Advertisement
ಈ ಮೂಲಕ ಆಗಾಗ ರಸ್ತೆಯಲ್ಲಿ ಗುಂಡಿಗಳು ಬಿದ್ದು, ಅಲ್ಲಲ್ಲಿ ಘನ ವಾಹನಗಳು ಹಾಳಾಗಿ-ಅಪಘಾತಕ್ಕೀಡಾಗಿ, ಘಾಟಿಯುದ್ದಕ್ಕೂ ಸಾಲುಗಟ್ಟಿ ನಿತ್ಯ ವಾಹನಗಳು ನಿಂತು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದ ಪ್ರಯಾಣಿಕರು ಇನ್ನುಮುಂದೆ ಸರಾಗವಾಗಿ ಪ್ರಯಾಣಿಸಬಹುದು. ಇದರಿಂದ ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ರಸ್ತೆಯಲ್ಲಿ ಪ್ರಯಾಣ ಸುಖಕರವಾಗುವ ಜತೆಗೆ, ಪ್ರಯಾಣದ ಅವಧಿಯೂ ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ.
Related Articles
Advertisement
ಈ ಪೈಕಿ ಈ ರಸ್ತೆಯಲ್ಲಿ ಒಟ್ಟು 74 ಮೋರಿಗಳ ಗುರಿ ಇರಿಸಲಾಗಿದ್ದು, ಅದರಲ್ಲಿ ಮೂರು ಕಿರು ಸೇತುವೆಗಳ ಕೆಲಸ ಪ್ರಸ್ತುತ ಬಿರುಸಿನಿಂದ ನಡೆಯುತ್ತಿದೆ. ಈ ಸೇತುವೆಗಳ ಎರಡೂ ಭಾಗದ ಕೂಡು ರಸ್ತೆಗಳ ಕಾಂಕ್ರೀಟ್ ಕೆಲಸ ಸದ್ಯ ನಡೆಯುತ್ತಿದೆ. ಮುಂದಿನ ಒಂದು ವಾರದ ಒಳಗೆ ಇದು ಕೂಡ ಪೂರ್ಣಗೊಂಡು ಜುಲೈ ಮೊದಲ ವಾರದಲ್ಲಿ ಶಿರಾಡಿ ಸಂಚಾರಕ್ಕೆ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.
12 ತಿಂಗಳು ಶಿರಾಡಿ ಬಂದ್: ಶಿರಾಡಿಯ ಮೊದಲ ಹಂತದ ಕಾಮಗಾರಿ ನಡೆದಿದ್ದು 2015ರಲ್ಲಿ. ಈ ಕಾಮಗಾರಿಗಾಗಿ ಅದೇ ವರ್ಷ ಜ.2ರಿಂದ ಶಿರಾಡಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಕಾಂಕ್ರಿಟ್ ಕಾಮಗಾರಿ ಆರಂಭವಾಗಿದ್ದು ಮಾತ್ರ ಎ.20ಕ್ಕೆ. ಬಳಿಕ ಆಗಸ್ಟ್ 9ರಂದು ಶಿರಾಡಿ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿತ್ತು. ಈ ಬಾರಿಯ ಎರಡನೇ ಹಂತದ ಕಾಮಗಾರಿ ಆರಂಭಿಸಿದ್ದು 2018 ಜನವರಿ 20ರಂದು.
ಹಾಗಾಗಿ ಅಲ್ಲಿಂದ ಶಿರಾಡಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ಕಾಮಗಾರಿ ಕೊನೆಯ ಹಂತದಲ್ಲಿದ್ದು ಬಹುತೇಕ ಜುಲೈ ಮೊದಲ ವಾರದಿಂದ ಶಿರಾಡಿ ಸಂಚಾರಕ್ಕೆ ಮುಕ್ತವಾಗಬಹುದು. ಹೀಗಾಗಿ ಎರಡು ಹಂತದಲ್ಲಿ ಶಿರಾಡಿ ಕಾಮಗಾರಿಯು ಒಟ್ಟು 12 ತಿಂಗಳಲ್ಲಿ ಪೂರ್ಣಗೊಳ್ಳುವಂತಾಗಿದೆ.
