, ವಿವಿಧ ಮಾರಾಟ ಮಳಿಗೆಗಳು ಹಾಗೂ ಸಾವಯವ ಉತ್ಪನ್ನಗಳ ಮಾರಾಟ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next