Advertisement

ಮಂಗಳೂರು: ಒಳಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ನೇತ್ರಾವತಿ ಒಡಲಿಗೆ!

03:48 PM Feb 06, 2024 | Team Udayavani |

ಮಹಾನಗರ: ಬೋಳಾರ ವಾರ್ಡ್‌ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಇನ್ನೂ ಒಳಚರಂಡಿ ವ್ಯವಸ್ಥೆ ಕಲ್ಪಿಸದ ಕಾರಣ, ಮನೆ-ವಸತಿ ಸಮುಚ್ಚಯಗಳ ತ್ಯಾಜ್ಯ ನೀರು ತೆರೆದ ಚರಂಡಿ, ರಾಜಕಾಲುವೆಗಳಲ್ಲಿ ಹರಿದು ಹೋಗುತ್ತಿದ್ದು, ಇವು ನೇರವಾಗಿ ನೇತ್ರಾವತಿ
ಒಡಲು ಸೇರುವ ಮೂಲಕ ಜಲ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.

Advertisement

ಇಲ್ಲಿನ ಮಹಾಕಾಳಿಪಡು³, ಜಪ್ಪು ಶೆಟ್ಟಿಬೆಟ್ಟು, ಆದರ್ಶನಗರ, ಜಪ್ಪುಪಟ್ನ ಮೊದಲಾದ ಪ್ರದೇಶಗಳ ಮನೆಗಳು ಇನ್ನೂ ಒಳಚರಂಡಿ ಸಂಪರ್ಕವನ್ನೇ ಪಡೆದಿಲ್ಲ. ಬಹುತೇಕ ಮನೆಗಳು ಶೌಚಾಲಯ ಪಿಟ್‌ ವ್ಯವಸ್ಥೆಯನ್ನು ಅಳವಡಿಕೊಂಡಿದ್ದು, ಕೆಲವರು ಕೊಳಚೆ ನೀರನ್ನು ನೇರವಾಗಿ ತೋಡಿಗೆ ಸಂಪರ್ಕಿಸಿದ್ದಾರೆ. ಇದು ಹರಿದು ನದಿಗೆ ಸೇರುತ್ತಿದೆ.

ಅರೆಕೆರೆಬೈಲ್‌ ವೆಟ್‌ವೆಲ್‌ ಮುಂಭಾಗದ ಕಾಲುವೆಯಲ್ಲೇ ಕಪ್ಪು ಕೊಳಚೆ ನೀರು ಹರಿದು ಹೋಗುತ್ತಿದೆ. ವೆಟ್‌ವೆಲ್‌ ನಿಂದಲೂ ಕೊಳಚೆ ನೀರನ್ನು ಚರಂಡಿಗೆ ಬಿಡಲಾಗುತ್ತಿದೆ. ವೆಟ್‌ವೆಲ್‌ನಲ್ಲಿ ಲಕ್ಷಾಂತರ ರೂ. ವೆಚ್ಚಮಾಡಿ ಜನರೇಟರ್‌ ವ್ಯವಸ್ಥೆ ಮಾಡಿದರೂ ಪರಿಣಾಮ ಬೀರಿಲ್ಲ ಎನ್ನುತ್ತಾರೆ ಸ್ಥಳೀಯರು. ಸ್ಮಾರ್ಟ್‌ ರಸ್ತೆಯಲ್ಲಿ ವ್ಯವಸ್ಥೆಯಿಲ್ಲ ಜಪ್ಪಿನಮೊಗರಿನಿಂದ ಮಹಾಕಾಳಿಪಡ್ಪು ಮೂಲಕ ನಿರ್ಮಾಣವಾಗುತ್ತಿರುವ ಸ್ಮಾರ್ಟ್‌ ಸಿಟಿ ರಸ್ತೆಯಲ್ಲೂ ಒಳಚರಂಡಿ ವ್ಯವಸ್ಥೆಗೆ ಅಗತ್ಯ ಅನುಕೂಲಕಗಳನ್ನು ಮಾಡಿಲ್ಲ.ಮುಂದಿನ ದಿನಗಳಲ್ಲಿ ಇಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸಬೇಕಾದರೆ ಮತ್ತೆ ಕಾಂಕ್ರೀಟ್‌ ರಸ್ತೆಯನ್ನು ಅಗೆಯಬೇಕಾದ ಅನಿವಾರ್ಯ ಎದುರಾಗಲಿದೆ. ಇದರಿಂದ ತೆರಿಗೆ ಹಣ ವನ್ನು ಅನಾವಶ್ಯಕರವಾಗಿ ಪೋಲು ಮಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ ಎನ್ನುತ್ತಾರೆ ಸ್ಥಳೀಯರಾದ ಗಿರೀಶ್‌.

ಅಭಿವೃದಿಯಾದ ಕೆರೆಗಳೂ ಕಲುಷಿತ
ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ಇಲ್ಲಿನ ಕೆರೆಗಳೂ ಮಲಿನಗೊಂಡಿವೆ. ಸುಮಾರು 4 ಕೋ. ರೂ. ವೆಚ್ಚ ಮಾಡಿ ಅಭಿವೃದ್ಧಿ ಮಾಡಲಾದ ಗುಜ್ಜಕೆರೆ ಮತ್ತು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾದ ಮೊಲಿ ಕೆರೆ (ಶೆಟ್ಟಿಬೆಟ್ಟು ಕೆರೆ)ಗಳಿಗೆ ಕಲುಷಿತ ನೀರು ಹರಿದು ಹೋಗುತ್ತಿದೆ. ಮೊಲಿ ಕೆರೆ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ಪಾಚಿಕಟ್ಟಿದೆ.

ತಡೆಗಟ್ಟಲು ಕ್ರಮ
ಬೋಳಾರ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಈಗಾಗಲೇ ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಸರಿಪಡಿಸುವ ಕೆಲಸ ಮಾಡಲಾಗುವುದು. ಕೊಳಚೆ ನೀರು ರಾಜಕಾಲುವೆ ಮೂಲಕ ನದಿ ಸೇರದಂತೆ ತಡೆಯುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುವುದು.
ಸುಧೀರ್‌ ಶೆಟ್ಟಿ ಕಣ್ಣೂರು, ಮೇಯರ್‌

Advertisement

ಗಮನಕ್ಕೆ ತಂದರೂ ಪ್ರಯೋಜನವಿಲ್ಲ ಬೊಳಾರ ವಾರ್ಡ್‌ನ ಕೆಲವು ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಕೆಲವೆಡೆ ಇನ್ನೂ ಒಳಚರಂಡಿ ವ್ಯವಸ್ಥೆಯೇ ಇಲ್ಲದೆ ಕಾಲುವೆಗಳಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದು ನೇತ್ರಾವತಿ ಒಡಲು ಸೇರುವ ಮೂಲಕ ನದಿ ಮಲಿನವಾಗುತ್ತಿದೆ. ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಪಿ. ನೇಮು ಕೊಟ್ಟಾರಿ, ಸ್ಥಳೀಯರು

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next