Advertisement

ಲಾರ್ವಾ ಬೇಟೆ: ಬೂತ್‌ ಮಟ್ಟದಲ್ಲಿ ತಂಡ ರಚಿಸಿ ಜಾಗೃತಿಗೆ ಕ್ರಮ

11:46 AM Aug 02, 2019 | Team Udayavani |

ವಿಶೇಷ ವರದಿ
ಸ್ಟೇಟ್ ಬ್ಯಾಂಕ್ :
ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿ ಲಾರ್ವಾ ಭೇಟೆಗೆ ದ.ಕ. ಜಿಲ್ಲಾಡಳಿತಕ್ಕೆ ಮಂಗಳೂರಿನ ಶಾಸಕರಿಬ್ಬರು ಸಾಥ್‌ ನೀಡಿದ್ದಾರೆ. ಶಾಸಕ ರಾದ ಡಿ. ವೇದವ್ಯಾಸ ಕಾಮತ್‌ ಮತ್ತು ಡಾ| ವೈ. ಭರತ್‌ ಶೆಟ್ಟಿ ಅವರು, ಬೂತ್‌ ಮಟ್ಟದಲ್ಲಿ ಯುವಕರ ತಂಡ ರಚಿಸಿ ಲಾರ್ವಾದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿ ಜನಸಾಮಾನ್ಯರಿಗೆ ಲಾರ್ವಾ ನಾಶ ಪಡಿಸುವ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಡೆಂಗ್ಯೂ ನಿಯಂತ್ರಣ-ಅಧಿಕಾರಿಗಳ ಸಭೆ ಯಲ್ಲಿ, ಶಾಸಕರಿಬ್ಬರು ಯುವಕರ ತಂಡ ರಚಿಸಿ ಜಾಗೃತಿ ಕಾರ್ಯ ನಡೆಸುವ ಬಗ್ಗೆ ತಿಳಿಸಿದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತ ನಾಡಿ, ಡೆಂಗ್ಯೂ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಈಗಾಗಲೇ ಎಲ್ಲ ರೀತಿಯ ಪೂರಕ ಕ್ರಮ ಗಳನ್ನು ಕೈಗೊಳ್ಳುತ್ತಿದೆ. ಆದರೆ ಜನರು ಜಾಗೃತರಾಗದ ಹೊರತು ನಿಯಂತ್ರಣ ಅಸಾಧ್ಯ. ಮನೆಯ ಪ್ರತಿ ಕೋಣೆಗಳಿಂದ ಹಿಡಿದು, ಬಚ್ಚಲು ಮನೆ, ಅಡುಗೆ ಕೋಣೆ, ಮನೆ ಸುತ್ತಮುತ್ತ, ಸನಿಹದ ಪರಿಸರ, ರಸ್ತೆಗಳಲ್ಲಿ ನೀರು ನಿಲ್ಲದಂತೆ ಜನ ಜಾಗೃತೆ ವಹಿಸಬೇಕು. ನೀರು ನಿಂತಿರುವುದು ಕಂಡು ಬಂದಲ್ಲಿ ತತ್‌ಕ್ಷಣ ಅದನ್ನು ಶುಚಿಗೊಳಿಸಬೇಕು ಎಂದರು.

ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೂತ್‌ ಮಟ್ಟದಲ್ಲಿ ಯುವಕರ ತಂಡ ರಚಿಸಿ ಅವರಿಂದ ಜನಸಾಮಾನ್ಯರಿಗೆ ಜಾಗೃತಿ ನೀಡುವ ಕೆಲಸವನ್ನು ತತ್‌ಕ್ಷಣದಿಂದಲೇ ಮಾಡಲಾಗುವುದು. ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬೂತ್‌ಗೆ ಇಬ್ಬರಂತೆ ವಾರ್ಡ್‌ ಮಟ್ಟದಲ್ಲಿ 10 ಮಂದಿಯ ತಂಡವನ್ನು ರಚಿಸಿ ಮನೆ ಮನೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು ಎಂದು ಡಾ| ವೈ. ಭರತ್‌ ಶೆಟ್ಟಿ ತಿಳಿಸಿದರು.

