Advertisement

Mangaluru: 7 ಕೆರೆ, ಪಾರ್ಕ್‌ ಅಭಿವೃದ್ಧಿಗೆ ಅಮೃತ 2.0

02:25 PM Nov 28, 2024 | Team Udayavani |

ಮಹಾನಗರ: ಕುಡಿಯುವ ನೀರು, ಒಳಚರಂಡಿ ಯೋಜನೆಗಾಗಿ ಮಹಾನಗರ ಪಾಲಿಕೆಯಲ್ಲಿ ಜಾರಿಯಲ್ಲಿದ್ದ ಅಮೃತ್‌ ಯೋಜನೆಯ ಮುಂದುವರಿದ ಭಾಗ ‘ಅಮೃತ್‌ 2.0’ ಮಂಗಳೂರಿಗೆ ಲಭಿಸಿದೆ. ಈ ಬಾರಿ ನಗರದ ಏಳು ಪಾರ್ಕ್‌ಗಳ ಅಭಿವೃದ್ಧಿ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಅನುದಾನ ಲಭಿಸಿದೆ. ಅಂದಾಜು 26.95 ಕೋ.ರೂ ವೆಚ್ಚದಲ್ಲಿ ಏಳು ಕಾಮಗಾರಿ ಇದರಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

Advertisement

ಕೇಂದ್ರ ಪುರಸ್ಕೃತ ಅಮೃತ್‌ 2.0 ಯೋಜನೆಯ ಟ್ರಾಂಚ್‌-3ರಲ್ಲಿ ದೇಶದ ವಿವಿಧ ರಾಜ್ಯದಲ್ಲಿ ಜಲಮೂಲಗಳ ಪುನಶ್ಚೇತನ ಹಾಗೂ ಹಸುರು ಜಾಗ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆ ನಡೆದ ಕೇಂದ್ರದ ಅಪೆಕ್ಸ್‌ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರನ್ವಯ ರಾಜ್ಯದ 90 ನಗರ ಸ್ಥಳೀಯ ಸಂಸ್ಥೆಗಳಲ್ಲಿ 203 ಜಲಮೂಲಗಳ ಪುನಶ್ಚೇತನ, 254 ಹಸುರು ಜಾಗ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಒಟ್ಟು 684 ಕೋ.ರೂ ಮೊತ್ತಕ್ಕೆ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ 26.95 ಕೋ.ರೂ ಮಂಗಳೂರಿಗೆ ಲಭಿಸಿದೆ.

ಈ ಯೋಜನೆಗಳನ್ನು ಕೈಗೊಳ್ಳಲು ವಿಸ್ತೃತ ಯೋಜನ ವರದಿ ಯನ್ನು ಸಿದ್ಧಪಡಿಸಲು ಹಾಗೂ ಅಗತ್ಯ ತಾಂತ್ರಿಕ ನೆರವನ್ನು ಪೌರಾಡಳಿತ ನಿರ್ದೇಶನಾಲಯದ ಹಂತದಲ್ಲಿ ನೇಮಿಸಿ ರುವ ಯೋಜನ ಅಭಿವೃದ್ಧಿ, ನಿರ್ವಹಣ ಘಟಕ (ಪಿಡಿಎಂಸಿ) ನಗರ ಸ್ಥಳೀಯ ಸಂಸ್ಥೆಗಳಿಗೆ ಸಹಕಾರ ನೀಡಲಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಮೃತ್‌ 2.0 ಯೋಜನೆಯಡಿ ಕಾಮಗಾರಿಗಳನ್ನು ಸಕಾಲದಲ್ಲಿ ಕೈಗೊಳ್ಳಲು, ಅನಗತ್ಯ ವಿಳಂಬವಿಲ್ಲದೆ ಅನುಷ್ಠಾನ ಗೊಳಿಸಲು ಪಾಲಿಕೆ ಅನುಮೋದನೆ ಅಗತ್ಯವಿದೆ.

ಜಲಮೂಲ, ಉದ್ಯಾನವನಗಳಲ್ಲಿ ಯಾವುದೇ ಒತ್ತುವರಿ ಇದ್ದಲ್ಲಿ ಈ ಯೋಜನೆ ಅನುಷ್ಠಾನ ಮೊದಲು ತೆರವುಗೊಳಿ ಸಲಾಗುತ್ತದೆ. ಹಾಗೂ ಟೆಂಡರ್‌ ಅನುಮೋದನೆ ಕಾಲಕ್ಕೆ ಸಾಮಗ್ರಿ ಬೆಲೆ ಏರಿಕೆ, ಭೂಸ್ವಾಧೀನ ವೆಚ್ಚ ಸಹಿತ ಇತರ ವೆಚ್ಚಗಳನ್ನು ಸಂಪೂರ್ಣವಾಗಿ ನಗರ ಸ್ಥಳೀಯ ಸಂಸ್ಥೆಯ ಸ್ವಂತ ಸಂಪನ್ಮೂಲದಿಂದ ಭರಿಸಬೇಕಾಗುತ್ತದೆ.

