Advertisement

Mangaluru ಪತಿಯಿಂದ 75 ಪವನ್‌ ಚಿನ್ನಾಭರಣ ಕಳವು: ಮಹಿಳೆ ದೂರು

09:33 PM Aug 08, 2023 | Team Udayavani |

ಮಂಗಳೂರು: ತನ್ನ ಪತಿ 75 ಪವನ್‌ ಚಿನ್ನ ಕಳವು ಮಾಡಿರುವ ಬಗ್ಗೆ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ರೆನಿಶಾ ನೊರೊನ್ಹಾ ದೂರು ನೀಡಿದವರು. ಆಕೆಯ ಪತಿ ಮೊಹಮ್ಮದ್‌ ಇಲಿಯಾಸ್‌ ಆರೋಪಿ.

ದೂರಿನ ವಿವರ
ತಾನು ಪತಿ ಮೊಹಮ್ಮದ್‌ ಇಲಿಯಾಸ್‌ ಮತ್ತು ಮಗನೊಂದಿಗೆ ಮಂಗಳೂರು ಕೆಪಿಟಿ ವ್ಯಾಸನಗರದ ಫ್ಲ್ಯಾಟ್‌ನಲ್ಲಿ ವಾಸವಿದ್ದೆವು. ಮದುವೆ ಸಮಯದಲ್ಲಿ ತಾಯಿ ಮನೆಯವರು ನೀಡಿದ 25 ಪವನ್‌, ತಾನು ದುಡಿದು ಮಾಡಿದ 5 ಪವನ್‌, ತಾಯಿ ಮನೆಯವರು ಉಡುಗೊರೆಯಾಗಿ ನೀಡಿದ 20 ಪವನ್‌, ಮದುವೆ ಸಮಯದಲ್ಲಿ ಪತಿಯ ಮನೆಯವರು ಉಡುಗೊರೆಯಾಗಿ ನೀಡಿದ 25 ಪವನ್‌ ಸೇರಿದಂತೆ ಒಟ್ಟು 75 ಪವನ್‌ ಚಿನ್ನವನ್ನು ಲಾಕರ್‌ನಲ್ಲಿಟ್ಟಿದ್ದೆ. ಇದು ತನಗೆ ಮತ್ತು ಪತಿ ಇಲಿಯಾಸ್‌ನಿಗೆ ಮಾತ್ರ ತಿಳಿದಿತ್ತು.

ಇತ್ತೀಚೆಗೆ ಎಪ್ರಿಲ್‌ನಲ್ಲಿ ಪತಿ ಮತ್ತು ತನಗೆ ಜಗಳವಾಗಿ ತಾಯಿ ಮನೆಯಲ್ಲಿ ವಾಸವಿದ್ದೆ. ವಾರಕ್ಕೊಮ್ಮೆ ಫ್ಲ್ಯಾಟ್‌ಗೆ ಬಂದು ಹೋಗುತ್ತಿದ್ದೆ.ಸುಮಾರು ಒಂದು ತಿಂಗಳ ಅನಂತರ ಫ್ಲ್ಯಾಟ್‌ಗೆ ಹೋಗಿ ವಾಚ್‌ಮೆನ್‌ ಬಳಿ ವಿಚಾರಿಸಿದಾಗ ಪತಿ ಫ್ಲ್ಯಾಟ್‌ಗೆ ಬಾರದೆ ಒಂದು ವಾರವಾಗಿದೆ ಎಂದು ತಿಳಿಸಿದ್ದರು. ಇದರಿಂದ ಅನುಮಾನಗೊಂಡು ಬಂಗಾರ ಇಟ್ಟ ಲಾಕರ್‌ನಲ್ಲಿ ನೋಡಿದಾಗ ಲಾಕರ್‌ ಸಮೇತ ಚಿನ್ನ ಇರಲಿಲ್ಲ. ಪತಿಗೆ ಪದೇ ಪದೇ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಮೂರು ದಿನಗಳ ಅನಂತರ ಕರೆ ಸ್ವೀಕರಿಸಿ “ನಾನು ಲಾಕರ್‌ ಸಮೇತ ಚಿನ್ನವನ್ನು ಕದ್ದುಕೊಂಡು ಹೋಗಿದ್ದೇನೆ. ನಿನಗೆ ಏನು ಮಾಡಲಾಗುತ್ತದೆ ಅದನ್ನು ಮಾಡು’ ಎಂದಿದ್ದಾನೆ. ಅಲ್ಲದೆ ಚಿನ್ನವನ್ನು ಬ್ಯಾಂಕ್‌ನಲ್ಲಿಟ್ಟು ಹಣ ಪಡೆದುಕೊಂಡಿದ್ದು ಅದಕ್ಕೆ ಬಡ್ಡಿ ಕಟ್ಟಲು ಆಗದೆ ಪ್ರಭಾಕರ್‌ ಎಂಬವರಿಗೆ ಮೂರು ತಿಂಗಳ ಮಟ್ಟಿಗೆ ಬಡ್ಡಿ ಕಟ್ಟಲು ಅನುಮತಿ ನೀಡಿದ್ದೆ. ಅಡವಿಟ್ಟ ಚಿನ್ನದಲ್ಲಿ ಪ್ರಭಾಕರ ಅವರು ಮೂರು ತಿಂಗಳಾಗುವ ಮೊದಲು ಸುಮಾರು 12 ಲಕ್ಷ ರೂ. ಮೌಲ್ಯದ ಚಿನ್ನವನ್ನು ಬಿಡಿಸಿ ಕರಗಿಸಿ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾನೆ. ಹಾಗಾಗಿ ಇಲಿಯಾಸ್‌ ಮತ್ತು ಪ್ರಭಾಕರನ ಮೇಲೆ ಸೂಕ್ತ ಕ್ರಮ ಜರಗಿಸಿ ಚಿನ್ನವನ್ನು ಹಿಂದಿರುಗಿಸಬೇಕು ಎಂದು ರೆನಿಶಾ ನೊರೊನ್ಹಾ ಅವರು ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next