Advertisement

ವೈದ್ಯ ಡಾ| ಶ್ರೀನಿವಾಸ ಕಕ್ಕಿಲ್ಲಾಯ ಮತ್ತಿತರರು ಮಾತನಾಡಿ, ಶಾಸಕರ ನೇತೃತ್ವದಲ್ಲಿ ಬೂತ್‌, ವಾರ್ಡ್‌ ಮಟ್ಟದಲ್ಲಿ ತಂಡಗಳನ್ನು ರಚಿಸಿ ಜನಸಾಮಾನ್ಯರಿಗೆ ಈ ಬಗ್ಗೆ ಜಾಗೃತಿ ಮೂಡಿಸಿದರೆ ಡೆಂಗ್ಯೂಗೆ ಕಾರಣವಾಗುವ ಲಾರ್ವಾ ನಾಶ ಪಡಿಸಲು ಪರಿಣಾಮಕಾರಿ ಹೆಜ್ಜೆ ಇರಿಸಲು ಸಾಧ್ಯ ಎಂದರು. ಸ್ಪಂದಿಸಿದ ಶಾಸಕರು, ಮುಂದಿನ ಎರಡು ದಿನಗಳೊಳಗೆ ಬೂತ್‌, ವಾರ್ಡ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿಕೊಂಡು ಅವರಿಗೆ ಪಾಲಿಕೆಯಿಂದ ತರಬೇತಿ ಕೊಡಿಸಿ, ರವಿವಾರದಿಂದ ಮನೆ ಮನೆ ಜಾಗೃತಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

58 ಗ್ರಿಡ್‌ಗಳಲ್ಲಿ ಲಾರ್ವಾ ನಾಶ
ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ಮಾತನಾಡಿ, ಡೆಂಗ್ಯೂ ನಿರ್ಮೂಲನೆ ಸಂಬಂಧಿಸಿ ಜು. 18ರಿಂದಲೇ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕೆಲಸ ಆರಂಭವಾಗಿದೆ. ಲಾರ್ವಾ ಉತ್ಪತ್ತಿ ತಾಣಗಳೆಂದು ಗುರುತಿಸಲಾಗಿರುವ ಪ್ರದೇಶಗಳನ್ನು 120 ಗ್ರಿಡ್‌ಗಳನ್ನಾಗಿಸಿ ಕೆಲಸ ಮಾಡಲಾಗಿದ್ದು, ಈಗಾಗಲೇ 58 ಗ್ರಿಡ್‌ಗಳಲ್ಲಿ ಮನೆಗಳಿಗೆ ಭೇಟಿ ನೀಡಿ ಜಾಗೃತಿ, ಲಾರ್ವಾ ನಾಶ ಕಾರ್ಯ ನಡೆದಿದೆ. ಈ ಕೆಲಸ ಮುಂದುವರಿಯಲಿದೆ ಎಂದರು.

ಲಾರ್ವಾ ನಾಶ ಮಾಡದ ಶಿಕ್ಷಣ ಸಂಸ್ಥೆಗಳಿಗೆ ದಂಡ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮನಪಾ, ರೆಡ್‌ಕ್ರಾಸ್‌, ಸರಕಾರೇತರ ಸಂಸ್ಥೆಗಳ ಸಹಯೋಗ ದೊಂದಿಗೆ ಈಗಾಗಲೇ 30,493 ಮನೆಗಳಿಗೆ ಭೇಟಿ ನೀಡಿ ಪರಿಶೀಲಿ ಸಲಾಗಿದೆ. ಈ ಪೈಕಿ 3,500 ಮನೆಗಳಲ್ಲಿ ಲಾರ್ವಾ ಉತ್ಪತ್ತಿ ಪತ್ತೆ ಯಾಗಿದ್ದು, ನಾಶ ಪಡಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಗೂ ಲಾರ್ವಾ ನಾಶಕ್ಕೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದ್ದು, ವಿಫ‌ಲವಾಗಿರುವ ಶಿಕ್ಷಣ ಸಂಸ್ಥೆಗಳಿಗೆ ದಂಡ ವಿಧಿಸಲಾಗುವುದು ಎಂದರು.

380 ಮಂದಿ ಗುಣಮುಖ
ಜಿಲ್ಲೆಯಲ್ಲಿ ಈವರೆಗೆ 581 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಈ ಪೈಕಿ 380 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ 170ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಈ ವಾರದಿಂದ ಪ್ರತಿ ರೋಗಿಯ ದೂರವಾಣಿ ಸಂಖ್ಯೆಯನ್ನು ಆಸ್ಪತ್ರೆಗಳಿಂದ ಪಡೆದು ರೋಗಿಯ ಜತೆ ನಿರಂತರ ಸಂಪರ್ಕ ಇರಿಸಿಕೊಳ್ಳಲಾಗುವುದು. ಅವರ ಯೋಗಕ್ಷೇಮ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಕುರಿತು ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದು ಶಶಿಕಾಂತ್‌ ಸೆಂಥಿಲ್ ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌, ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌, ವೆನ್ಲಾಕ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ, ಮನಪಾ ಉಪ ಆಯುಕ್ತೆ ಗಾಯತ್ರಿ ನಾಯಕ್‌, ಎಸಿ ರವಿಚಂದ್ರ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.

