Advertisement

ಗುಣಮಟ್ಟದ ಬದುಕಿಗೆ ಮಂಗಳೂರೇ ಉತ್ತಮ

11:54 AM Mar 27, 2017 | Harsha Rao |

ಮಂಗಳೂರು: ಯುಗಾದಿ ಸಮೀಪಿಸುತ್ತಿರುವಾಗಲೇ ಮಂಗಳೂರಿಗರಿಗೆ ಬೆಲ್ಲದಷ್ಟೇ ಸಿಹಿಯಾದ ಸುದ್ದಿಯಿದು. ಬುದ್ಧಿವಂತರ ನಾಡು ಎಂದು ಕರೆಸಿಕೊಳ್ಳುತ್ತಿದ್ದ ಮಂಗಳೂರಿನ ಕಿರೀಟಕ್ಕೆ ಇದೀಗ ಮತ್ತೂಂದು ಹೊಸ ಗರಿ. ಇಡೀ ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಜೀವನ ಹೊಂದಿರುವ ನಗರಗಳ ಪೈಕಿ ಮಂಗಳೂರು 41ನೇ ಸ್ಥಾನ ಪಡೆದುಕೊಂಡಿದೆ.

Advertisement

ಸ್ವತಂತ್ರ ಬಳಕೆದಾರರ ಜಾಗತಿಕ ಡೇಟಾಬೇಸ್‌ ಆಗಿರುವ ನಂಬಿಯೋ ತನ್ನ ವೆಬ್‌ಸೈಟ್‌ನಲ್ಲಿ ಈ ರ್‍ಯಾಂಕಿಂಗ್‌ ಅನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮಂಗಳೂರು ಸ್ಯಾನ್‌ಫ್ರಾನ್ಸಿಸ್ಕೋ(42)ವನ್ನು ಹಿಂದಿಕ್ಕಿ 41ನೇ ಸ್ಥಾನ ಪಡೆದಿದೆ.

ಕ್ಯಾನ್‌ಬೆರಾ ಮತ್ತು ಆಸ್ಟ್ರೇಲಿಯಾವು ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ. ಇದೇ ವೇಳೆ, ಮಂಗಳೂರು ಏಷ್ಯಾದಲ್ಲಿ 2ನೇ ಅತ್ಯುತ್ತಮ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು 108, ಪುಣೆ 77, ಹೈದರಾಬಾದ್‌ 96ನೇ ಸ್ಥಾನಗಳನ್ನು ಪಡೆದಿವೆ. ಅತ್ಯಂತ ಕಳಪೆ ಜೀವನಮಟ್ಟ ಹೊಂದುವ ಮೂಲಕ ವೆನೆಜುವೆಲಾ ಕೊನೆಯ ಅಂದರೆ 143ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಆರೋಗ್ಯಸೇವೆಯಲ್ಲೂ ಮುಂದು
ಇಷ್ಟೇ ಅಲ್ಲ, ಆರೋಗ್ಯ ಸೇವೆಯಲ್ಲಿ ಆಸ್ಟ್ರೇಲಿಯಾ, ಯುಕೆ ಮತ್ತು ಜಪಾನ್‌ ನಗರಗಳನ್ನು ಹಿಮ್ಮೆಟ್ಟಿಸಿರುವ ಮಂಗಳೂರು ವಿಶ್ವದಲ್ಲೇ 12ನೇ ಅತ್ಯುತ್ತಮ ನಗರವೆಂಬ ಶ್ಲಾಘನೆಗಳಿಸಿದೆ. 143 ನಗರಗಳ ಪೈಕಿ ದುಬಾೖ 9 ಮತ್ತು ಅಬುಧಾಬಿ 5ನೇ ಸ್ಥಾನ ಪಡೆದಿವೆ. ಇದರಲ್ಲಿ ಬೆಂಗಳೂರು 68 ಮತ್ತು ಚೆನ್ನೈ 35ನೇ ಸ್ಥಾನ ಗಳಿಸಿವೆ. ಇನ್ನು ಮಾಲಿನ್ಯ ಮಟ್ಟದ ವಿಚಾರದಲ್ಲೂ ಮಂಗಳೂರು ಉತ್ತಮ ಸಾಧನೆ ತೋರಿದೆ. ಭಾರತದ 39 ನಗರಗಳ ಪೈಕಿ ಫ‌ರೀದಾಬಾದ್‌ ಅತಿ ಹೆಚ್ಚು ಮಾಲಿನ್ಯಯುಕ್ತ ನಗರವೆಂಬ ಕುಖ್ಯಾತಿಗೆ ಪಾತ್ರವಾದರೆ, ಬೆಂಗಳೂರು 34ನೇ ಸ್ಥಾನದಲ್ಲಿದೆ.

ದುಬಾರಿಯಲ್ಲ ಬೆಂಗಳೂರು!
ವಿಶ್ವದ ಅತಿ ದುಬಾರಿ ನಗರ ಯಾವುದು ಗೊತ್ತಾ? ಸಿಂಗಾಪುರ. ಹಾಗಾದರೆ ಬೆಂಗಳೂರು, ದಿಲ್ಲಿ, ಮುಂಬಯಿಯೆಲ್ಲ ದುಬಾರಿಯಲ್ಲವೇ ಎಂದು ಕೇಳುತ್ತಿದ್ದೀರಾ? ಊಹೂಂ. ದಿ ಎಕನಾಮಿಸ್ಟ್‌ ಗ್ರೂಪ್‌ ಅಧ್ಯಯನಕ್ಕೆ ಬಳಸಿಕೊಂಡ 133 ನಗರಗಳ ಪೈಕಿ ಬೆಂಗಳೂರು 131ನೇ ಸ್ಥಾನ ಪಡೆದುಕೊಂಡಿದೆ. ಅಂದರೆ, ಉದ್ಯಾನನಗರಿಯು ಬದುಕಲು ಅತ್ಯಂತ ಅಗ್ಗದ ಜಾಗ. ರಾಷ್ಟ್ರ ರಾಜಧಾನಿ  ದಿಲ್ಲಿ 124 ಮತ್ತು ವಾಣಿಜ್ಯ ನಗರಿ ಮುಂಬಯಿ 127ನೇ ಸ್ಥಾನ ಗಳಿಸಿವೆ. ಸುಮಾರು 160 ವಿವಿಧ ಸರಕುಗಳ ದರಗಳ ಆಧಾರದಲ್ಲಿ ಹೋಲಿಕೆ ಮಾಡಿ ಯಾವ ನಗರವು ವೆಚ್ಚದಾಯಕ ಮತ್ತು ಯಾವುದು ಅಗ್ಗ ಎಂದು ನಿರ್ಧರಿಸಲಾಗಿದೆ. ಅದರಂತೆ, ದುಬಾರಿ ನಗರಗಳ ಪೈಕಿ ಸಿಂಗಾಪುರ ಮೊದಲ ಸ್ಥಾನ ಪಡೆದರೆ, 2ನೇ ಸ್ಥಾನವನ್ನು ಹಾಂಕಾಂಗ್‌ ಗಿಟ್ಟಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next