ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಮತ್ತು ಸಹೋದಯ ವತಿಯಿಂದ ನಗರದ ಅಡ್ಯಾರ್‌ನಲ್ಲಿ ಸಹ್ಯಾದ್ರಿ ಕಾಲೇಜು ಮೈದಾನಿನಲ್ಲಿ ರವಿವಾರ ನಡೆದ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳ ನಡುವಿನ ರಾಷ್ಟ್ರ ಮಟ್ಟದ ಗಾಲಿ ಕುರ್ಚಿ (ವ್ಹೀಲ್‌ಚೆರ್) ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿತು. ಮಹಾರಾಷ್ಟ್ರ ತಂಡವು 20 ಓವರ್‌ನಲ್ಲಿ 8 ವಿಕೆಟ್‌ನಷ್ಟಕ್ಕೆ 148 ರನ್‌ಗಳಿಸಿತು. ಕರ್ನಾಟಕ ತಂಡ 16 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.
ವಿಜೇತ ತಂಡಕ್ಕೆ 10,000 ರೂ. ನಗದು, ಟ್ರೋಫಿ, ಚಿನ್ನದ ಪದಕ, ರನ್ನರ್ ಅಪ್ ತಂಡಕ್ಕೆ 6,000 ರೂ. ನಗದು, ಟ್ರೋಫಿ, ಬೆಳ್ಳಿ ಪದಕ ಬಹುಮಾನ ನೀಡಲಾಯಿತು. ಅದೇ ರೀತಿ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್, ಬೌಲರ್, ಪಂದ್ಯಶ್ರೇಷ್ಠ ಪ್ರಶಸ್ತಿ, ಎಲ್ಲಾ ಆಟಗಾರರಿಗೆ ಉಡುಗೊರೆ ನೀಡಲಾಯಿತು.
ಕ್ರೀಡಾಕೂಟವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತ ಎನ್.ಜಿ. ಮೋಹನ್ ಉದ್ಘಾಟಿಸಿದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ| ಡಾ| ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಸಂಯೋಜಕರಾದ ಧೀರಜ್ ಸಿಕ್ವೇರ, ಜೇಷ್ಮಾ ಡಿಸೋಜ, ವೃಂದಾ ಇದ್ದರು.
ಅಪೂರ್ವ ಕಾರ್ಯಕ್ರಮ ನಿರೂಪಿಸಿದರು. ಧೀರಜ್ ಸಿಕ್ವೇರ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜೇಷ್ಮಾ ಡಿಸೋಜ ವಂದಿಸಿದರು.