Advertisement

ಮಂಗಳೂರಿನಲ್ಲಿ ಅಮ್ಮ; ಪ್ರವಚನ, ಸತ್ಸಂಗ, ಅನುಗ್ರಹ ದರ್ಶನ 

05:32 AM Mar 09, 2019 | |

ಮಹಾನಗರ: ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಾದ ಸದ್ಗುರು ಶ್ರೀ ಮಾತಾ ಅಮೃತಾ ನಂದಮಯಿ ದೇವಿ (ಅಮ್ಮ) ಅವರು ಶುಕ್ರವಾರ ನಗರದ ಸುಲ್ತಾನ್‌ಬತ್ತೇರಿಯ ಅಮೃತ ವಿದ್ಯಾಲಯಂ ಮೈದಾನದಲ್ಲಿ ಆಯೋಜಿಸಲಾದ ‘ಅಮೃತ ಸಂಗಮ -2019’ರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಶ್ರದ್ಧೆಯಿಂದ ಪಾಲ್ಗೊಂಡರು. ಶನಿವಾರವೂ ಅಮೃತ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಅಮ್ಮನವರು ಅನುಗ್ರಹ ದರ್ಶನ ನೀಡಲಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ ನಡೆದ ಸಭೆಯಲ್ಲಿ ಸುಮಾರು 25 ಅಂಗವಿಕಲರಿಗೆ ಗಾಲಿ ಕುರ್ಚಿಗಳ ವಿತರಣೆ, ಸುಮಾರು 50,000 ರೂ. ವಿದ್ಯಾರ್ಥಿವೇತನ ವಿತರಣೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ವಿತರಣೆ, 17 ಲಕ್ಷ ರೂ. ವೆಚ್ಚದಲ್ಲಿ ಅಮಲ ಭಾರತ ಯೋಜನೆಯಡಿ ಆಧುನಿಕ ಮಾದರಿಯ ಶೌಚಾಲಯ ನಿರ್ಮಾಣ, ಅಮೃತ ಶ್ರೀ ಯೋಜನೆಯ ಮಹಿಳಾ ಸ್ವಾವಲಂಬಿ, ಸ್ವ ಉದ್ಯೋಗ ಯೋಜನೆಯ ಅಂಗವಾಗಿ ಹೊಲಿಗೆ ಯಂತ್ರ ವಿತರಣೆ ಮತ್ತು ಅಮೃತ ಶ್ರೀ ಯೋಜನೆಯ ಸದಸ್ಯರಿಗೆ ಸೀರೆ ವಿತರಣೆ ನಡೆಯಿತು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರವಚನ, ಸತ್ಸಂಗ
ಶುಕ್ರವಾರ ಯಜ್ಞಶಾಲೆಯಲ್ಲಿ ಅಮ್ಮನವರಿಂದ ಪ್ರವಚನ, ಸತ್ಸಂಗ, ಭಜನೆ, ಧ್ಯಾನ, ಮಾನಸ ಪೂಜೆ ನೆರವೇರಿತು. ಶನಿವಾರವೂ ಈ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಹಲವು ಭಕ್ತರಿಗೆ ಅಪ್ಪುಗೆಯ ಮೂಲಕ ಅನುಗ್ರಹ ದರ್ಶನ ನೀಡಿದರು. ಜನರು ಜೀವನದಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳ ಪರಿಹಾರಕ್ಕಾಗಿ ಅಮ್ಮನವರಿಂದ ಮಾರ್ಗೋಪದೇಶ ಪಡೆದುಕೊಂಡರು. ಜಾತಿ, ಮತ, ವರ್ಣ, ಲಿಂಗ ಭೇದವಿಲ್ಲದೆ ಎಲ್ಲರ ದುಃಖಗಳಿಗೆ ಅಮ್ಮ ತನ್ನ ಕರುಣಾಮಯಿ ಹೃದಯದಿಂದ ಅಪ್ಪಿ ಸಂತೈಸುತ್ತಾ ಅವರೆಲ್ಲರ ಬಾಳಿಗೆ ಚೈತನ್ಯ ನೀಡಿದರು. ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ವಿಶೇಷ ಪೂಜೆಗಳು ನಡೆದಿದ್ದು, ಶನಿವಾರವೂ ಇದು ಮುಂದುವರಿಯಲಿದೆ.

ಬ್ರಹ್ಮಸ್ಥಾನ ಮಹೋತ್ಸವ
ನವಗ್ರಹ ಶಾಂತಿ ಹೋಮ, ಮಹಾ ಸುದರ್ಶನ ಹೋಮ, ಭಗವತಿ ಪೂಜಾ, ಮಹಾಗಣಪತಿ ಹೋಮ, ಶ್ರೀಲಲಿತಾ ತ್ರಿಶತಿ, ಅಲಂಕಾರ ಪೂಜಾ ಸಹಿತ ವಿವಿಧ ಅರ್ಚನೆಗಳು ಬ್ರಹ್ಮಸ್ಥಾನ ಮಹೋತ್ಸವ ಹಿನ್ನೆಲೆಯಲ್ಲಿ ನೆರವೇರಿವೆ.

ಇಂದು ಅಮ್ಮನವರ ಅನುಗ್ರಹ ದರ್ಶನ 
ಮಂಗಳೂರಿನ ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ನಿರ್ದೇಶನದಂತೆ ವಿದೇಶೀ ಭಕ್ತರ ಸಹಿತ ಆಗಮಿಸಿದ ಎಲ್ಲರಿಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಮ್ಮನವರ ದರ್ಶನ ಪಡೆಯಲು ಯಾವುದೇ ಶುಲ್ಕವಿಲ್ಲ. ಅಗತ್ಯವಾದ ಟೋಕನ್‌ಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡಲಾಗುತ್ತದೆ. ಸಕಾಲದಲ್ಲಿ ಆಗಮಿಸಿ ಆಸೀನರಾಗಿರುವವರೆಲ್ಲರಿಗೂ ಅವರು ಆಗಮಿಸಿದ ಸಮಯಾನುಸಾರದಂತೆ ದರ್ಶನ ಪಡೆಯಲು ಅವಕಾಶವಿರುತ್ತದೆ. ಸಾರ್ವಜನಿಕರ ಅಭಿಪ್ರಾಯದಂತೆ ಇನ್ನಷ್ಟು ಸರಳವಾಗಿ ಅಮ್ಮನ ದರ್ಶನದ ವ್ಯವಸ್ಥೆಯನ್ನು ಈ ವರ್ಷ ಮಾಡಲಾಗಿದೆ. ಶುಕ್ರವಾರ ಸಾವಿರಾರು ಮಂದಿ ಅಮ್ಮನ ಅನುಗ್ರಹ ದರ್ಶನ ಪಡೆದರು ಎಂದು ಪ್ರಸಾದ್‌ರಾಜ್‌ ಕಾಂಚನ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next