Advertisement
ಕೇರಳದ ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಎಳಾಮಾರಂ ಕರೀಮ್ ಅವರು ಮಂಗಳೂರನ್ನು ಪಾಲಕ್ಕಾಡ್ ವಿಭಾಗದಿಂದ ಪ್ರತ್ಯೇಕಿಸುವ ಪ್ರಸ್ತಾವ ಇದೆಯೇ ಎಂಬುದಾಗಿ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ರೈಲ್ವೇ ಸಚಿವ ಪಿಯೂಷ್ ಗೋಯಲ್ ನೀಡಿರುವ ಲಿಖೀತ ಉತ್ತರದಲ್ಲಿ ಅಂತಹ ಯಾವುದೇ ಪ್ರಸ್ತಾವ ಸಚಿವಾಲಯದಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಮಂಗಳೂರು ಸೆಂಟ್ರಲ್ ಮತ್ತು ತೋಕೂರುವರೆಗಿನ ಭಾಗಗಳನ್ನು ದಕ್ಷಿಣ ರೈಲ್ವೇಯಿಂದ ತೆಗೆದು ನೈಋತ್ಯ ರೈಲ್ವೇ ಜತೆ ವಿಲೀನ ಮಾಡಲು 15 ವರ್ಷಗಳ ಹಿಂದೆ ರೈಲ್ವೇ ಮಂಡಳಿ ಮಾಡಿರುವ ಆದೇಶ ರೈಲ್ವೇ ಸಚಿವರ ಹೇಳಿಕೆಯಿಂದ ಈಗ ಅವಗಣನೆಗೆ ಈಡಾಗಿದೆ. ವಾಜಪೇಯಿ ಸರಕಾರದಲ್ಲಿ ರೈಲ್ವೇ ಸಚಿವರಾಗಿದ್ದ ನಿತೀಶ್ ಕುಮಾರ್ ಮಂಗಳೂರಿಗೆ ಬಂದಿದ್ದಾಗ ರೈಲ್ವೇ ಬಳಕೆದಾರ ಸಂಘಟನೆಗಳ ಒತ್ತಡದಿಂದ ಈ ಭಾಗವನ್ನು ನೈಋತ್ಯ ರೈಲ್ವೇಗೆ ಸೇರಿಸುವ ಪ್ರಸ್ತಾವಕ್ಕೆ ಸಮ್ಮತಿಸಿದ್ದರು. ಅದರಂತೆ ರೈಲ್ವೇ ಮಂಡಳಿ ಈ ಆದೇಶ ನೀಡಿದ್ದು, ಗಜೆಟ್ ನೊಟಿಫಿಕೇಶನ್ ಮಾತ್ರ ಬಾಕಿ ಇತ್ತು.
Related Articles
Advertisement
ನೈಯುತ್ಯ ವಲಯಕ್ಕೆ ವಿಲೀನದಿಂದ ಲಾಭಮಂಗಳೂರು ಭಾಗ ಪ್ರಸ್ತುತ ದಕ್ಷಿಣ ರೈಲ್ವೇ, ನೈಋತ್ಯ ರೈಲ್ವೇ ಮತ್ತು ಕೊಂಕಣ ರೈಲ್ವೇ ನಡುವೆ ಹಂಚಿಹೋಗಿದ್ದು, ಪಾಲಕ್ಕಾಡ್‌ನಿಂದ ಪ್ರತ್ಯೇಕಗೊಂಡು ನೈಋತ್ಯ ವಲಯಕ್ಕೆ ಸೇರ್ಪಡೆಯಾದರೆ ಈ ತ್ರಿಶಂಕು ಸ್ಥಿತಿಗೆ ಪರಿಹಾರ ದೊರೆಯಲಿದೆ. ಮಂಗಳೂರು ನೈಋತ್ಯ ರೈಲ್ವೇಗೆ ಸೇರಿದರೆ ಅದು ನೈಋತ್ಯ ರೈಲ್ವೇಯ ಆರಂಭಿಕ ನಿಲ್ದಾಣವಾಗಿ ಕರಾವಳಿಗರ ಉಪಯೋಗಕ್ಕೆ ಬರುವ ರೈಲುಗಳು ವಿವಿಧೆಡೆಗೆ ಆರಂಭವಾಗಲಿವೆ. ಪ್ರಸ್ತುತ ಆಡಳಿತಾತ್ಮಕ ಸಮಸ್ಯೆಗಳುಂಟಾದರೆ ಚೆನ್ನೈಯಲ್ಲಿರುವ ದಕ್ಷಿಣ ರೈಲ್ವೇಯ ಆಡಳಿತ ಕಚೇರಿಗೆ ಹೋಗಬೇಕಾಗಿದೆ. ನೈಋತ್ಯ ರೈಲ್ವೇ ಕಚೇರಿ ಹುಬ್ಬಳ್ಳಿಯಲ್ಲಿದ್ದು, ಸಂಪರ್ಕ ಸುಲಭ.