Advertisement

ಮಂಗಳೂರು ವಿಶ್ವವಿದ್ಯಾನಿಲಯ: 3 ಹೊಸ ವೃತ್ತಿಪರ ಕೋರ್ಸ್‌ಗಳಿಗೆ ಅನುಮೋದನೆ

12:55 AM Feb 05, 2020 | Team Udayavani |

ಉಳ್ಳಾಲ: ಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ಐದು ವರ್ಷಗಳ ಎಂಎಸ್‌ಸಿ ಇಂಟಿಗ್ರೇಟೆಡ್‌ ಕೋರ್ಸ್‌ ಇನ್‌ ಎಲೆಕ್ಟ್ರಾನಿಕ್ಸ್‌ ಪದವಿ ಸೇರಿದಂತೆ ಹೊಸ 3 ತಾಂತ್ರಿಕ ಕೋರ್ಸ್‌ಗಳಿಗೆ ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ವಿ.ವಿ. ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

Advertisement

ಮುಂದಿನ ಶೈಕ್ಷಣಿಕ ವರ್ಷದಿಂದ 5 ವರ್ಷಗಳ ಎಂಎಸ್‌ಸಿ ಇಂಟಿಗ್ರೇಟೆಡ್‌ ಕೋರ್ಸ್‌ ಇನ್‌ ಎಲೆಕ್ಟ್ರಾನಿಕ್ಸ್‌, ಎಂಎಸ್‌ಸಿ ಸೈಬರ್‌ ಸೆಕ್ಯೂರಿಟಿ ಮತ್ತು ಡಿಪ್ಲೊಮಾ ಇನ್‌ ಹಾಸ್ಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸುಗಳು ಲಭ್ಯವಾಗಲಿವೆ. ಇದರಲ್ಲಿ ಎಂಎಸ್‌ಸಿ ಇಂಟಿಗ್ರೇಟೆಡ್‌ ಕೋರ್ಸ್‌ ಪ್ರವೇಶಕ್ಕೆ ಪಿಯುಸಿ ವಿದ್ಯಾರ್ಹತೆಯಾಗಿರುತ್ತದೆ. ಒಂದು ವರ್ಷ ಬಿಎಸ್‌ಸಿ ಓದಿದರೆ ಡಿಪ್ಲೊಮಾ, 2 ವರ್ಷವಾದರೆ ಅಡ್ವಾನ್ಸ್‌ಡ್‌ ಡಿಪ್ಲೊಮಾ, 3 ವರ್ಷ ಪೂರ್ಣಗೊಳಿಸಿದರೆ ಬಿಎಸ್‌ಸಿ ಪದವಿಗೆ ಅರ್ಹರು. 4ನೆಯ ವರ್ಷ ಓದಿದರೆ ಬಿಎಸ್‌ಸಿ ಆನರ್ ಮತ್ತು 5 ವರ್ಷಗಳ ಶಿಕ್ಷಣ ಪೂರ್ಣಗೊಂಡಾಗ ಎಂಎಸ್‌ಸಿ ಪದವಿ ಲಭಿಸುವುದು ಈ ಕೋರ್ಸಿನ ವಿಶೇಷತೆ.

“ಭವಿಷ್ಯದ ಬೇಡಿಕೆಯಂತೆ ಕೋರ್ಸ್‌’
ಈ ಕೋರ್ಸ್‌ಗಳನ್ನು ಇಂದಿನ ಮತ್ತು ಭವಿಷ್ಯದ ಬೇಡಿಕೆಯ ಆಧಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ ಎಂದು ಉಪಕುಲಪತಿ ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್‌ ವಿಭಾಗದ ಮುಖ್ಯಸ್ಥ ಡಾ| ನವೀನ್‌ ಕುಮಾರ್‌ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ವಿಶಿಷ್ಟ ಕೋರ್ಸ್‌ ಇದು ಎಂದರು.

