Advertisement

ಮಂಗಳೂರು: ವಿವಾಹ ವಾರ್ಷಿಕೋತ್ಸವದಂದು ದೂರವಾಗಿದ್ದ ದಂಪತಿ ಮತ್ತೆ ಒಂದಾದರು

02:50 PM Jan 05, 2022 | Team Udayavani |

ಮಂಗಳೂರು, ಜ. 4: ಕಳೆದ ಅಕ್ಟೋಬರ್‌ನಲ್ಲಿ ಕೌಟುಂಬಿಕ ಕಲಹಗಳಿಂದಾಗಿ ಮನನೊಂದು ಬೇರ್ಪಟ್ಟಿದ್ದ ಸತಿ-ಪತಿ ಹಾಗೂ ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಒಂದಾದ ಘಟನೆ ಮಂಗಳವಾರ ನಡೆದಿದೆ.

Advertisement

ಇದನ್ನೂ ಓದಿ: ಬುಲ್ಲಿ ಬಾಯ್ ಆ್ಯಪ್ ಕೇಸ್: ಮತ್ತೊಬ್ಬ ವಿದ್ಯಾರ್ಥಿ ಬಂಧನ, PUC ವಿದ್ಯಾರ್ಥಿನಿ ಪ್ರಮುಖ ಆರೋಪಿ

ಕೌಟುಂಬಿಕ ಜೀವನದಲ್ಲಿ ಕಂಡುಬಂದ ಹಲವಾರು ಸಮಸ್ಯೆಗಳಿಂದ ಮನನೊಂದಿದ್ದ ನಾರಾಯಣ್‌ (48) (ಹೆಸರು ಬದಲಾಯಿಸಲಾಗಿದೆ) ಮತ್ತು ಸರಳಾ (46) (ಹೆಸರು ಬದಲಾಯಿಸಲಾಗಿದೆ) ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಡೆಸಿದ ಕೌನ್ಸೆಲಿಂಗ್‌ನಲ್ಲಿ ಸಂಸಾರದ ಜವಾಬ್ದಾರಿ, ಅದರ ಮಹತ್ವಗಳನ್ನು ಅರಿತುಕೊಂಡು ಸತಿ-ಪತಿಯ ಮನಪರಿವರ್ತನೆಯಾಗಿ ಪುನಃ ಒಂದಾಗಿದ್ದಾರೆ.

ಅವರಿಬ್ಬರು ಮಂಗಳೂರಿನ ಮರಕಡದ ನಿವಾಸಿಗಳು. ಕೌಟುಂಬಿಕ ಕಲಹಗಳಿಂದಾಗಿ ಮನ ನೊಂದು ಬೇರೆಯಾಗಲು ನಿರ್ಧರಿಸಿದ್ದರು. ನಾರಾಯಣ್‌ ಬಿ.ಫಾರ್ಮ್ ಓದಿ ಮೆಡಿಕಲ್‌ ಶಾಪ್‌ ಹೊಂದಿದ್ದರು. ಅದರ ಪಕ್ಕದಲ್ಲೇ ಬಿಎಎಂಎಸ್‌ ಕ್ಲಿನಿಕ್‌ ನಡೆಸುತ್ತಿದ್ದ ಪತ್ನಿ ಸರಳಾ ತಾನು ದುಡಿದ ಹಣವನ್ನು ಇಬ್ಬರು ಮಕ್ಕಳ ಹೆಸರಿನಲ್ಲಿ ಫಿಕ್ಸೆಡ್‌ ಡಿಫಾಸಿಟ್‌ ಇರಿಸಿದ್ದರು. ಕೌಟುಂಬಿಕ ಜೀವನದಲ್ಲಿ ಏರ್ಪಟ್ಟ ಕೆಲವು ಘರ್ಷಣೆಗಳು ಮತ್ತು ವೈಪರೀತ್ಯಗಳಿಂದಾಗಿ ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿತ್ತು.

