Advertisement
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆಯವರ ಕಾಳಜಿಯಿಂದ ಹಾಗೂ ನೆಲ್ಯಾಡಿ ಗ್ರಾ.ಪಂ.ನ ಸಹಕಾರದಿಂದಾಗಿ ನೆಲ್ಯಾಡಿಯಲ್ಲಿ ವಿವಿ ಘಟಕ ಸ್ಥಾಪನೆಗೆ ಮಂಜೂರಾಗಿರುವ 25 ಎಕ್ರೆ ಜಾಗದಲ್ಲಿ ಕಾಲೇಜು ಕಟ್ಟಡ, ವಿದ್ಯಾರ್ಥಿ ನಿಲಯ, ಆಟದ ಮೈದಾನ, ಉದ್ಯಾನವನ ಸೇರಿದಂತೆ ಇತರೆ ಆವಶ್ಯಕ ಕಾಮಗಾರಿ ನಡೆಸುವ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ, ಸಿಂಡಿಕೇಟ್ ಸಭೆಯಲ್ಲಿಟ್ಟು ಅನುಮೋದನೆಗೊಂಡ ಬಳಿಕ ಸರಕಾರಕ್ಕೆ ಸಲ್ಲಿಸಲಾಗುವುದು. ಮಂಗಳೂರು ವಿವಿಯ ನಾಲ್ಕು ಘಟಕ ಕಾಲೇಜುಗಳು ಈಗಾಗಲೇ ಕಾರ್ಯಾರಂಭಿಸುತ್ತಿದ್ದು ನೆಲ್ಯಾಡಿಯಲ್ಲಿ ಆರಂಭಗೊಳ್ಳುತ್ತಿರುವುದು 5ನೇ ಘಟಕ ಕಾಲೇಜು ಆಗಿದೆ. ಕೊಡಗು, ಉಡುಪಿ, ಕೊಣಾಜೆ ವಿವಿ ಆವರಣ ಹಾಗೂ ಮಂಗಳೂರಿನಲ್ಲಿ ಸಂಧ್ಯಾ ಕಾಲೇಜು ಈಗಾಗಲೇ ನಡೆಯುತ್ತಿವೆ. ಮಂಗಳೂರಿನಲ್ಲಿ ಇನ್ನೊಂದು ಘಟಕ ಕಾಲೇಜಿನ ಆರಂಭಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾಪು ಬೆಳಪುನಲ್ಲಿ ವಿಜ್ಞಾನ ಸಂಶೋಧನಾ ಕಾಲೇಜು ಆರಂಭಗೊಳ್ಳಲಿದ್ದು ಇದಕ್ಕೆ ಸರಕಾರದಿಂದ ಈಗಾಗಲೇ 75 ಕೋಟಿ ರೂ.ಅನುದಾನ ಘೋಷಣೆಯಾಗಿದೆ ಎಂದು ಭೈರಪ್ಪ ಹೇಳಿದರು. ಮಂಗಳೂರು ವಿವಿಗೆಂದೇ ಗೀತೆಯೊಂದು ಸಿದ್ಧಗೊಳ್ಳುತ್ತಿದ್ದು ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಮುಂದಿನ ಸೆಪ್ಟಂಬರ್ ವೇಳೆಗೆ ಇದು ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.
ದೀಪಾವಳಿ ವೇಳೆಗೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲು ಕ್ರಮಕೈಗೊಳ್ಳಲಾಗುವುದು. ಕಟ್ಟಡ ಶಂಕುಸ್ಥಾಪನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು. ಇಲ್ಲಿ ಆರಂಭಗೊಳ್ಳುವ ಕಾಲೇಜಿಗೆ ಈ ನಾಡಿನ ಸಂಸ್ಕೃತಿ, ಕಲೆ ಬಿಂಬಿಸುವ ಅಥವಾ ಹೋರಾಟಗಾರರ, ಗಣನೀಯ ಸೇವೆ ಸಲ್ಲಿಸಿದ, ದಾನಿಗಳ ಹೆಸರು ನಮೂದಿಸಲು ಅವಕಾಶವಿದೆ. ಇದನ್ನು ಇಲ್ಲಿನ ಸ್ಥಳೀಯರೇ ನಿರ್ಧರಿಸಿ, ಹೆಸರು ಸೂಚಿಸಿ ಎಂದು ಹೇಳಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಸೇರಿದಂತೆ ಪದವಿ ತರಗತಿಗಳು ಆರಂಭಗೊಳ್ಳಲಿದೆ. ಮುಂದಿನ ನಾಲ್ಕೈದು ವರ್ಷಗಳ ಬಳಿಕ ಇಲ್ಲಿನ ಪರಿಸ್ಥಿತಿ ನೋಡಿಕೊಂಡು ಎಂ.ಎ., ಎಂ.ಕಾಂ., ಸೇರಿದಂತೆ ಸ್ನಾತಕೋತ್ತರ ಪದವಿ ತರಗತಿಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯ ಬಳಿಕ ಕುಲಪತಿಯವರು ಮಂಗಳೂರು ವಿವಿಗೆ ಕಾದಿರಿಸಿದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳೂರು ವಿವಿ ಸಿಂಡಕೇಟ್ ಸದಸ್ಯ ವಿಜಯಕುಮಾರ್ ಸೊರಕೆ, ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಉಷಾ ಅಂಚನ್ ಮಾತನಾಡಿದರು. ತಾ.ಪಂ. ಸದಸ್ಯೆಯರಾದ ಆಶಾ ಲಕ್ಷ್ಮಣ್, ಕೆ.ಟಿ.ವಲ್ಸಮ್ಮ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಪಿಡಿಒ ದೇವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್ ಸ್ವಾಗತಿಸಿದರು. ನೆಲ್ಯಾಡಿ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯ ಸಹಶಿಕ್ಷಕ ವಿಮಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.