ನಿಲುವಂಗಿಯಲ್ಲಿ ಬದಲಾವಣೆ
ವಿ.ವಿ. ಘಟಿಕೋತ್ಸವದಲ್ಲಿ ಭಾಗವಹಿಸುವ ಅಧಿಕಾರಿಗಳು, ಸಿಂಡಿಕೇಟ್‌ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು ಮತ್ತು ಗೌರವ ಡಾಕ್ಟರೇಟ್‌ ಪದವಿ ಸ್ವೀಕರಿಸುವವರು ತೊಡುವ ನಿಲುವಂಗಿಗೆ ಬಳಸುವ ವಸ್ತ್ರವನ್ನು ಬದಲಿಸುವ ನಿರ್ಧಾರಕ್ಕೆ ಬರಲಾಗಿದೆ. ಖಾದಿ ಸಿಲ್ಕ್ ಬಟ್ಟೆಗಳಿಂದ ನಿಲುವಂಗಿ ಸಿದ್ಧಪಡಿಸಲಾಗುವುದು. ಬಣ್ಣಗಳಲ್ಲಿ ಬದಲಾವಣೆ ಇರುವುದಿಲ್ಲ ಎಂದು ಕುಲಪತಿ ಪ್ರೊ| ಎಡಪಡಿತ್ತಾಯ ಸಭೆಗೆ ತಿಳಿಸಿದರು.

ಕಾಶ್ಮೀರಿ ಪಂಡಿತರಿಗೆ ಸೀಟು ಮೀಸಲು
ಮಂಗಳೂರು ವಿ.ವಿ.ಗೆ ಅಧ್ಯಯನಕ್ಕಾಗಿ ಆಗಮಿಸುವ ಕಾಶ್ಮೀರಿ ಪಂಡಿತರಿಗೂ ಮುಂದಿನ ಶೈಕ್ಷಣಿಕ ವರ್ಷದಿಂದ “ಔಟ್‌ ಸೈಡ್‌ ದ ಕೋಟಾ’ದ ಅಡಿಯಲ್ಲಿ ಸೀಟು ಲಭಿಸಲಿದೆ. ಪ್ರತೀ ಕೋರ್ಸ್‌ ನಲ್ಲೂ ಒಂದು ಸೀಟು ಮೀಸಲಿರುತ್ತದೆ. ಈ ಸಂಬಂಧ ಎಂಎಚ್‌ಆರ್‌ಡಿಯಿಂದ ನಿರ್ದೇಶನ ಬಂದಿದೆ. ಒಂದಕ್ಕಿಂತ ಹೆಚ್ಚು ಮಂದಿ ಪ್ರವೇಶ ಅಪೇಕ್ಷಿಸಿದರೆ ಮೆರಿಟ್‌ ಆಧಾರದಲ್ಲಿ ಪ್ರವೇಶ ನೀಡಲಾಗುವುದು. ಯಾರೂ ಪ್ರವೇಶ ಬಯಸದಿದ್ದರೆ ಸೀಟನ್ನು ಇತರರಿಗೆ ಕೊಡಲು ಅವಕಾಶ ಇಲ್ಲ ಎಂದು ಉಪಕುಲಪತಿ ಪ್ರೊ| ಎಡಪಡಿತ್ತಾಯ ತಿಳಿಸಿದರು.

Advertisement

ಬಯೋಮೆಟ್ರಿಕ್‌ ಹಾಜರಾತಿ
ವಿ.ವಿ.ಯಲ್ಲಿ ಪ್ರತಿ ತರಗತಿ ಪರಿಣಾಮಕಾರಿಯಾಗಿ ನಡೆಯಬೇಕು ಎಂಬ ನಿಟ್ಟಿನಲ್ಲಿ ಬಯೋಮೆಟ್ರಿಕ್‌ ಅಳವಡಿಸಲಾಗುವುದು. ಇದರಿಂದ ಹಾಜರಾತಿ ಗೊಂದಲವನ್ನೂ ನಿವಾರಿಸಲಾಗುವುದು ಎಂದು ಕುಲಪತಿ ಹೇಳಿದರು.

ಈ ಪ್ರಯೋಗವನ್ನು ರಾಜ್ಯದಲ್ಲಿಯೇ ಮೊತ್ತ ಮೊದಲ ಬಾರಿಗೆ ಮಂಗಳೂರು ವಿ.ವಿ.ಯಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ. ವಿ.ವಿ. ಆವರಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗುವುದು ಎಂದು ಅವರು ಸಭೆಗೆ ವಿವರಿಸಿದರು ವಿ.ವಿ.ಯ ಪೀಠಗಳು, ವಿದ್ಯಾರ್ಥಿ ಕ್ಷೇಮಪಾಲನೆ ಮತ್ತು ಹಾಸ್ಟೆಲ್‌ಗ‌ಳಿಗೆ ನಿವೃತ್ತ ಅನುಭವಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು ಎಂದವರು ಸಭೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next