Advertisement

ಲಂಕಾ ಸ್ಫೋಟದಲ್ಲಿ ಮಂಗಳೂರು ಮಹಿಳೆ ಸಾವು

12:04 AM Apr 22, 2019 | Team Udayavani |

ಮಂಗಳೂರು/ಸುರತ್ಕಲ್‌: ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಬಾಂಬ್‌ ಸ್ಫೋಟದಲ್ಲಿ ಸುರತ್ಕಲ್‌ ಮೂಲದ ಮಹಿಳೆ ರಝೀನಾ (58) ಮೃತಪಟ್ಟಿದ್ದಾರೆ. ಇವರು ಬೈಕಂಪಾಡಿಯ ಪ್ರತಿಷ್ಠಿತ ಕುಕ್ಕಾಡಿ ಮನೆತನದ ಅಬ್ದುಲ್‌ ಖಾದರ್‌ ಅವರ ಪತ್ನಿ.

Advertisement

ರವಿವಾರ ಬೆಳಗ್ಗೆ ದುಬಾೖಗೆ ತೆರಳಬೇಕಾಗಿದ್ದ ಪತಿ ಅಬ್ದುಲ್‌ ಖಾದರ್‌ ಅವರನ್ನು ಕೊಲಂಬೋ ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದು ಶಾಂಗ್ರಿಲಾ ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸೇವಿಸುತ್ತಿರುವ ಸಂದರ್ಭ ಭೀಕರ ಸ್ಫೋಟ ಸಂಭವಿಸಿತು.

ದುಬಾೖಯಲ್ಲಿ ಉದ್ಯೋಗಿಯಾಗಿರುವ ಅಬ್ದುಲ್‌ ಖಾದರ್‌ ಅವರು ಪತ್ನಿ ರಝೀನಾ ಜತೆಗೆ ವಾರದ ಹಿಂದೆ ರಜೆಯ ಮೇಲೆ ಕೊಲಂಬೋಕ್ಕೆ ತೆರಳಿದ್ದರು. ಅಲ್ಲಿ ರಝೀನಾ ಅವರ ಕುಟುಂಬಸ್ಥರು ಕೂಡ ನೆಲೆಸಿದ್ದು, ಒಂದು ವಾರ ಅಲ್ಲೇ ಇದ್ದು, ರವಿವಾರ ಮತ್ತೆ ಅಬ್ದುಲ್‌ ಖಾದರ್‌ ದುಬಾೖಗೆ ಮರಳಿದ್ದರು. ಅವರನ್ನು ಬೀಳ್ಕೊಡಲು ಕುಟುಂಬದವರ ಜತೆ ಪತ್ನಿ ರಝೀನಾ ಕೂಡ ಹೋಗಿದ್ದರು. ಅವರ ಜತೆಗಿದ್ದ ಕುಟುಂಬದವರು ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳದಲ್ಲೇ ಸಾವು
ಮೂಲತಃ ಕಾಸರಗೋಡಿನವರಾದ ರಝೀನಾ ಅವರ ಕುಟುಂಬ ಶ್ರೀಲಂಕಾದಲ್ಲಿ ಹಲವು ವರ್ಷಗಳಿಂದ ನೆಲೆಸಿದೆ. ಅವರ ಭೇಟಿಗೆಂದು ವಾರದ ಹಿಂದೆ ದುಬಾೖಯಿಂದ ಬಂದಿದ್ದ ದಂಪತಿ ಭೇಟಿಯ ಬಳಿಕ ಶಾಂಗ್ರಿಲ್ಲಾ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ಪತಿ ಖಾದರ್‌ಗೆ ದುಬಾೖಗೆ ತೆರಳುವ ಅನಿವಾರ್ಯತೆ ಇದ್ದುದರಿಂದ ರವಿವಾರ ಬೆಳಗ್ಗೆ ಅವರನ್ನು ಕೊಲಂಬೋ ವಿಮಾನ ನಿಲ್ದಾಣದವರೆಗೆ ಬಿಟ್ಟು ಬರಲಾಗಿತ್ತು. ಈ ಬಾಂಬ್‌ ಸ್ಫೋಟದಲ್ಲಿ ತೀವ್ರ ಗಾಯಗೊಂಡಿದ್ದ ರಝೀನಾ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಮಂಗಳೂರಿನಲ್ಲಿ ನೆಲೆಸಿರುವ ಖಾದರ್‌ ಸಹೋದರ ಉಸ್ಮಾನ್‌ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಮಂಗಳೂರಿನ ಎಂಸಿಎಫ್‌ನಲ್ಲಿ ಕೆಮಿಕಲ್‌ ಎಂಜಿನಿಯರ್‌ ಆಗಿದ್ದ ಕುಕ್ಕಾಡಿ ಮನೆತನಕ್ಕೆ ಸೇರಿದವರಾದ ಅಬ್ದುಲ್‌ ಖಾದರ್‌ ಅವರನ್ನು ರಝೀನಾ ವಿವಾಹವಾಗಿದ್ದರು. ಎಂಸಿಎಫ್‌ನಲ್ಲಿ ಉದ್ಯೋಗಿಯಾಗಿದ್ದ ಸಂದರ್ಭ ಅವರು ಪತ್ನಿಯೊಂದಿಗೆ ಸುರತ್ಕಲ್‌ನಲ್ಲಿ ವಾಸವಾಗಿದ್ದರು. ಬಳಿಕ ಆ ಉದ್ಯೋಗ ತೊರೆದು ದುಬಾೖಯಲ್ಲಿ ಕೆಮಿಕಲ್‌ ಎಂಜಿನಿಯರ್‌ ಆಗಿ ಸದ್ಯ ಕೆಲಸಕ್ಕೆ ಸೇರಿದರು. ಪತ್ನಿ ಕೂಡ ದುಬಾೖಯಲ್ಲಿ ಪತಿಯ ಜತೆ ನೆಲೆಸಿದ್ದರು. ಈ ದಂಪತಿಗೆ ಒರ್ವ ಪುತ್ರ ಹಾಗೂ ಪುತ್ರಿ ಇದ್ದು, ಅವರು ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸುರತ್ಕಲ್‌ನ ಮನೆಗೆ ಈಗ ಬೀಗ ಹಾಕಿದ್ದು, ವರ್ಷಕ್ಕೆ ಒಂದೆರಡು ಬಾರಿ ಬಂದು ಹೋಗುತ್ತಿದ್ದರು.