ಮನಪಾ ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ ಅವರು ‘ಸುದಿನ’ ಜತೆಗೆ ಪ್ರತಿಕ್ರಿಯಿಸಿ ‘ಅಮೃತ್‌ ಯೋಜನೆಯಡಿ ಈಗಾಗಲೇ ನಗರದಲ್ಲಿ ಕೆಲವು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಅಮೃತ್‌ 2.0 ಯೋಜನೆ ಜಾರಿಗೆ ಬಂದಿದೆ. ಇದರಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಪಾರ್ಕ್‌ ಸುಂದರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಪಾಲಿಕೆ ಪರಿಷತ್ತಿನ ಅನುಮೋದನೆ ಪಡೆದು ಯೋಜನೆ ಜಾರಿಯಾಗಲಿದೆ’ ಎಂದರು.

Advertisement

‘ಅಭಿವೃದ್ಧಿ’ ಕಾಟಾಚಾರವಾಗದಿರಲಿ!
ಮಂಗಳೂರಿನ ಕದ್ರಿ ಪಾರ್ಕ್‌ ಸಹಿತ ವಿವಿಧ ಪಾರ್ಕ್‌ಗಳು, ಕೆರೆಗಳು ಅಭಿವೃದ್ಧಿ ಎಂಬ ವಿಚಾರದಲ್ಲಿ ಘೋಷಣೆ-ಹೇಳಿಕೆಗಳು ನಿಯಮಿತವಾಗಿ ಕೇಳಿಬರುತ್ತವೆ. ಆದರೆ, ಯಾವುದೂ ಕೂಡ ಪೂರ್ಣ ರೀತಿಯಲ್ಲಿ ಕೈಗೂಡುವುದಿಲ್ಲ ಎಂಬುದು ಸಾರ್ವತ್ರಿಕ ಆರೋಪ. ಗುಜ್ಜರಕೆರೆ ಅಭಿವೃದ್ಧಿ ಆದರೂ ಅಲ್ಲಿಗೆ ಒಳ ಚರಂಡಿ ನೀರು ಸೇರುವುದು ನಿಂತಿಲ್ಲ. ಹೀಗಾಗಿ ಅಭಿವೃದ್ಧಿ ಕಾಟಾಚಾರ ವಾಗಬಾರದು ಎನ್ನುವುದು ಸಾರ್ವಜನಿಕರ ಕಾಳಜಿ.

ಭವಿಷ್ಯದ ಮಂಗಳೂರಿಗೆ ಅನುಕೂಲ
ಭವಿಷ್ಯದ ಮಂಗಳೂರಿನ ಪರಿಸರ ಸಂರಕ್ಷಣೆ ಹಾಗೂ ಸುಂದರೀಕರಣದ ನೆಲೆಯಲ್ಲಿ ಈ ಯೋಜನೆ ಮಹತ್ವ ಪಡೆಯಲಿದೆ. ಪಾಲಿಕೆಯಲ್ಲಿ ಇದಕ್ಕೆ ಅನುಮೋದನೆ ಪಡೆದು ಮುಂದೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
-ಡಿ. ವೇದವ್ಯಾಸ ಕಾಮತ್‌, ಶಾಸಕರು

ಉದ್ದೇಶಿತ ಕಾಮಗಾರಿ, ಅಂದಾಜು ವೆಚ್ಚ
1. ಜೋಗಿಮಠ ಸಮೀಪದ ಕೆರೆ: 2.40 ಕೋಟಿ ರೂ.
2. ಪಾಂಡೇಶ್ವರ ಪೈ ಸೇಲ್ಸ್‌ ಹಿಂದಿನ ಪಾರ್ಕ್‌: 55 ಲಕ್ಷ ರೂ.
3. ಕೋಡಿಕಲ್‌ ಕಲ್ಲಕಂಡ ಪಾರ್ಕ್‌: 2.20 ಕೋಟಿ ರೂ.
4. ಕದ್ರಿ ಪಾರ್ಕ್‌ ಅಭಿವೃದ್ಧಿ: 2.75 ಕೋಟಿ ರೂ.
5. ಪಡೀಲ್‌ ಬೈರಾಡಿ ಕೆರೆ: 1.35 ಕೋಟಿ ರೂ.
6. ಕುಳಾಯಿ ಬಗ್ಗುಂಡಿ ಕೆರೆ: 14.00 ಕೋಟಿ ರೂ
7. ಕಡೇಕಾರ್‌ ಮಲ್ಲಿಕಾರ್ಜುನ ಕೆರೆ: 3.70 ಕೋಟಿ ರೂ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next