Advertisement
ಕೆಂಜಾರಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತ ನಾಡುವುದಕ್ಕೆ ನಿರ್ಮಿಸಿದ್ದ ವೇದಿಕೆಗೆ ಆಗಮಿಸಿದ ಅಮಿತ್ ಶಾ ಅವರು ಕಾರ್ಯಕರ್ತರತ್ತ ಕೈಬೀಸಿದಾಗ ಅಲ್ಲಿ ಸೇರಿದ್ದ ಸಾವಿರಕ್ಕೂ ಅಧಿಕ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ವೇದಿಕೆಯಲ್ಲಿ ಅಮಿತ್ ಶಾ ಅವರಿಗೆ ಪಕ್ಷದ ಮುಖಂಡರು ಹಾರ ಹಾಕಿ, ಪೇಟಾ ತೊಡಿಸಿ ಸಮ್ಮಾನಿಸಿದರು.
ಕೆಂಜಾರಿನಲ್ಲಿ 15 ನಿಮಿಷಗಳ ಕಾಲ ಕಾರ್ಯಕರ್ತರನ್ನು ಉದ್ದೇಶಿಸಿ ಮಾತ ನಾಡುವುದಕ್ಕೆ ಜಿಲ್ಲಾ ಬಿಜೆಪಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಮಿತ್ ಶಾ ಕಾರ್ಯಕರ್ತರತ್ತ ಕೈಬೀಸಿ ಹೂಗುತ್ಛಗಳನ್ನು ಸ್ವೀಕರಿಸಿ ವೇದಿಕೆ ಯಿಂದ ನಿರ್ಗಮಿಸಿದರು. ಇದರಿಂದ ಕಾರ್ಯಕರ್ತರಿಗೆ ಕೊಂಚ ನಿರಾಶೆಯಾಯಿತು. ಶಾ ಆರೋಗ್ಯದಲ್ಲಿ ಅಲ್ಪ ಏರುಪೇರು ಉಂಟಾಗಿರುವುದರಿಂದ ಅವರು ಭಾಷಣ ಮಾಡುವುದು ಸಾಧ್ಯವಾಗುತ್ತಿಲ್ಲ ಎಂದು ಆಯೋ ಜಕರು ಘೋಷಿಸಿದರು. ಬಳಿಕ ಅಮಿತ್ ಶಾ ಕಾರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದತ್ತ ತೆರಳಿದರು. ಮಾಜಿ ಸಚಿವ ಜೆ. ಕೃಷ್ಣಪಾಲೆಮಾರ್, ಮಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್, ಮಾಜಿ ಶಾಸಕ ಎನ್. ಯೋಗೀಶ್ ಭಟ್, ವಿಧಾನಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ದ.ಕ. ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮೀನುಗಾರಿಕೆ ಮಹಾಮಂಡಲದ ಅಧ್ಯಕ್ಷ ಯಶಪಾಲ್ ಸುವರ್ಣ, ಮುಖಂಡರಾದ ಬದ್ರಿನಾಥ ಕಾಮತ್, ಸುಲೋಚನಾ ಜಿ.ಕೆ. ಭಟ್, ಡಾ| ವೈ. ಭರತ್ ಶೆಟ್ಟಿ, ಕಿಶೋರ್ ರೈ, ಈಶ್ವರ ಕಟೀಲು, ರವಿಶಂಕರ ಮಿಜಾರು, ಸತ್ಯಜಿತ್ ಸುರತ್ಕಲ್, ಸುದರ್ಶನ್ ಮೂಡಬಿದಿರೆ, ಜಿತೇಂದ್ರ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ, ಕ್ಯಾ| ಬೃಜೇಶ್ ಚೌಟ, ಪೂಜಾ ಪೈ, ಶೋಭೇಂದ್ರ ಸಸಿಹಿತ್ಲು, ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.
Related Articles
Advertisement
ಮಧ್ಯಾಹ್ನ 12.30ರಿಂದ ಬಂಟ್ವಾಳದಲ್ಲಿ ಬಂಟ್ವಾಳ, ಪುತ್ತೂರು ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳ ನವಶಕ್ತಿ ಸಮಾವೇಶದಲ್ಲಿ ಬೂತ್ ಮಟ್ಟದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿ ಪಕ್ಷ ಸಂಘಟನೆಗೆ ಪ್ರೇರೇಪಣೆ, ಮಾರ್ಗದರ್ಶನ ನೀಡಲಿದ್ದಾರೆ. ಇಲ್ಲಿ 3 ಕ್ಷೇತ್ರಗಳ 600 ಬೂತ್‌ಗಳಿಂದ ಸುಮಾರು 5,400 ಬೂತ್ ಪ್ರಮುಖರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಪರಾಹ್ನ 3 ಗಂಟೆಗೆ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಭೇಟಿ ನೀಡುವರು. 3.30ಕ್ಕೆ ಸುರತ್ಕಲ್‌ನಲ್ಲಿ ಪತ್ರಿಕಾಗೋಷ್ಠಿ, ಸಂಜೆ 5 ಗಂಟೆಗೆ ಮಲ್ಪೆಯಲ್ಲಿ ಮೀನುಗಾರರ ಸಮಾವೇಶವನ್ನುದ್ದೇಶಿಸಿ ಮಾತನಾಡುವರು. 7 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವರು. ಮಂಗಳವಾರ ರಾತ್ರಿ ಉಡುಪಿ ಬನ್ನಂಜೆಯ ಪ್ರವಾಸಿ ಬಂಗಲೆಯಲ್ಲಿ ತಂಗುವರು.