Advertisement

ಕೊಲಂಬೋದಲ್ಲಿ ಬಾಂಬ್‌ ಸ್ಫೋಟ ನಡೆದ ವಿಷಯ ಮಧ್ಯಾಹ್ನದ ವೇಳೆಗೆ ದುಬಾೖ ಏರ್‌ಪೋರ್ಟ್‌ ತಲುಪಿದ ಬಳಿಕ ಅಬ್ದುಲ್‌ ಖಾದರ್‌ಗೆ ಗೊತ್ತಾಗಿತ್ತು. ಪತ್ನಿ ಮೃತಪಟ್ಟಿರುವ ವಿಚಾರ ತಿಳಿದು ತೀವ್ರ ಅಘಾತಗೊಂಡ ಅವರು ಕೂಡಲೇ ಮತ್ತೂಂದು ವಿಮಾನದ ಮೂಲಕ ಮತ್ತೆ ಕೊಲಂಬೊಕ್ಕೆ ವಾಪಸಾದರು. ತಾಯಿಯ ಸಾವಿನ ವಿಷಯ ತಿಳಿದು ಅಮೆರಿಕದಿಂದ ಇಬ್ಬರು ಮಕ್ಕಳು ಕೂಡ ಕೊಲಂಬೋಕ್ಕೆ ಧಾವಿಸಿ ಬಂದಿದ್ದಾರೆ. ಮತ್ತೂಂದೆಡೆ ಮಂಗಳೂರಿನಿಂದ ಖಾದರ್‌ ಅವರ ಕುಟುಂಬಸ್ಥರು ಕೂಡ ಶ್ರೀಲಂಕಾಕ್ಕೆ ತೆರಳಿದ್ದಾರೆ.

ಮಂಗಳೂರಿಗೆ ಬರುವರಿದ್ದರು
ಪತಿ ದುಬಾೖಗೆ ತೆರಳಿದ ಬಳಿಕ ರಝೀನಾ ಅವರು ಮಂಗಳೂರಿಗೆ ಆಗಮಿಸಲು ನಿರ್ಧರಿಸಿದ್ದರು. ವಿಮಾನ ಟಿಕೆಟ್‌ ಕೂಡ ಮಾಡಿಸಿದ್ದರು. ರವಿವಾರ ಮಧ್ಯಾಹ್ನ 12.30ಕ್ಕೆ ಕೊಲಂಬೋದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಮತ್ತೆ ಮಂಗಳೂರಿಗೆ ಆಗಮಿಸುವರಿದ್ದರು. ಆದರೆ ಅವರು ಅಷ್ಟರಲ್ಲೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಸುರತ್ಕಲ್‌ನಲ್ಲಿರುವ ತನ್ನ ಮನೆಗೆ ಒಂದು ತಿಂಗಳ ಹಿಂದೆಯಷ್ಟೇ ರಝೀನಾ ಬಂದು ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next