Advertisement

176 ಪೊಲೀಸ್‌ ಅಧಿಕಾರಿ, ಸಿಬಂದಿಗೆ ನೋಟಿಸ್‌

01:17 AM Feb 20, 2020 | Team Udayavani |

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಕಳೆದ ಡಿ. 19ರಂದು ನಡೆದ ಘರ್ಷಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಮತ್ತು ಡಿಸಿಪಿ ಅರುಣಾಂಶಗಿರಿ ಸಹಿತ 176 ಪೊಲೀಸ್‌ ಅಧಿಕಾರಿ-ಸಿಬಂದಿಗೆ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿಯೂ ಆದ ಮ್ಯಾಜಿಸ್ಟೀರಿಯಲ್‌ ತನಿಖಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ನಗರದ ಮಿನಿ ವಿಧಾನಸೌಧದಲ್ಲಿ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಬುಧವಾರ ಮ್ಯಾಜಿಸ್ಟ್ರೀ ಯಲ್‌ ವಿಚಾರಣೆಯ ಬಳಿಕ ಅವರು ಸುದ್ದಿ ಗಾರರೊಂದಿಗೆ ಮಾತನಾಡಿದರು.
ಪೊಲೀಸ್‌ ಇಲಾಖೆಯಿಂದ ನಿಯುಕ್ತರಾಗಿ ರುವ ನೋಡಲ್‌ ಅಧಿಕಾರಿ, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ಅವರು ಪ್ರಕರಣದ ಬಗ್ಗೆ ಸಾಕ್ಷ್ಯ ಹೇಳಲು ಸಿದ್ಧರಿರುವ 176 ಪೊಲೀಸರ ಪಟ್ಟಿಯನ್ನು ನೀಡಿದ್ದಾರೆ. ಫೆ. 25ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಲಾಗಿದ್ದು, ಆ ದಿನ 176 ಮಂದಿಯ ಪೈಕಿ 12 ಮಂದಿ ಪೊಲೀಸ್‌ ಅಧಿಕಾರಿ-ಸಿಬಂದಿಗೆ ಸಾಕ್ಷ್ಯ ಹೇಳಲು ಅವಕಾಶ ನೀಡಲಾಗುವುದು. ಉಳಿದವರಿಗೆ ಹಂತ ಹಂತವಾಗಿ ಸಾಕ್ಷ್ಯ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಜಗದೀಶ್‌ ಅವರು ತಿಳಿಸಿದರು.

204 ಮಂದಿ ಸಾಕ್ಷ್ಯ
ಡಿ. 19ರಂದು ಘಟನೆ ನಡೆದ ಸ್ಥಳಗಳನ್ನು ಡಿ. 31ರಂದು ಮಹಜರು ಮಾಡಲಾಗಿದೆ. ಜ. 7, ಫೆ. 6, ಫೆ. 13ರಂದು ಸಾರ್ವಜನಿಕರ ಲಿಖೀತ ಸಾಕ್ಷ್ಯ ಹೇಳಿಕೆ ಮತ್ತು ವೀಡಿಯೋ ದೃಶ್ಯಾವಳಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 203 ಮಂದಿ ಸಾಕ್ಷ್ಯ ನುಡಿದಿದ್ದಾರೆ. ಪೊಲೀಸರು 50 ವೀಡಿಯೋಗಳಿರುವ ಪೆನ್‌ಡ್ರೈವ್‌ ನೀಡಿದ್ದಾರೆ. ಸಾರ್ವಜನಿಕರು 1 ವೀಡಿಯೋ ಸಿಡಿ ಸಲ್ಲಿಸಿದ್ದಾರೆ. ಬುಧವಾರ ಮಾಜಿ ಮೇಯರ್‌ ಕೆ. ಅಶ್ರಫ್ ಲಿಖೀತ ಸಾಕ್ಷ್ಯ ಹೇಳಿಕೆ ನೀಡಿದ್ದಾರೆ.
ಇದರೊಂದಿಗೆ ಈ ವರೆಗೆ 204 ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಶ್ರಫ್ ಅವರು ಫಾರ್ವರ್ಡ್‌ ಮಾಡಲಾದ ವೀಡಿಯೋವಿರುವ ಸಿಡಿಯನ್ನು ನೀಡಿದ್ದರಿಂದ ಅದನ್ನು ವಾಪಸ್‌ ನೀಡಲಾಗಿದೆ ಎಂದರು.
ಈ ಘಟನೆಯಲ್ಲಿ ಗಾಯಗೊಂಡ ಹಲವಾರು ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಅಲ್ಲದೆ ಜೈಲು ಸೇರಿದ್ದ ಹಲವರು ಇದೀಗ ಜಾಮೀನು ಪಡೆದು ಹೊರಬಂದಿದ್ದಾರೆ. ಇವರೆಲ್ಲರೂ ಮುಂದಿನ ವಿಚಾರಣೆಯ ದಿನಗಳಲ್ಲಿ ಖುದ್ದು ಹೇಳಿಕೆ ನೀಡಬಹುದು ಎಂದರು.

