Advertisement

ಮಂಗಳೂರು ವಿಶ್ವವಿದ್ಯಾನಿಲಯ: 11 ಹೊಸ ಪದವಿ ಕಾಲೇಜು ಸ್ಥಾಪನೆ

12:40 PM Mar 22, 2017 | Team Udayavani |

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಒಂದು ಸಂಜೆ ಕಾಲೇಜು ಸಹಿತ ಒಟ್ಟು 11 ನೂತನ ಪದವಿ ಕಾಲೇಜುಗಳ ಸ್ಥಾಪನೆಗೆ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ದೊರೆತಿದೆ.

Advertisement

ಮಂಗಳೂರು ವಿ.ವಿ. ಆಡಳಿತ ಸೌಧದ ಸೆನೆಟ್‌ ಸಭಾಂಗಣದಲ್ಲಿ ಮಂಗಳವಾರ ಕುಲಪತಿ ಪ್ರೊ| ಕೆ.ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಸಂಧ್ಯಾ ಕಾಲೇಜು, ಬಜಪೆ ಕೊಳಂಬೆಯ ಪನಾ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಟಡೀಸ್‌, ಉಡುಪಿ ಮೂಳೂರಿನಲ್ಲಿ ಆಲ್‌ ಇಷಾನ್‌ ಮಹಿಳೆಯರ ಪ್ರಥಮ ದರ್ಜೆ ಕಾಲೇಜು, ಮಂಗಳೂರಿನ ಸಮಿಟ್‌ ವಿದ್ಯಾಸಂಸ್ಥೆ, ಕುಂದಾಪುರ ಖಂಬದಕೋಣೆಯಲ್ಲಿ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ ಕುಶಾಲನಗರದ ಅನುಗ್ರಹ ಮಹಿಳೆ ಯರ ಪ್ರಥಮ ದರ್ಜೆ ಕಾಲೇಜು, ಕುಂಟಿಕಾನ ಎ.ಜೆ. ಶೆಟ್ಟಿ ವಿದ್ಯಾ ಸಂಸ್ಥೆಯ ವಾಕ್‌ ಶ್ರವಣ ವಿಭಾಗ, ಪುತ್ತೂರು ಮೆಧಾ ಕಾಲೇಜು, ಕುಶಾಲನಗರ ಎಸ್‌.ಎಸ್‌. ಪದವಿ ಕಾಲೇಜು, ಹಾರ್ವರ್ಡ್‌ ಫೈರ್‌ ಆ್ಯಂಡ್‌ ಸೇಫ್ಟಿ, ಮಡಿಕೇರಿಯಲ್ಲಿ ಕೂರ್ಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹಾಸ್ಪಿಟಾಲಿಟಿ ಸೈನ್ಸ್‌ ಕಾಲೇಜುಗಳಿಗೆ ಅನುಮೋದನೆ ದೊರೆತಿದೆ.

ವಿ.ವಿ. ಕ್ಯಾಂಪಸ್‌ನ ಅನಂತರ ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳು ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಅಳವಡಿಸಲಾಗುವುದು. ವಿದ್ಯಾರ್ಥಿಗಳ ಹಾಜರಾತಿಗೂ ಇದೇ ಪದ್ಧತಿ ಜಾರಿಗೊಳಿಸಲಾಗುವುದು. ಮೂರನೇ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಬಯೋಮೆಟ್ರಿಕ್‌ ಪದ್ಧತಿಗೆ ಬದಲಾಯಿಸಿಕೊಳ್ಳಲು ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದ ಅವರು ವಿದ್ಯಾರ್ಥಿಗಳ ಗೈರು ಹಾಜರಿಯನ್ನು ವಿಶ್ವವಿದ್ಯಾನಿಲಯ ಗಂಭೀರವಾಗಿ ಪರಿಗಣಿಸಲಿದ್ದು ಈ ದಿಸೆಯಲ್ಲಿ ರಚಿಸಲಾದ ಜಾಗೃತ ದಳ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದರು.

ಸರಕಾರಿ ಅಧಿಕಾರಿಗಳು
ಉನ್ನತ ಶಿಕ್ಷಣ ಸಚಿವರ ಹೇಳಿಕೆಯಂತೆ ವಿ.ವಿ.ಗಳಲ್ಲಿ ಕುಲಸಚಿವರು, ಪರೀಕ್ಷಾಂಗ ಕುಲಸಚಿವರು, ಹಣಕಾಸು ಅಧಿಕಾರಿ ಹುದ್ದೆಗೆ ಸರಕಾರಿ ಅಧಿಕಾರಿಗಳನ್ನು ನೇಮಕಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಕಾಯ್ದೆಗೆ ತಿದ್ದುಪಡಿ ತರುವ ಕಾರ್ಯ ಅಂತಿಮ ಹಂತದಲ್ಲಿದೆ. ವಿಶ್ವ ಬ್ಯಾಂಕಿನಿಂದ ಸಾಲ ಪಡೆದು ಮೂಲ‌ ಸೌಕರ್ಯಗಳ ವೃದ್ಧಿಗೂ ಸರಕಾರ ಆಸಕ್ತಿ ವಹಿಸಿದ್ದು, ಮಂಗಳೂರು ವಿಶ್ವವಿದ್ಯಾನಿಲಯಕ್ಕೂ ರೂ.150 ಕೋಟಿಗಳ ನೆರವು ನಿರೀಕ್ಷಿಸಲಾಗಿದೆ ಎಂದರು. ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಕುಲಸಚಿವ ಪ್ರೊ| ಕೆ.ಎಂ. ಲೋಕೇಶ್‌ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ| ಎ.ಎಂ. ಖಾನ್‌, ಶೈಕ್ಷಣಿಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿ.ವಿ. ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್‌ ಹಾಜರಾತಿ
ಮಂಗಳೂರು ವಿ.ವಿ. ಕ್ಯಾಂಪಸ್‌ನ ಎಲ್ಲ ವಿಭಾಗಗಳಲ್ಲಿ ಮತ್ತು ತರಗತಿಗಳಲ್ಲಿ ಎಪ್ರಿಲ್‌ ಅಂತ್ಯದೊಳಗೆ ಬಯೋಮೆಟ್ರಿಕ್‌ ಹಾಜರಾತಿ ಪದ್ಧತಿಯನ್ನು ಅಳವಡಿಸಲಾಗುವುದು ಎಂದು ಕುಲಪತಿ ಪ್ರೊ| ಕೆ. ಭೈರಪ್ಪ ತಿಳಿಸಿದರು. ಆಡಳಿತ ಕಚೇರಿಯ ಬೋಧಕೇತರ ಸಿಬಂದಿಗಳಿಗೆ ಈಗಾಗಲೇ ಬಯೋಮೆಟ್ರಿಕ್‌ ಹಾಜರಾತಿ ಪದ್ಧತಿಯನ್ನು ಜಾರಿ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next