Advertisement

ರಾಜ್ಯದಲ್ಲಿ 1,093 ರೈತ ಉತ್ಪಾದಕ ಸಂಸ್ಥೆ ರಚನೆ: ನಳಿನ್‌ಕುಮಾರ್‌ ಕಟೀಲ್‌

08:29 PM Jul 07, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ 1093 ರೈತ ಉತ್ಪಾದಕ ಸಂಸ್ಥೆ (ಎಫ್ಪಿಒ)ಗಳನ್ನು ಸ್ಥಾಪನೆ ಮಾಡಲಾಗಿದೆ. ಇದರಿಂದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯುವಂತೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹೇಳಿದ್ದಾರೆ.

Advertisement

ಬಿಜೆಪಿ ರಾಜ್ಯ ರೈತ ಮೋರ್ಚಾದ ವತಿಯಿಂದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೆ ಇರುವ ಮಾರುಕಟ್ಟೆ ಅವಕಾಶಗಳು ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಫ್ಪಿಒಗಳಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳಿಂದ ಒಟ್ಟು ಸುಮಾರು 80 ಲಕ್ಷ ರೂಪಾಯಿ ನೀಡಲಾಗುತ್ತಿದೆ. ರೈತರ ವಾರ್ಷಿಕ ಆದಾಯ ದುಪ್ಪಟ್ಟುಗೊಳಿಸಲು ಪ್ರಧಾನಿಯವರು ದೃಢಸಂಕಲ್ಪ ಮಾಡಿದ್ದು, ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.

ಯುವಕರು ಉದ್ಯಮ- ಉದ್ಯೋಗಕ್ಕಾಗಿ ಬೆಂಗಳೂರು ಮತ್ತಿತರ ನಗರಕ್ಕೆ ತೆರಳುವ ಕಾರಣ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಕೃಷಿಯಲ್ಲಿ ಉತ್ತಮ ಆದಾಯ ಬರುವಂತಾದರೆ ಕೃಷಿಯ ಘನತೆ ಹೆಚ್ಚಲಿದೆ. ಕೃಷಿಯ ಆದಾಯ ಹೆಚ್ಚುತ್ತಿರುವ ಕಾರಣ ಇದೀಗ ಎಂಜಿನಿಯರ್‌ಗಳೂ ಕೃಷಿಯತ್ತ ಮುಖ ಮಾಡುತ್ತಿ¨ªಾರೆ ಎಂದು ವಿಶ್ಲೇಷಿಸಿದರು.

ಕುರಿ, ಮೇಕೆ, ಕೋಳಿ, ಮೀನು ಸಾಕಣೆಗೆ 87 ಲಕ್ಷ ಸಾಲ ನೀಡಿ ಅದರಲ್ಲಿ 50 ಲಕ್ಷ ರೂಪಾಯಿ ಸಬ್ಸಿಡಿ ಕೊಡುವ ಯೋಜನೆ ಜಾರಿಯಲ್ಲಿದೆ. ಕೃಷಿಗೆ ಆದ್ಯತೆ ಕೊಡುವ ಅದ್ಭುತ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ನುಡಿದರು.

ರೈತರಿಗಾಗಿ ಫ‌ಸಲ್‌ ಬಿಮಾ ಯೋಜನೆ ಜಾರಿ ಮಾಡಿ, ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ರೈತರ ಉತ್ಪನ್ನ ಶೇಖರಣೆಗೆ ಜಿಲ್ಲೆಗೊಂದು ಕೋಲ್ಡ್ ಸ್ಟೋರೇಜ್‌ ನಿರ್ಮಾಣಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ. ಹಿಂದಿನ ಆಡಳಿತವು ರೈತರ ಬಗ್ಗೆ ಕೇವಲ ಮಾತಿನ ಕಳಕಳಿಯನ್ನು ತೋರಿಸುತ್ತಿತ್ತು ಎಂದು ತಿಳಿಸಿದರು.

Advertisement

ಬಸವರಾಜ ಬೊಮ್ಮಾಯಿ ಅವರ ಸರಕಾರವು ರೈತ ಸಮುದಾಯದ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಲು ಉತ್ಪಾದಕರಿಗಾಗಿ ಬ್ಯಾಂಕ್‌ ನಿರ್ಮಿಸಿದ್ದು, ಇವೆರಡು ಯೋಜನೆಗಳೂ ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಂಡಿವೆ ಎಂದರು.

ಯಂತ್ರೋಪಕರಣಗಳಿಗೆ ಸಹಾಯಧನ- ಸಹಕಾರ, ಮಾರ್ಗದರ್ಶನ ನೀಡಲಾಗುತ್ತಿದೆ. ರೈತರು ಪ್ರಯೋಗಶೀಲರಾಗಬೇಕು ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ರೈತರು ಹೆಚ್ಚು ಹೆಚ್ಚು ಪ್ರಯೋಗಶೀಲರಾಗಿ ಇರುವ ಕಾರಣ ಆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದರು. ಬದಲಾವಣೆಯ ಅನ್ವೇಷಣೆ- ಹುಡುಕಾಟವೇ ಇದಕ್ಕೆ ಕಾರಣ ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ರೈತರಿಗೆ ಉತ್ತಮ ಕಾರ್ಯಕ್ರಮಗಳ ಕುರಿತು ತಿಳಿಸಿ ರೈತರಲ್ಲಿ ಭರವಸೆ ತುಂಬುವ ಕಾರ್ಯವನ್ನು ರೈತ ಮೋರ್ಚಾ ಮಾಡುತ್ತಿದೆ. ನಮ್ಮ ಸರಕಾರ ಯೋಜನೆಗಳ ಬಗ್ಗೆ ಕೇವಲ ಮಾತನಾಡುವುದಿಲ್ಲ. ಯೋಜನೆಗಳನ್ನು ಕೆಳಹಂತದವರೆಗೆ ತಲುಪಿಸುವ ಕಾರ್ಯವನ್ನು ಅದು ಮಾಡುತ್ತಿದೆ ಎಂದರು.

ಸರಕಾರ ಮತ್ತು ರೈತರ ಮಧ್ಯೆ ಕೊಂಡಿಯಾಗಿ ರೈತಮೋರ್ಚಾ ಕೆಲಸ ಮಾಡುತ್ತಿದೆ. ಈ ಕೆಲಸ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ತಿಳಿಸಿದರು. ರೈತರ ಪರವಾಗಿ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ.ವಿ.ಕೆ. ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಕಂಠಮೂರ್ತಿ, ವೆಂಕಟ್‌ ರೆಡ್ಡಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್‌ ಮತ್ತು ಗುರುಲಿಂಗ ಗೌಡರ, ರೈತ ಮೋರ್ಚಾ ಕಾರ್ಯದರ್ಶಿ ಡಾ ನವೀನ್‌ ಅವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next