ವಿಶೇಷ ವರದಿ-ಮಂಗಳೂರು: ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಸದ್ಯ 5.51 ಮೀ. ನೀರು ಸಂಗ್ರಹವಿದ್ದು, ನಗರಕ್ಕೆ ಈ ಬಾರಿಯ ಬೇಸಗೆಯಲ್ಲಿ ನೀರಿನ ಕೊರತೆಯ ಆತಂಕ ಸದ್ಯಕ್ಕೆ ದೂರವಾಗಿದೆ. ಪ್ರಸ್ತುತ ತುಂಬೆಯಲ್ಲಿ ಇರುವ ನೀರಿನ ಪ್ರಮಾಣ ಹಾಗೂ ಎಎಂಆರ್ ವೆಂಟೆಡ್ ಡ್ಯಾಂನಲ್ಲಿರುವ ಸಂಗ್ರಹದಿಂದ ನಗರಕ್ಕೆ ಜೂ.5ರ ವರೆಗೆ ನೀರು ಪೂರೈಸಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷ ಮಾರ್ಚ್ ತಿಂಗಳ ಮಧ್ಯಭಾಗದಿಂದಲೇ ತುಂಬೆ ವೆಂಟೆಡ್ ಡ್ಯಾಂನ ನೀರು ಸಂಗ್ರಹದಲ್ಲಿ ಕುಸಿತ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಕುಡಿಯುವ ನೀರಿನ ಕೊರತೆ ನಿಭಾಯಿಸಲು ಕಳೆದ ವರ್ಷ ಎಪ್ರಿಲ್ ಮಧ್ಯಭಾಗದಿಂದಲೇ ನೀರು ರೇಷನಿಂಗ್ ಜಾರಿ ಮಾಡಲಾಗಿತ್ತು. ಇದರನ್ವಯ ವಾರದಲ್ಲಿ ಎರಡು ದಿನ ನೀರು ಸ್ಥಗಿತ ಮತ್ತು ನಾಲ್ಕು ದಿನ ನೀರು ಸರಬರಾಜು ಮಾಡಲಾಗುತ್ತಿದೆ.
ತುಂಬೆ ವೆಂಟೆಡ್‌ಡ್ಯಾಂನಲ್ಲಿ ನೀರಿನ ಪ್ರಮಾಣವನ್ನು ಕಾಯ್ದುಕೊಳ್ಳಲು ಈ ಬಾರಿ ಎ.15ರಂದು ಎಎಂಆರ್ ಡ್ಯಾಂನಿಂದ ನೀರು ಹರಿಸಿ 6 ಮೀ. ಗೇರಿಸಲಾಗಿತ್ತು. ಈಗ ಎ. 27ರಂದು ಡ್ಯಾಂನಲ್ಲಿ ನೀರಿನ ಪ್ರಮಾಣ 5.5 ಮೀ. ಇತ್ತು. ಇದಲ್ಲದೆ ಎಎಂಆರ್ ಡ್ಯಾಂನಲ್ಲಿ ಸುಮಾರು 4 ಮೀ. ನೀರು ಸಂಗ್ರಹವಿದೆ. ನೇತ್ರಾವತಿ ನದಿ ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಪುತ್ತೂರು ನಗರಕ್ಕೆ ನೀರು ಪೂರೈಸುವ ನೆಕ್ಕಿಲಾಡಿ ವೆಂಟೆಡ್ ಡ್ಯಾಂ ತುಂಬಿ ಹರಿಯುತ್ತಿದ್ದು, ಎಎಂಆರ್ ಡ್ಯಾಂನಲ್ಲಿ ನೀರು ಸಂಗ್ರಹದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.
ಮಂಗಳೂರಿಗೆ ದಿನಂಪ್ರತಿ 160 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಈ ಪ್ರಮಾಣದಂತೆ, ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ 4 ಮೀ. ಎತ್ತರ ನೀರು ಇದ್ದರೆ 5.21 ಮಿಲಿಯನ್ ಕ್ಯುಬಿಕ್ ಮೀ. ನೀರು ಸಂಗ್ರಹವಾಗಿ 23 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ.
4.50 ಮೀ. ಎತ್ತರ ಇದ್ದರೆ 6.40 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಿದ್ದು, 30 ದಿನ ಗಳವರೆಗೆ ಪೂರೈಕೆ ಮಾಡಬಹುದಾಗಿದೆ. 5 ಮೀ. ಎತ್ತರ ನೀರಿದ್ದರೆ 7.71 ಮಿಲಿಯನ್ ಕ್ಯುಬಿಕ್ ಮೀ. ನೀರು ಸಂಗ್ರಹವಾಗುತ್ತದೆ. ಇದು 40 ದಿನಗಳವರೆಗೆ ಸಾಕಾಗುತ್ತದೆ. 5.50 ಮೀ. ಎತ್ತರಕ್ಕೆ ಸಂಗ್ರಹ ಮಾಡಿದರೆ 9.17 ಮಿಲಿಯನ್ ಕ್ಯುಬಿಕ್ ಮೀ. ನೀರು ಸಂಗ್ರಹವಿರುತ್ತದೆ ಮತ್ತು ಇದರಿಂದ 48 ದಿನಗಳವರೆಗೆ ನೀರು ಪೂರೈಕೆ ಮಾಡಬಹುದಾಗಿದೆ. ಈ ಅಂದಾಜು ಪ್ರಕಾರ, ಜೂನ್ 5 ರ ವರೆಗೆ ನಗರಕ್ಕೆ ಕುಡಿಯುವ ನೀರು ಪೂರೈಸಲು ಸಾಧ್ಯವಿದೆ.
ಸದ್ಯಕ್ಕೆ ಸಮಸ್ಯೆ ಇಲ್ಲ
ತುಂಬೆ ವೆಂಟೆಡ್‌ಡ್ಯಾಂನಲ್ಲಿ ಪ್ರಸ್ತುತ ಇರುವ ನೀರಿನ ಸಂಗ್ರಹದಿಂದ ಮಂಗಳೂರು ನಗರಕ್ಕೆ ಸುಮಾರು ಒಂದು ತಿಂಗಳು ಅಬಾಧಿತವಾಗಿ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಆದುದರಿಂದ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದು. ಕಡಿಮೆಯಾದರೆ ಎಎಂಆರ್ ಡ್ಯಾಂನಿಂದ ನೀರು ಪಡೆದುಕೊಳ್ಳಲಾಗುವುದು.
-ಅಜಿತ್ ಕುಮಾರ್ ಹೆಗ್ಡೆ ಶಾನಾಡಿ,
ಆಯುಕ್ತ, ಮಹಾನಗರಪಾಲಿಕೆ