Advertisement
ರಾಜಕೀಯ ವಿಚಾರ ಬಂದಾಗ ತುಳು ಚಿತ್ರರಂಗ ತುಸು ಭಿನ್ನ. ರಾಜಕೀಯದಿಂದ ತುಂಬಾ ಅಂತರವನ್ನೇ ಕಾಯ್ದುಕೊಂಡಿದೆ. ಇಲ್ಲವೆಂದಲ್ಲ, ಚಲನಚಿತ್ರ ರಂಗದ ಕೆಲವು ನಟರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವರು ರಾಜಕೀಯ ದಲ್ಲಿದ್ದು, ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದನ್ನು ಹೊರತುಪಡಿಸಿ ಸದ್ಯ ತುಳುವಿನ ಸ್ಟಾರ್ ನಟರು ಎನಿಸಿಕೊಳ್ಳುವವರು ಯಾವುದಾದರೂ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ.
ತುಳುಚಿತ್ರರಂಗ ಸೀಮಿತ ವ್ಯಾಪ್ತಿಯನ್ನು ಹೊಂದಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಸ್ವಲ್ಪ ಭಾಗವನ್ನು ಒಳಗೊಂಡಿದೆ. ಹೀಗೆ ಸಣ್ಣ ಪ್ರದೇಶವನ್ನು ಹೊಂದಿರುವಾಗ ಯಾವುದಾದರೂ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು ಚಿತ್ರಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ನಟರದ್ದು. ಜತೆಗೆ ಕಲಾವಿದನಾದವ ಜಾತಿ, ಧರ್ಮ, ಪಕ್ಷ ಎಂದು ಗುರುತಿಸಿಕೊಳ್ಳಬಾರದು. ಎಲ್ಲ ಜಾತಿ ಧರ್ಮ ಪಕ್ಷದಲ್ಲಿಯೂ ಅಭಿಮಾನಿಗಳು ಇರುತ್ತಾರೆ. ಕಲಾವಿದನಿಗೆ ಕಲೆಯೇ ಮೊದಲು ಎನ್ನುವುದು ಹಿರಿಯ ನಟರೊಬ್ಬರ ಮಾತು. ಪ್ರಚಾರವೂ ಇಲ್ಲ
ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಚಲನ ಚಿತ್ರ ನಟರನ್ನು ಸ್ಟಾರ್ ಕ್ಯಾಂಪೇನರ್ ಆಗಿ ಬಳಸಿ ಕೊಳ್ಳುತ್ತವೆ. ಆದರೆ ತುಳುಚಿತ್ರರಂಗಕ್ಕೆ ಸಂಬಂಧಿಸಿ ದಂತೆ ರಾಜಕೀಯ ಪ್ರಚಾರಕ್ಕೆ ಯಾರನ್ನೂ ಕರೆಯುವುದೂ ಇಲ್ಲ, ನಟರು ಹೋಗುವುದೂ ಇಲ್ಲ. ಎಲ್ಲ ಪಕ್ಷದ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಪಕ್ಷದ ಜತೆಗೆ ಗುರುತಿಸಿಕೊಳ್ಳಲು ಬಯಸುವುದಿಲ್ಲ. ತಟಸ್ಥವಾಗಿರುವುದೇ ಉತ್ತಮ ಎನ್ನುವ ಅಭಿಪ್ರಾಯವಿದೆ.
Related Articles
ರಾಜಕೀಯ ಅಂತರದ ಹೊರತಾಗಿಯೂ ಚಿತ್ರ ರಂಗದ ಕೆಲವರು ಶಾಸಕರಾಗಿದ್ದಾರೆ. ಓರ್ವ ನಿರ್ಮಾಪಕರೂ ಶಾಸಕರಾಗಿದ್ದಾರೆ. 1971ರಲ್ಲಿ ಬಿಡುಗಡೆ ಯಾಗಿದ್ದ “ಎನ್ನ ತಂಗಡಿ’ ಚಿತ್ರದಲ್ಲಿ ನಟಿಸಿದ್ದ ಲೋಕಯ್ಯ ಶೆಟ್ಟಿ ಅವರು ಸುರತ್ಕಲ್ ಶಾಸಕರಾಗಿದ್ದರು. 2014ರಲ್ಲಿ ಬಿಡುಗಡೆಯಾದ “ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ’ ಮತ್ತು 2015ರಲ್ಲಿ ತೆರೆಕಂಡ “ಎಕ್ಕಸಕ’ ತುಳು ಸಿನೆಮಾದಲ್ಲಿ ನಟಿಸಿದ್ದ ಉಮಾನಾಥ ಕೋಟ್ಯಾನ್ ಅವರು ಮೂಡುಬಿದಿರೆಯ ಶಾಸಕರಾಗಿದ್ದಾರೆ. ಉಳಿದಂತೆ 1978ರಲ್ಲಿ ಬಿಡುಗಡೆಯಾಗಿದ್ದ ಸಂಗಮ ಸಾಕ್ಷಿ ಚಲನಚಿತ್ರದ ನಿರ್ಮಾಪಕ ವಸಂತ ಬಂಗೇರ ಅವರು ಬೆಳ್ತಂಗಡಿ ಶಾಸಕರಾಗಿದ್ದರು. ಇನ್ನೊಂದೆಡೆ ಪುತ್ತೂರು ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿ ಅವರು 2011ರಲ್ಲಿ ಬಿಡುಗಡೆಯಾದ “ಕಂಚಿಲ್ದ ಬಾಲೆ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಉಳಿದಂತೆ ಪಕ್ಷದಲ್ಲಿ ಪ್ರಮುಖರಾಗಿದ್ದು, ಚಲನಚಿತ್ರ ನಿರ್ಮಾಣ ಮಾಡಿದವರಿದ್ದಾರೆ.
Advertisement
* ಭರತ್ ಶೆಟ್ಟಿಗಾರ್