Advertisement

ಮೈತ್ರಿ ಸರ್ಕಾರದಲ್ಲಿ ಏರಿಕೆಯಾದ ನೀರಿನ ಬಿಲ್, ತೊಂದರೆ ಅನುಭವಿಸುತ್ತಿರುವ ಗ್ರಾಹಕರು

05:45 PM Oct 20, 2019 | Team Udayavani |

ಮಂಗಳೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ನೀರಿನ ದರ ಏರಿಕೆ ಮಾಡಿದ್ದು, ಈಗ ಗ್ರಾಹಕರು ಬವಣೆ ಪಡುವಂತಾಗಿದೆ. 2019ರ ಏ.1ರಿಂದ ನೀರಿನ ದರ ಏರಿಕೆಯಾಗಿದ್ದು ಕಳೆದ 6 ತಿಂಗಳಿಂದ ನಗರ ಪಾಲಿಕೆ ಸಮರ್ಪಕವಾಗಿ ನೀರಿನ ಬಿಲ್ ವಿತರಣೆ ಮಾಡಿಲ್ಲ. ಈಗ ಏಕಾಏಕಿ ಏರಿಕೆಯಾದ ಮೊತ್ತ ಸೇರಿಸಿ ಬಿಲ್ ನೀಡುತ್ತಿದ್ದು, ಗ್ರಾಹಕರು ಸಾವಿರಾರು ಬಿಲ್ ಪಾವತಿಸುವ ಸ್ಥಿತಿ ನಿರ್ಮಾಣವಾಗಿದೆ.

Advertisement

ನೀರಿನ ಬಿಲ್ ಏರಿಕೆ ಸಂಬಂಧಿಸಿ 2018ರ ಅ.31ರಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ಸಂದರ್ಭ ಗೃಹ ಬಳಕೆಯ ಸಂಪರ್ಕ ದರಗಳನ್ನು ಹೊರತು ಪಡಿಸಿ , ಗೃಹೇತರ ಹಾಗೂ ವಾಣಿಜ್ಯ ಬಳಕೆಯ ಸಂಪರ್ಕ ದರಗಳನ್ನು ಮಾತ್ರ ಪರಿಷ್ಕಕರಿಸಲು ನಿರ್ಣಯಿಸಲಾಗಿತ್ತು. 2019ರ ಮಾರ್ಚ್ ಬಳಿಕ ಪಾಲಿಕೆಯಲ್ಲಿ ಚುನಾಯಿತ ಆಡಳಿತ ಅಂತ್ಯಗೊಂಡು ಆಡಳಿತಾಧಿಕಾರಿ ಅಧಿಕಾರ ವಹಿಸಿಕೊಂಡಿದ್ದರು.

