ಮಂಗಳೂರು: ಗಣ ರಾಜ್ಯೋತ್ಸವ ಸಂಭ್ರಮದ ದಿನವಾದ ಗುರುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆ ಸಿಐಎಸ್‌ಎಫ್ನ ಶ್ವಾನದಳಕ್ಕೆ ಬೆಲ್ಜಿಯನ್ ಮೆಲಿನೊಯ್ಸ ತಳಿಯ ಮ್ಯಾಕ್ಸ್ ಮತ್ತು ರೇಂಜರ್ ಹೆಸರಿನ ಎರಡು ಶ್ವಾನಗಳು ಸೇರ್ಪಡೆಗೊಂಡಿವೆ.
ಬೆಂಗಳೂರಿನ ತರಳುವಿನಲ್ಲಿರುವ ಸಿಆರ್‌ಪಿಎಫ್ನ ಶ್ವಾನ ಸಂತಾನೋತ್ಪತ್ತಿ ಮತ್ತು ತರಬೇತಿ ಶಾಲೆಯಲ್ಲಿ ತರಬೇತು ಪಡೆದ ಶ್ವಾನಗಳಲ್ಲಿ ಮ್ಯಾಕ್ಸ್ ಪ್ರಥಮ ಸ್ಥಾನ ಪಡೆದಿದ್ದರೆ, ರೇಂಜರ್ ದ್ವಿತೀಯ ಸ್ಥಾನ ಪಡೆದಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾ ರಂಭದ ಸಂದರ್ಭ ಈ ಶ್ವಾನಗಳನ್ನು ಆದರದಿಂದ ಬರಮಾಡಿಕೊಳ್ಳುವ ಜತೆಗೆ, ಸಿಐಎಸ್‌ಎಫ್ನ ಏರ್‌ಪೋರ್ಟ್ ಭದ್ರತಾ ಪಡೆ (ಎಎಸ್‌ಜಿ)ಯೋಧರು ರಕ್ಷಣಾ ತಂತ್ರಗಾರಿಕೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಿ ಗಮನ ಸೆಳೆದರು.
ಗಣರಾಜ್ಯೋತ್ಸವ ಧ್ವಜಾರೋಹಣ ಸಮಾರಂಭದಲ್ಲಿ (ಪ್ರಾಜೆಕ್ಟ್ ಮತ್ತು ಕಾರ್ಪೊರೆಟ್ ವ್ಯವಹಾರಗಳು) ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಏರ್‌ಪೋರ್ಟ್‌ನ ಭದ್ರತಾ ವಿಭಾಗದ ಮುಖ್ಯ ಅಧಿಕಾರಿ ಕಿಶೋರ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.