2ನೇ ಹಂತದ ಕಾಮಗಾರಿ ತಡವಾಗಿದ್ದು ಯಾಕೆ?: ಶಿರಾಡಿಯಲ್ಲಿ ಎರಡನೇ ಹಂತದ ಕಾಮಗಾರಿಯನ್ನು ಟೆಂಡರ್ ಪ್ರಕಾರ 85.28 ಕೋಟಿ ರೂ.ವೆಚ್ಚದಲ್ಲಿ 33.38 ಕಿ.ಮೀ.ವರೆಗೆ ನಡೆಸಬೇಕಿತ್ತು. ಇದರಲ್ಲಿ ಗುಳಗಳಲೆಯಿಂದ ಮಾರನಹಳ್ಳಿವರೆಗೆ 21ಕಿ.ಮೀ. ಡಾಮರೀಕರಣ ಮತ್ತು ಕೆಂಪುಹೊಳೆಯಿಂದ ಅಡ್ಡಹೊಳೆವರೆಗೆ 63.104 ಕೋಟಿ ರೂ.ಗಳಲ್ಲಿ 12.38 ಕಿ.ಮೀ. ಕಾಂಕ್ರಿಟ್ ಕಾಮಗಾರಿ ಎಂದು ಹೇಳಲಾಗಿತ್ತು.
7ಮೀ.ಅಗಲಕ್ಕೆ ಡಾಮರೀಕರಣ ಮತ್ತು 8.50 ಮೀ.ಅಗಲಕ್ಕೆ ಕಾಂಕ್ರಿಟ್ ಕಾಮಗಾರಿ ನಡೆಸಬೇಕಿತ್ತು. ಆದರೆ ಚೆನ್ನೈನ ಜಿವಿಆರ್ ಇನ್‌ಫ್ರಾ ಪ್ರಾಜೆಕ್ಟ್ ಗುತ್ತಿಗೆ ಸಂಸ್ಥೆಯು ನಿಗದಿತ ಅವಧಿ 2016 ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಿರಲಿಲ್ಲ. ಕಾಮಗಾರಿಗೆ ಬೇಕಾದ ಅಗತ್ಯ ಉಪಕರಣಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕ್ರೊಡೀಕರಿಸಿರಲಿಲ್ಲ.
ಕಾಂಕ್ರಿಟ್ ಕಾಮಗಾರಿಗೆ ಬೇಕಾದ ತಾಂತ್ರಿಕತೆಯನ್ನು ಸಕಾಲದಲ್ಲಿ ಹೊಂದಿಸುವಲ್ಲಿ ವಿಫಲವಾಗಿತ್ತು. ಫೆಬ್ರವರಿ ಕಳೆದರೂ ಕಾಮಗಾರಿ ಆರಂಭವಾಗುವ ಲಕ್ಷಣ ಗೋಚರಿಸಿರಲಿಲ್ಲ. ಈ ಕಾರಣಕ್ಕೆ ಆ ಗುತ್ತಿಗೆಯನ್ನು ರಾಷ್ಟ್ರೀಯ ಹೆ¨ªಾರಿ ಇಲಾಖೆ ರದ್ದುಪಡಿಸಿತ್ತು. ಬಳಿಕ ಹೊಸ ಗುತ್ತಿಗೆದಾರರ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳುವಂತಾಯಿತು.
ಶಿರಾಡಿ ಘಾಟ್‌ನಲ್ಲಿ ಎರಡನೇ ಹಂತದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಪೂರ್ಣಗೊಂಡಿದೆ. ಕಿರು ಸೇತುವೆ ಕಾಮಗಾರಿ ಕೊನೆಯ ಹಂತದಲ್ಲಿದೆ. ಹೀಗಾಗಿ ಮುಂದಿನ ತಿಂಗಳು ಮೊದಲ ವಾರದಲ್ಲಿ ಶಿರಾಡಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಅತ್ಯಂತ ಪರಿಪೂರ್ಣ ರೀತಿಯಲ್ಲಿ 26 ಕಿ.ಮೀ.ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ.-ನಳಿನ್ ಕುಮಾರ್ ಕಟೀಲು, ಸಂಸದರು ಶಿರಾಡಿಯಲ್ಲಿ ಕಾಂಕ್ರೀಟ್ ಹಾಕಿದ್ದು ಹೇಗೆ?: ಶಿರಾಡಿ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆ ಓಷಿಯನ್ ಕನ್‌ಸ್ಟ್ರಕ್ಷನ್‌ನ ಪ್ರಮುಖರು ತಿಳಿಸುವಂತೆ, ಶಿರಾಡಿಯ ಹಳೆ ರಸ್ತೆಯನ್ನು ಮೊದಲು ಅಗೆದು ರೋಲ್ ಮಾಡಲಾಗಿತ್ತು. ಅದರ ಮೇಲೆ ತೆಳ್ಳಗಿನ ಜಿಯೋ ಟೆಕ್ಸ್‌ಟೈಲ್ ಎಂಬ ಬಟ್ಟೆ ಮಾದರಿಯ ಪದರವನ್ನು ಹಾಕಿ, ಅದರ ಮೇಲೆ 15 ಸೆ.ಮೀ. ದಪ್ಪದ ಜೆಲ್ಲಿಕಲ್ಲು ಪದರ ಹಾಕಲಾಗಿತ್ತು. ರಸ್ತೆ ಮೇಲೆ ಬೀಳುವ ನೀರು ಸೋಸಿ ಕೆಳಗಿಳಿದು ಪದರದ ಮೂಲಕ ಹಾದು ಹೋಗಿ ಇಕ್ಕೆಲಗಳಲ್ಲಿ ಚರಂಡಿಗೆ ಹೋಗಬೇಕು ಎನ್ನುವುದು ಇದರ ಹಿಂದಿನ ತಂತ್ರಜ್ಞಾನವಾಗಿತ್ತು. ಬಳಿಕ, ಅದರ ಮೇಲೆ “ಡ್ರೈಲೀನ್ ಕಾಂಕ್ರೀಟ್’ ಎಂಬ ದಪ್ಪ ಕಾಂಕ್ರೀಟ್ ಪದರವನ್ನು 15 ಸೆಂ.ಮೀ ದಪ್ಪದಲ್ಲಿ ಹಾಕಲಾಯಿತು. ಇದು ಗಟ್ಟಿಯಾದ ಬಳಿಕ ಅದರ ಮೇಲೆ 30 ಸೆ.ಮೀ ದಪ್ಪದಲ್ಲಿ ಪೇವ್‌ಮೆಂಟ್ ಕ್ವಾಲಿಟಿ ಕಾಂಕ್ರೀಟ್ ಪದರವನ್ನು “ಸ್ಪಿಪ್‌ಫಾರಂ ಪೇವರ್ ಮಷಿನ್’ ಬಳಸಿ ಅಳವಡಿಸಲಾಯಿತು. ಈ ಮಧ್ಯೆ ಎರಡು ಸ್ಲಾಬ್‌ಗಳ ಮಧ್ಯೆ ಸಂಪರ್ಕ ಏರ್ಪಡಿಸುವ ಡೊವೆಲ್ ಬಾರ್ ಮತ್ತು ಟೈ ಬಾರ್ ಎಂಬ ಕಬ್ಬಿಣದ ತುಂಡುಗಳನ್ನು ಸ್ವಯಂಚಾಲಿತವಾಗಿ ಈ ಮಷಿನ್ ಮೂಲಕ ಅಳವಡಿಸಲಾಯಿತು. ಪೇವರ್ ಮೆಷಿನ್ ಕಾಂಕ್ರೀಟ್ ಹಾಕಿದಂತೆ, ಅದರ ಹಿಂದೆ ಯಂತ್ರವು ಕಾರ್ಯ ನಿರ್ವಹಿಸುತ್ತದೆ. ಕಾಂಕ್ರೀಟ್ ಬದಿ ಮತ್ತು ಮೇಲ್ಭಾಗಕ್ಕೆ ತೆಳುವಾದ ಕ್ಯೂರಿಂಗ್ ದ್ರಾವಣವೊಂದನ್ನು ಚಿಮುಕಿಸಲಾಯಿತು. ಈ ಮೂಲಕ ಕಾಂಕ್ರೀಟ್‌ನೊಳಗಿರುವ ನೀರಿನ ಮಿಶ್ರಣ ಹೊರಗೆ ಆವಿಯಾಗದೆ ಒಳಗೇ ಇದ್ದು ಬೇಗ ಕ್ಯೂರಿಂಗ್ ಸುಲಭವಾಯಿತು. ಜತೆಗೆ ಯಂತ್ರವು ತನ್ನ ದೊರಗು ಬ್ರಶ್ ರಚನೆಯ ಮೂಲಕ ಮೇಲ್ಭಾಗದಲ್ಲಿ ಕೆರೆಯುತ್ತಾ ಹೋಗುತ್ತದೆ. ಇದರಿಂದ ಮೇಲ್ಪದರ ದೊರಗು ಆಗುತ್ತದೆ. ಹೀಗಾಗಿ ಕಾಂಕ್ರೀಟ್ ರಸ್ತೆಯಲ್ಲಿ ಜಾರುವುದಿಲ್ಲ ಎನ್ನುತ್ತಾರೆ.