2019ರ ಜೂ.21ರಂದು ಆಡಳಿತಾಧಿಕಾರಿ ಅವರು ಗೃಹ ಬಳಕೆಯ ನೀರಿನ ದರವನ್ನೂ ಏರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಗೃಹ ಬಳಕೆಯ ಸಂಪರ್ಕಕ್ಕೆ ಮಾಸಿಕ ಕನಿಷ್ಠ ದರ 65 ರೂ. ನಿಗದಿಯಾಗಿತ್ತು. ಪ್ರತಿ ತಿಂಗಳು 24 ಸಾವಿರ ಲೀಟರ್ ನೀರು ಬಳಸಲು ಅವಕಾಶವಿತ್ತು. ಅದಕ್ಕಿಂತ ಹೆಚ್ಚುವರಿಯಾಗಿ ಉಪಯೋಗಿಸಿದರೆ ಮಾತ್ರ ಹೆಚ್ಚುವರಿ ಬಳಕೆಯ ಬಿಲ್ ನೀಡಲಾಗುತ್ತಿತ್ತು. ಈಗ ಆಡಳಿತಾಧಿಕಾರಿ ಮಾಸಿಕ ಕನಿಷ್ಠ ದರವನ್ನು 56 ರೂ. ಮಾಡಿದ್ದಾರೆ. ಆದರೆ ಪ್ರತಿ ತಿಂಗಳು 8 ಸಾವಿರ ಲೀಟರ್ ನೀರು ಮಾತ್ರ ಉಪಯೋಗಿಸಬಹುದಾಗಿದೆ. ಮಾಸಿಕ 25 ಸಾವಿರ ಲೀಟರ್‌ಗಿಂತ ಅಧಿಕ ನೀರು ಉಪಯೋಗಿಸಿದರೆ ಪ್ರತಿ ಕಿ.ಲೀಗ್ 13 ರೂ. ಅಧಿಕ ಬಿಲ್ ನೀಡಬೇಕಾಗಿದೆ.
ಗೃಹ ಬಳಕೆಯ ನೀರಿನ ದರ ಏರಿಕೆ ಮಾಡಿದ ಬಗ್ಗೆ ನಗರ ಪಾಲಿಕೆ ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡಿಲ್ಲ. ನೀರಿನ ಬಿಲ್ ವಿತರಣೆಯ ಸಿಬ್ಬಂದಿಗಳನ್ನು ಇತರ ಕೆಲಸಗಳಿಗೆ ನಿಯೋಜಿಸಿದ ಕಾರಣ ಏಪ್ರಿಲ್ ತಿಂಗಳಿಂದ ಗ್ರಾಹಕರಿಗೆ ಸರಿಯಾಗಿ ನೀರಿನ ಬಿಲ್ ಕೂಡಾ ವಿತರಣೆ ಮಾಡಿಲ್ಲ.ಈಗ ಹಿಂದಿನ ಪರಿಷ್ಕೃತ ದರ ಸಹಿತ ಹಿಂದಿನ ಎಲ್ಲ ಬಿಲ್‌ಗಳನ್ನು ಸೇರಿಸಿ ಬಿಲ್ ನೀಡಲಾಗುತ್ತಿದೆ. ಇದರಿಂದ ಗ್ರಾಹಕರು ತೊಂದರೆಗೆ ಒಳಗಾಗಿದ್ದು ಜನಪ್ರತಿನಿಧಿಗಳ ಬಳಿ ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ.

* ಮೈತ್ರಿ ಸರ್ಕಾರದ ಅಡಳಿತದಲ್ಲಿ ಆಡಳಿತಾಧಿಕಾರಿ ಪಾಲಿಕೆಯ ನೀರಿನ ಬಿಲ್ ಏರಿಕೆ ಮಾಡಿದ್ದಾರೆ. ಆಗ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್ ಅವರು ಕೂಡಾ ಈ ಬಗ್ಗೆ ಗಮನ ಹರಿಸಿಲ್ಲ. 4-5 ತಿಂಗಳಿಂದ ಬಿಲ್ ವಿತರಣೆ ಮಾಡದೆ ಈಗ ಏಕಾಏಕಿ ಪರಿಷ್ಕೃತ ದರ ಸೇರಿಸಿ ಬಿಲ್ ನೀಡುತ್ತಿರುವ ಕಾರಣ ಗ್ರಾಹಕರಿಗೆ ತೊಂದರೆಯಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆಡಳಿತಾಧಿಕಾರಿ ಕೈಗೊಂಡ ನಿರ್ಣಯಕ್ಕೆ ಈಗ ತೊಂದರೆ ಅನುಭವಿಸುವಂತಾಗಿದೆ. ಗ್ರಾಹಕರಿಗೆ ಈಗ ನೀಡುತ್ತಿರುವ ಬಿಲ್ ಸರಿಯಾಗಿದೆಯಾ ಎನ್ನುವ ಬಗ್ಗೆ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಬೇಕು. ಬಿಲ್ ಪಾವತಿಗೆ ಕಾಲಾವಕಾಶ ಒದಗಿಸುವುದು ಸೇರಿದಂತೆ ಗ್ರಾಹಕರಿಗೆ ಯಾವುದೇ ತೊಂದರೆ ನೀಡದಂತೆ ಮನಪಾ ಆಡಳಿತಕ್ಕೆ ಸೂಚಿಸಲಾಗಿದೆ.
ವೇದವ್ಯಾಸ ಕಾಮತ್,
ಶಾಸಕರು, ಮಂಗಳೂರು ದಕ್ಷಿಣ

Advertisement

Udayavani is now on Telegram. Click here to join our channel and stay updated with the latest news.

Next