ಮಂಗಳೂರು : “ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪ ಸಾಬೀತಾದ ಹಿನ್ನೆಲೆ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಟೌನ್ ಪ್ಲಾನಿಂಗ್ ಆಫೀಸರ್ ಬಿ.ಪಿ. ಶಿವರಾಜು ಅವರಿಗೆ 5 ವರ್ಷ ಶಿಕ್ಷೆ ಮತ್ತು ರೂ. 34,00,000/- ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ :
ದಿನಾಂಕ 25-07-2007 ರಂದು ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಟೌನ್ ಪ್ಲಾನಿಂಗ್ ಆಫೀಸರ್ ಬಿ.ಪಿ. ಶಿವರಾಜು ರವರು ತಮ್ಮ ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಮೀರಿ ಹೆಚ್ಛಿನ ಆಸ್ತಿಗಳನ್ನು ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಪ್ರಸನ್ನ ವಿ. ರಾಜು ಮಾಹಿತಿ ಕಲೆ ಹಾಕಿದ್ದು, ಆಗಿನ ಲೋಕಾಯುಕ್ತ ಉಪಾಧೀಕ್ಷಕರು ಮತ್ತು ಅವರ ತಂಡ ಕೇಸು ದಾಖಲಿಸಿ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು. ಸುಮಾರು 38,00,000 ರೂ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ತನಿಖೆಯನ್ನು ಪೂರ್ಣಗೊಳಿಸಿ ಡಿ.ವೈ. ಎಸ್.ಪಿ. ಆಗಿದ್ದ ಡಾ. ಪ್ರಭುದೇವ್ ಮಾಣೆ ರವರು ಆರೋಪಿ ಶಿವರಾಜು ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದಿದ್ದು, ಹದಿನೇಳು ಲಕ್ಷದಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಸೇವೆಗೆ ಸೇರಿದ ವರ್ಷದಿಂದ ದಾಳಿ ನಡೆದ ದಿನಾಂಕದ ವರೆಗೆ ಆರೋಪಿ ಹೊಂದಿದ್ದಎಂದು ಮಾನ್ಯ ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನಲೆಯಲ್ಲಿ ಮಾನ್ಯ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.
ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ರವರು ದಿನಾಂಕ 26-07-2021 ರಂದು ಶಿಕ್ಷೆ ಪ್ರಕಟಿಸಿದ್ದಾರೆ.
ಆರೋಪಿಯು ಅಸೌಖ್ಯದ ಕಾರಣ ನೀಡಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕೆಂದು ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದನು. ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಪ್ರಬಲ ವಾದ ಮಂಡಿಸಿ ಭ್ರಷ್ಟಾಚಾರ ಪ್ರಕರವಾದ್ದರಿಂದ ಗರಿಷ್ಟ ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯವನ್ನು ಕೋರಿದರು.
ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಮಾನ್ಯ ನ್ಯಾಯಾಧೀಶ ಬಿ.ಬಿ.ಜಕಾತಿ ಯವರು ಆಪರಾಧಿಗೆ 5 ವರ್ಷ ಸಾದಾ ಸಜೆ ಮತ್ತು ರೂ 34,00,000/-ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ವಿಧಿಸಿದರು.
ನ್ಯಾಯಾಧೀಶ ಬಿ.ಬಿ. ಜಕಾತಿ ಯವರು ತಮ್ಮ ಆದೇಶದಲ್ಲಿ ಭ್ರಷ್ಟಾಚಾರ ಎಂಬುದು ಸಮಾಜದಲ್ಲಿ ಕ್ಯಾನ್ಸರ್ ಪಿಡುಗಿನಂತೆ ಆಗಿದ್ದು ಅಪರಾಧಿಗೆ ಯಾವುದೇ ರಿಯಾಯಿತಿ ನೀಡುವುದು ಸರಿಯಲ್ಲ ಮತ್ತು ಕಳೆದ ಹದಿನಾಲ್ಕು ವರ್ಷಗಳಿಂದ ಅಕ್ರಮ ಆಸ್ಥಿ ರೂ. 17,00,000/- ವನ್ನು ಅಪರಾಧಿ ಬಿ. ಪಿ. ಶಿವರಾಜು ಅನುಭವಿಸಿರುವುದರಿಂದ ಎರಡುಪಟ್ಟು ದಂಡ ವಿಧಿಸುವುದು ಸೂಕ್ತ ಎಂದು ರೂ. 34,00,000/- ದಂಡ ಪಾವತಿಸಲು ಆದೇಶಿಸಿದರು. ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.