Advertisement
ಈಮೊದಲು ಶೈಕ್ಷಣಿಕ ಕ್ಯಾಲೆಂಡರ್ ಪದವಿ ವಿದ್ಯಾರ್ಥಿಗಳಿಗೆ ಪೂರಕವಾಗಿ ಇರುತ್ತಿತ್ತು. ಆದರೆ ಕೋವಿಡ್ ಬಂದ ಬಳಿಕ ಇಡೀ ವೇಳಾಪಟ್ಟಿಯೇ ಏರುಪೇರಾಯಿತು. ಎಪ್ರಿಲ್‌ನಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಬಂದರೆ, ಜೂನ್ ವೇಳೆಗೆ ಪದವಿಗೆ ಪ್ರವೇಶ ಸಿಗುತ್ತಿತ್ತು. ಆದರೆ ಕಳೆದ 2-3 ವರ್ಷಗಳಿಂದ ಸೆಪ್ಟಂಬರ್-ಅಕ್ಟೋಬರ್ ವೇಳೆಯಲ್ಲಿ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳು ಆರಂಭಗೊಳ್ಳುತ್ತಿವೆ.
ಮುಖ್ಯವಾಗಿ ವಿದ್ಯಾರ್ಥಿಗಳು ಮಂಗಳೂರು ವಿವಿ ವ್ಯಾಪ್ತಿಯಲ್ಲೇ ಕಾರ್ಯವೆಸಗುತ್ತಿರುವ ಸ್ವಾಯತ್ತ ಕಾಲೇಜುಗಳತ್ತ ಗಮನ ಹರಿಸುತ್ತಿದ್ದಾರೆ. ಯಾಕೆಂದರೆ ಸ್ವಾಯತ್ತ ಕಾಲೇಜುಗಳು ಹಾಗೂ ಡೀಮ್ಡ್ ವಿವಿಗಳು ತಮ್ಮ ಶೈಕ್ಷಣಿಕ ಕ್ಯಾಲೆಂಡರನ್ನು ಸೂಕ್ತವಾಗಿ ಪರಿಷ್ಕರಿಸಿಕೊಂಡು ಇತರ ಕಾಲೇಜುಗಳಿಗಿಂತ ಬೇಗನೆ ಪದವಿ ತರಗತಿಗಳಿಗೆ ಪ್ರವೇಶ ನೀಡುತ್ತಿವೆ. ಜೂನ್ ಅಂತ್ಯ ಅಥವಾ ಜುಲೈ ತಿಂಗಳಲ್ಲಿ ಈ ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಮುಗಿಸುತ್ತಿವೆ. ಅಲ್ಲದೆ ಈಗಿನ ಕಾಲಕ್ಕೆ ಅಗತ್ಯವಿರುವಂಥ ಕೋರ್ಸ್‌ಗಳನ್ನೂ ನೀಡುತ್ತಿರುವುದು ಪ್ರಯೋಜನಕಾರಿಯಾಗಿದೆ.
Related Articles
Advertisement
ಎಂಜಿನಿಯರಿಂಗ್ ಕಾಲೇಜುಗಳತ್ತ ವಿದ್ಯಾರ್ಥಿಗಳು!ಈ ಬಾರಿಯ ಮತ್ತೊಂದು ಬೆಳವಣಿಗೆ ಎಂದರೆ ಎಂಜಿನಿಯರಿಂಗ್-ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಆರಂಭಗೊಂಡಿರುವ ಬಿಬಿಎ, ಬಿಸಿಎ ಕೋರ್ಸ್‌ಗಳು. ಎಐಸಿಟಿಇನಿಂದ ಮಾನ್ಯತೆ ಪಡೆದುಕೊಂಡು ಈ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಇತರ ಪದವಿ ಕೋರ್ಸ್‌ಗಳಿಗೆ ಹೋಗುವ ವಿದ್ಯಾರ್ಥಿಗಳು ಬಿಸಿಎಯತ್ತ ಮುಖ ಮಾಡಿದ್ದಾರೆ. ಇದು ಓಪನ್ ಎಂಡೆಡ್ ಕೋರ್ಸ್ ಆಗಿದ್ದು, ಕಲೆ, ವಿಜ್ಞಾನ, ವಾಣಿಜ್ಯ ಮೂರೂ ವಿಭಾಗದ ವಿದ್ಯಾರ್ಥಿಗಳೂ ಸೇರಬಹುದು. ಅಲ್ಲದೆ ಹೆಚ್ಚು ಉದ್ಯೋಗಾವಕಾಶವೂ ಇದೆ ಎಂಬ ಕಾರಣಕ್ಕೆ ಬಿಸಿಎ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ. ಈ ಬಾರಿ ಆಗಸ್ಟ್ 8ಕ್ಕೆ ಪ್ರಾರಂಭಕ್ಕೆ ಸಿದ್ಧತೆ: ಡಾ| ಧರ್ಮ ಕಳೆದ ಎರಡು ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತುಸು ಬೇಗನೆ, ಅಂದರೆ ಆಗಸ್ಟ್ 8ರ ಹೊತ್ತಿಗೆ ಪದವಿ ತರಗತಿ ಆರಂಭಿಸುವ ಉದ್ದೇಶವಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಲ್. ಧರ್ಮ ತಿಳಿಸಿದ್ದಾರೆ. ಇದಕ್ಕಾಗಿ ಜು.8ರಂದು ಪದವಿ ಕಾಲೇಜು ಪ್ರಾಂಶುಪಾಲರನ್ನು ಕರೆದು ಸಮಾಲೋಚನೆ ನಡೆಸಲಾಗುವುದು. ಅಲ್ಲದೆ ಜು.15 ಅಥವಾ 16ರಂದು ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮಾತನಾಡಲಾಗುವುದು ಎಂದೂ ಉದಯವಾಣಿಗೆ ತಿಳಿಸಿದ್ದಾರೆ. – ವೇಣುವಿನೋದ್ ಕೆ.ಎಸ್.