ಪೂರ್ಣಕಾಲಿಕ ವೈದ್ಯರ ನೇಮಕಕ್ಕೆ ಕ್ರಮ

ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಪಾಲಿಕೆಯಲ್ಲಿ ಪೂರ್ಣಕಾಲಿಕ ವೈದ್ಯರನ್ನು ನೇಮಿಸುವ ಬಗ್ಗೆ ಚಿಂತಿಸಿರುವುದಾಗಿ ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದ್ದಾರೆ.

ದ.ಕ. ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯಕ್ತ ಮೊಹಮ್ಮದ್‌ ನಝೀರ್‌ ಅವರೊಂದಿಗೆ ಚರ್ಚಿಸಿ ಪಾಲಿಕೆಯ ಮಲೇರಿಯಾ ಸೆಲ್ಗೆ ಪೂರ್ಣಕಾಲಿಕ ವೈದ್ಯರನ್ನು ನೇಮಿಸಲಾಗುವುದು. ಒಂದು ವೇಳೆ ಸರಕಾರದ ಕಡೆಯಿಂದ ಸಹಕಾರ ಅಗತ್ಯ ಬಿದ್ದಲ್ಲಿ ಸರಕಾರದ ಗಮನ ಸೆಳೆಯಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ನಗರದಲ್ಲಿ ಯಾವುದೇ ರೋಗ ಅಥವಾ ಕಾಯಿಲೆಯಂತಹ ದುರ್ಘ‌ಟನೆಗಳು ನಡೆದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಅದಕ್ಕೆ ಮೊದಲೇ ಸೂಕ್ತ ಕ್ರಮ ಕೈಗೊಳ್ಳುವುದು ಆವಶ್ಯಕತೆ ಇದೆ. ವೈದ್ಯರನ್ನು ನೇಮಿಸಿದ ಅನಂತರ ಅವರು ಮಳೆಗಾಲದ ಪೂರ್ವ ಮತ್ತು ಇನ್ನಿತರ ಸಮಯದಲ್ಲಿಯೂ ಜನರು ವೈದ್ಯರನ್ನು ಸಂಪರ್ಕಿಸುವಂತೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ತಾಣದಲ್ಲೂ ಮಾಹಿತಿ ನೀಡಿ
ನಗರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸರ್ವ ರೀತಿಯಲ್ಲಿ ಸಹಕಾರ ನೀಡಲಾಗುವುದು. ಯಾವುದೇ ಸಮಸ್ಯೆಗಳಿದ್ದರೆ ತಮ್ಮ ಫೇಸ್ಬುಕ್‌ ಪೇಜ್‌ನಲ್ಲಿ ಜನರು ಮಾಹಿತಿ ನೀಡಬಹುದು. ಫೋನ್‌ ಮುಖಾಂತರ ಅಥವಾ ತಮ್ಮ ಕಚೇರಿಗೆ ಬಂದು ಮಾಹಿತಿ ನೀಡಬಹುದು. ಮನಪಾದ ಸಹಾಯವಾಣಿ ಸಂಖ್ಯೆ 2220306ಗೆ ಕರೆ ಮಾಡಿ ತಿಳಿಸಬಹುದು ಎಂದು ಶಾಸಕ ಕಾಮತ್‌ ತಿಳಿಸಿದ್ದಾರೆ.

ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಅಗತ್ಯ
ಡೆಂಗ್ಯೂನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಮನೆಗೆ ಬುಧವಾರ ಭೇಟಿ ನೀಡಿದ್ದಾಗ ಮನೆಯ ಹೊರಗಡೆ ಗೋಣಿ ಚೀಲದಲ್ಲಿ ಎಳನೀರು ಚಿಪ್ಪು ರಾಶಿ ಹಾಕಲಾಗಿತ್ತು. ಇಂತಹ ವಸ್ತುಗಳಲ್ಲಿ ಶೇಖರಣೆಯಾಗುವ ಸ್ವಚ್ಛ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗಿ ಡೆಂಗ್ಯೂಗೆ ಕಾರಣವಾಗುತ್ತಿದೆ. ಈ ಬಗ್ಗೆ ಜನರಿಗೆ ಅರಿವು ಅಗತ್ಯ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next