ಮುಂದಿನ ಜೀವನ ಇಬ್ಬರು ಒಂದಾಗಿ ಸಾಗುವುದು ಕಷ್ಟವೆನಿಸಿತು. ಕಠಿನ ನಿರ್ಧಾರ ಕೈಗೊಂಡ ಅವರಿಬ್ಬರು ದೂರವಾದರು. ಸರಳಾ ಪ್ರತ್ಯೇಕವಾಗಿ ಉಡುಪಿ ಜಿಲ್ಲೆಯ ಸಿದ್ಧಾಪುರದಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಜೀವನ ನಿರ್ವಹಣೆ ಮತ್ತು ಮಕ್ಕಳ ಭವಿಷ್ಯ ಹಾಗೂ ಅವರ ಶಿಕ್ಷಣಕ್ಕೆ ದಾರಿ ತೋರುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

Advertisement

ಅರ್ಜಿಯನ್ನು ಪರಿಶೀಲಿಸಿದ ಪ್ರಾಧಿಕಾರವು ನಾರಾಯಣ್‌ ಹಾಗೂ ಸರಳಾ ಅವರನ್ನು ಮಂಗಳೂರಿನ ನ್ಯಾಯಾಲಯದ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಆಹ್ವಾನಿಸಿ, ಅಲ್ಲಿ ನಾಲ್ಕು ಬಾರಿ ಕೌನ್ಸಲಿಂಗ್‌ಗೆ ಒಳಪಡಿಸಿತು. ಈ ಸಂದರ್ಭ ಪತಿ-ಪತ್ನಿ ಇಬ್ಬರೂ ಒಟ್ಟಿಗೆ ಬಾಳುವಂತೆ ಮನ ಪರಿವರ್ತನೆ ಮಾಡಲಾಯಿತು. ನೆಮ್ಮದಿಯ ಜೀವನ ಸಾಗಿಸಲು ಅವರಿಗಿರುವ ದಾರಿ, ಸೌಲಭ್ಯಗಳು, ಇಬ್ಬರೂ ಹೆಣ್ಣು ಮಕ್ಕಳ ಭವಿಷ್ಯ ಹಾಗೂ ಅವರ ಶಿಕ್ಷಣ ಸೇರಿದಂತೆ ಒಂದಾಗಿ ಬಾಳುವುದರಿಂದ ಆಗುವ ಅನುಕೂಲತೆಗಳ ಬಗ್ಗೆ ವಿವರವಾಗಿ ತಿಳಿಸಿಕೊಡಲಾಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾದಿಂದ ಕೈಗೊಳ್ಳಲಾದ ಕೌನ್ಸೆಲಿಂಗ್‌ ಇಬ್ಬರ ಮೇಲೂ ಗಾಢ ಪರಿಣಾಮ ಬೀರಿದ್ದು, ವಿವಾಹ ವಾರ್ಷಿಕೋತ್ಸವವಾದ ಜ. 4 (ಇಂದು) ಪರಿತ್ಯಕ್ತರಾಗಿದ್ದ ಇಬ್ಬರೂ ಮತ್ತೆ ಕೈಹಿಡಿದು ಅನ್ಯೋನ್ಯವಾಗಿ ಜೀವನ ಸಾಗಿಸಲು ಮುಂದಾದರು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಮುರಲೀಧರ ಪೈ. ಬಿ. ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಪೃಥ್ವೀರಾಜ್‌ ವರ್ಣೇಕರ್‌ ಅವರು ಈ ದಂಪತಿಗೆ ಪರಸ್ಪರ ಕೌನ್ಸೆಲಿಂಗ್‌ ನಡೆಸಿ, ಬೇರೆಯಾಗಿದ್ದ ಪತಿ-ಪತ್ನಿಯನ್ನು ಪ್ರಕರಣ ದಾಖಲಾದ ಅತಿ ಕಡಿಮೆ ಅವಧಿಯಲ್ಲಿ ಒಂದುಗೂಡಿಸಿದ್ದಾರೆ.

ಇದರಿಂದ ಸಂತಸಗೊಂಡಿರುವ ದಂಪತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೇವೆ ಅನನ್ಯವಾದದ್ದು, ಅಲ್ಲಿನ ಕೌನ್ಸೆಲಿಂಗ್‌ ಮತ್ತೆ ನಮ್ಮಿಬ್ಬರನ್ನು ಒಂದು ಮಾಡಿದೆ ಎಂದು ಶ್ಲಾಘಿಸಿದ್ದಾರೆ. ಪರಿತ್ಯಕ್ತ ದಂಪತಿಗಳು ಕಾನೂನು ಸೇವಾ ಪ್ರಾಧಿಕಾರದ ಮಾರ್ಗದರ್ಶನ ಪಡೆದಲ್ಲಿ ಮತ್ತೆ ಒಂದಾಗುವ ಸಾಧ್ಯತೆಗಳು ಹೆಚ್ಚು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೇವೆಯನ್ನು ಪ್ರಶಂಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next