Advertisement

ಮಂಗಳೂರು ವಿಶ್ವವಿದ್ಯಾನಿಲಯ: ಕುಂದ ಕನ್ನಡಕ್ಕೆ “ಪೀಠ’, ಅರೆ ಭಾಷೆಗೆ “ಅಧ್ಯಯನ ಕೇಂದ್ರ’

10:46 AM Jun 24, 2022 | Team Udayavani |

ಮಂಗಳೂರು: ಭಾಷಾಭಿವೃದ್ಧಿ ಚಟುವಟಿಕೆಗೆ ಆದ್ಯತೆ ನೀಡುವ ಇರಾದೆಯಿಂದ ಕುಂದಾಪುರ ಭಾಗದಲ್ಲಿನ ಕುಂದ ಕನ್ನಡ ಅಧ್ಯಯನ ಪೀಠ ಹಾಗೂ ಸುಳ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಬಳಕೆಯಲ್ಲಿರುವ ಅರೆಭಾಷೆಯ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.

Advertisement

ಕುಂದ ಕನ್ನಡ ಅಧ್ಯಯನ ಪೀಠ ಆರಂಭಿಸುವ ನೆಲೆಯಲ್ಲಿ ಈಗಾಗಲೇ ವಿ.ವಿ.ಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಆರಂಭಿಸುವಂತೆ ವಿ.ವಿ.ಗೆ ಸೂಚನೆ ಬಂದಿದೆ. ಅದಕ್ಕಾಗಿ ವಿ.ವಿ.ಯು ಆಂತರಿಕ ಸಂಪನ್ಮೂಲದಿಂದ 25 ಲಕ್ಷ ರೂ.ಗಳನ್ನು ಮೀಸಲಿರಿಸಿದೆ. ಸರಕಾರದ ಅನುದಾನವನ್ನು ನಿರೀಕ್ಷಿಸಲಾಗಿದೆ.

ಅರೆಭಾಷೆ ಅಧ್ಯಯನ ಕೇಂದ್ರ ಆರಂಭಕ್ಕೆ ಸರಕಾರ ವಿಶೇಷ ನೆಲೆಯಲ್ಲಿ 2 ಕೋ.ರೂ. ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಲ್ಲಿವರೆಗೆ ಆಂತರಿಕ ಸಂಪನ್ಮೂಲ ಬಳಸಿ ಕೇಂದ್ರ ಆರಂಭದ ಬಗ್ಗೆ ವಿ.ವಿ. ಚಿಂತನೆ ನಡೆಸಿದೆ.

ಮಾಜಿ ಸಂಸದ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ “ಉದಯವಾಣಿ’ ಜತೆಗೆ ಮಾತನಾಡಿ, “ಕುಂದ ಕನ್ನಡ ಹಲವು ವಿಶೇಷ ಹಾಗೂ ಸಮೃದ್ಧ ವಿಚಾರಗಳ ಮೂಲಕ ಗೌರವ ಪಡೆದಿದೆ. ಈ ಭಾಷೆಯ ಶ್ರೀಮಂತಿಕೆ ಹಾಗೂ ಸೊಗಡನ್ನು ವಿವರವಾಗಿ ಅಧ್ಯಯನ ನಡೆಸಿ ಎಲ್ಲೆಡೆ ಪ್ರಚುರಪಡಿಸುವ ಅಗತ್ಯ ಇದೆ. ಹೀಗಾಗಿ ವಿ.ವಿ.ಯಲ್ಲಿ ಅಧ್ಯಯನ ಪೀಠ ಮಾಡಬೇಕು ಎಂದು ಸರಕಾರವನ್ನು ನಾನು ಒತ್ತಾಯಿಸಿದ್ದೆ. ಪೂರಕ ಸ್ಪಂದನೆ ಲಭಿಸಿದ್ದು, ಶೀಘ್ರ ಪೀಠ ರಚನೆಯ ಕಾರ್ಯ ನಡೆಯುವ ನಿರೀಕ್ಷೆಯಿದೆ’ ಎಂದರು.

ಕುಲಸಚಿವ (ಆಡಳಿತ) ಪ್ರೊ| ಕಿಶೋರ್‌ ಕುಮಾರ್‌ ಸಿ.ಕೆ. ಪ್ರಕಾರ, “ಕುಂದ ಕನ್ನಡ ಹಾಗೂ ಅರೆಭಾಷೆ ಕರಾವಳಿಯ ಬಹು ಜನರು ಮಾತನಾಡುವ ಭಾಷೆ. ಇದರಲ್ಲಿ ಹಲವು ವಿಶೇಷತೆಗಳು ಇವೆ. ಇವುಗಳ ಬಗ್ಗೆ ತುಲನಾತ್ಮಕ ಅಧ್ಯಯನ ಆಗಬೇಕು ಎಂಬ ನೆಲೆಯಿಂದ ಪೀಠ ಹಾಗೂ ಅಧ್ಯಯನ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ’ ಎನ್ನುತ್ತಾರೆ.

Advertisement

ಪೀಠ, ಕೇಂದ್ರಗಳಿಗೆ ವಿಶೇಷ ಜವಾಬ್ದಾರಿ :

ಮಂಗಳೂರು ವಿ.ವಿ.ಯಲ್ಲಿ ಈಗ 24 ಅಧ್ಯಯನ ಪೀಠಗಳಿದ್ದು, ಈ ಪೈಕಿ ಕೆಲವು ಮಾತ್ರ ಸಶಕ್ತವಾಗಿದೆ. ಹೀಗಾಗಿ ಹೊಸದಾಗಿ ರಚನೆಯಾಗಲಿರುವ ಪೀಠ/ಕೇಂದ್ರವನ್ನು ಸಶಕ್ತಗೊಳಿಸುವ ಮಹತ್ವದ ಜವಾಬ್ದಾರಿ ವಿ.ವಿ. ಪಾಲಿಗಿದೆ. ಕುಂದ ಕನ್ನಡ ಹಾಗೂ ಅರೆಭಾಷೆಯಲ್ಲಿನ ಸಾಹಿತ್ಯಿಕ ಚಟುವಟಿಕೆ, ಕೊಡುಗೆಯ ಅನಾವರಣ, ಐತಿಹ್ಯಗಳನ್ನು ಬೆಳಕಿಗೆ ತರುವ ಹಾಗೂ ಭಾಷಾ ಬೆಳವಣಿಗೆಗೆ ಪೂರಕವಾಗುವ ಕಾರ್ಯಚಟುವಟಿಕೆ ನಡೆಸುವ ಕಾರ್ಯ ನಡೆಯಲಿದೆ.

ಕರಾವಳಿ ಭಾಗದಲ್ಲಿ ಜನಜನಿತವಾಗಿರುವ ಕುಂದ ಕನ್ನಡ ಹಾಗೂ ಅರೆಭಾಷೆಯ ಕುರಿತಂತೆ ವಿಶೇಷ ಅಧ್ಯಯನ ನಡೆಸಲು ಅವಕಾಶ ಒದಗಿಸುವ ಪೀಠ/ಕೇಂದ್ರವನ್ನು ಪ್ರತ್ಯೇಕವಾಗಿ ಮಂಗಳೂರು ವಿ.ವಿ.ಯಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು.ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ,ಕುಲಪತಿ, ಮಂಗಳೂರು ವಿ.ವಿ.

 

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next