ಫೆ. 24ಕ್ಕೆ ಹೈಕೋರ್ಟ್‌ಗೆ ಮಾಹಿತಿ
ಇದುವರೆಗೆ ಸಲ್ಲಿಕೆಯಾದ ಸಿಸಿಟಿವಿ ಫ‌ುಟೇಜ್‌ ಮತ್ತು ವೀಡಿಯೋ ಸಿಡಿಗಳ ಸಂಖ್ಯೆ, ಸಾಕ್ಷ್ಯಗಳ ಹೇಳಿಕೆ ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಫೆ. 24ರಂದು ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಜಗದೀಶ್‌ ತಿಳಿಸಿದರು.

ಮಾರ್ಚ್‌ 23ಕ್ಕೆ ಹೈಕೋರ್ಟ್‌ಗೆ ವರದಿ
ಪ್ರಕರಣದ ತನಿಖಾ ವರದಿಯನ್ನು ಮಾ. 23ಕ್ಕೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶಿಸಿದೆ. ಅದರಂತೆ ಆ ದಿನ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು ಎಂದರು.

Advertisement

ಮಾಜಿ ಮೇಯರ್‌ ಕೆ. ಅಶ್ರಫ್ ಹೇಳಿಕೆ
ಬುಧವಾರ ಬೆಳಗ್ಗೆ 11ಕ್ಕೆ ಸಾಕ್ಷ್ಯ ನೀಡಲು ಕಾಲಾವಕಾಶ ನೀಡಲಾಗಿದ್ದರೂ ಕೂಡ 12.40ರ ವರೆಗೆ ಯಾರೂ ಬಂದಿರಲಿಲ್ಲ. ಆ ಬಳಿಕ ಮಾಜಿ ಮೇಯರ್‌ ಕೆ. ಅಶ್ರಫ್ ಲಿಖೀತ ಹೇಳಿಕೆ ನೀಡಿದರು.

ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು “ಡಿ. 19ರ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ. ಪರಿಸ್ಥಿತಿ ಕೈ ಮೀರಿದಾಗ ಕಮಿಷನರ್‌ ಹರ್ಷ ಖುದ್ದು ನನ್ನನ್ನು ಘಟನಾ ಸ್ಥಳಕ್ಕೆ ಬರುವಂತೆ ಸೂಚಿಸಿದ್ದರು. ಪ್ರತಿಭಟನಕಾರರನ್ನು ಸಮಾಧಾನಪಡಿಸಲು ವಿನಂತಿಸಿದ್ದರು. ಅದರಂತೆ ನಾನು ಸ್ಥಳಕ್ಕೆ ತೆರಳಿ ಜನರನ್ನು ಸಮಾಧಾನಪಡಿಸಲು ಯತ್ನಿಸಿದ್ದೆ. ಅಷ್ಟರಲ್ಲಿ ನನ್ನ ಮೇಲೆ ದಾಳಿಯಾಗಿದೆ. ಗಾಯಗೊಂಡ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈಗಾಗಲೇ ಪ್ರಕರಣದ ಬಗ್ಗೆ ಹೈಕೋರ್ಟ್‌ ಮೆಟ್ಟಿಲೇರಿದ್ದೇನೆ. ಪೊಲೀಸರು ನಡೆಸಿದ ದೌರ್ಜನ್ಯವನ್ನು ಲಿಖೀತ ದೂರಿನಲ್ಲಿ ತಿಳಿಸಿದ್ದೇನೆ. ಘಟನೆಯ ಬಗ್ಗೆ ಡಿ. 28ರಂದು ಬಂದರು ಠಾಣೆಗೆ ರಿಜಿಸ್ಟರ್ಡ್‌ ಪೋಸ್ಟ್‌ ಮೂಲಕ ದೂರು ನೀಡಿದ್ದರೂ ಈ ತನಕ ಎಫ್ಐಆರ್‌ ದಾಖಲಾದ ಬಗ್ಗೆ ಮಾಹಿತಿ ಇಲ್ಲ. ಪೊಲೀಸರಿಂದ ನಮಗಾದ ಅನ್ಯಾಯದ ಬಗ್ಗೆ ಹೋರಾಟ ಮುಂದುವರಿಸುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next