Advertisement

ಮಂಗಳೂರು: ಪೊಲೀಸ್‌ ಅಧಿಕಾರಿಯ ಕೊಲೆ ಯತ್ನ

10:55 AM Apr 06, 2017 | |

ಮಂಗಳೂರು: ಉರ್ವ ಪೊಲೀಸ್‌ ಠಾಣೆಯ ಎಎಸ್‌ಐ ಐತಪ್ಪ (55) ಅವರ ಮೇಲೆ ಬುಧವಾರ ಮುಂಜಾನೆ ನಗರದ ಲೇಡಿಹಿಲ್‌ ವೃತ್ತದಲ್ಲಿ ಇಬ್ಬರು ಅಪರಿಚಿತ ಬೈಕ್‌ ಸವಾರರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಲೆಗೆ ತೀವ್ರವಾಗಿ ಗಾಯಗೊಂಡಿರುವ ಐತಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಹಿಂಬಾಲಿಸಿಕೊಂಡು ಬಂದಿದ್ದರು: ಐತಪ್ಪ ತನ್ನ ಬೈಕ್‌ನಲ್ಲಿ ರೌಂಡ್ಸ್‌ ಕಾರ್ಯಾಚರಣೆ ನಡೆಸುತ್ತಾ ಮುಂಜಾನೆ 3.20ರ ವೇಳೆಗೆ ಲಾಲ್‌ಬಾಗ್‌ನಿಂದ ಉರ್ವಸ್ಟೋರ್‌ ಕಡೆಗೆ ನಿಧಾನವಾಗಿ ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದರು. ಅದೇ ಹೊತ್ತಿಗೆ ಇಬ್ಬರು ಬೈಕ್‌ ಸವಾರರು ಲಾಲ್‌ಬಾಗ್‌ನಿಂದಲೇ ಎಎಸ್‌ಐ ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದರು. ಇದನ್ನು ಗಮನಿಸಿದ ಎಎಸ್‌ಐ ಮತ್ತಷ್ಟು ನಿಧಾನಗೊಳಿಸಿದ್ದು, ಲೇಡಿಹಿಲ್‌ ವೃತ್ತ ದಾಟು ವಷ್ಟರಲ್ಲಿ ಹಿಂಬಾಲಿಸಿ ಬಂದವರು ಐತಪ್ಪ ಅವರ ಬೈಕ್‌ನ ಸಮೀಪ ಬಂದರು. ಎಎಸ್‌ಐ ಅವರು ಬೈಕ್‌ ನಿಲ್ಲಿಸಿದಾಗ ಹಿಂಬಾಲಿಸಿಕೊಂಡು ಬಂದವರು ಕೂಡ ನಿಲ್ಲಿಸಿದರು.

ಹೊಡೆದು ಪರಾರಿ: ಬಳಿಕ ಬೈಕ್‌ ಸವಾರನು “ನೀವು ಯಾವ ಠಾಣೆಯವರು’ ಎಂದು ಎಎಸ್‌ಐ ಬಳಿ ತುಳು ಭಾಷೆಯಲ್ಲಿ ವಿಚಾರಿಸಿ ದ್ದಾರೆ. ಆಗ ಐತಪ್ಪ ಅವರು “ನಾನು ಉರ್ವ ಠಾಣೆಯ ಎಎಸ್‌ಐ’ ಎಂದು ಹೇಳಿದ್ದಾರೆ. “ಈ ಹೊತ್ತಿನಲ್ಲಿ ನೀವು ಎಲ್ಲಿಗೆ ಹೋಗುತ್ತಿದ್ದೀರಿ’ ಎಂದು ಎಎಸ್‌ಐ ಐತಪ್ಪ ಬೈಕ್‌ನಲ್ಲಿದ್ದವರಿಗೆ ಕೇಳಿದಾಗ ಬೈಕ್‌ ಸವಾರನು ಸಹ ಸವಾರನಿಗೆ “ಅಡಿಲಾ’ ಎಂದು ಹೇಳಿದ್ದಾನೆ. (“ಅಡಿಲಾ’ ಎಂದರೆ “ಹೊಡಿ’ ಎಂದರ್ಥ). ಅಷ್ಟರಲ್ಲಿ ಹಿಂಬದಿ ಸವಾರ ತನ್ನ ಕೈಯಲ್ಲಿದ್ದ ಕಬ್ಬಿಣದ ಸರಳಿನಿಂದ ಐತಪ್ಪ ತಲೆಗೆ ಹೊಡಿದಿದ್ದಾನೆ. ಆಗ ಐತಪ್ಪ ಕೆಳಗೆ ಬಿದ್ದಿದ್ದು, ಅಷ್ಟರಲ್ಲಿ ಇಬ್ಬರೂ ಅಪರಿಚಿತರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಮುಸುಕುಧಾರಿಗಳು: ಹಿಂಬಾಲಿಸಿಕೊಂಡು ಬಂದ ಬೈಕ್‌ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ. ಆದರೆ ಮುಸುಕು ಹಾಕಿದ್ದರು. ಎಎಸ್‌ಐ ಐತಪ್ಪ ಅವರು ಹೆಲ್ಮೆಟ್‌ ಧರಿಸಿದ್ದು, ಆರೋಪಿಗಳ ಹೊಡತಕ್ಕೆ ಹೆಲ್ಮೆಟ್‌ಗೆ ಹಾನಿಯಾಗಿದೆ. ತಲೆಗೆ ಗಾಯಗಳಾಗಿವೆ. ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ಅವರು ಡಿಸಿಪಿಗಳಾದ ಕೆ.ಎಂ. ಶಾಂತರಾಜು ಮತ್ತು ಡಾ| ಸಂಜೀವ್‌ ಪಾಟೀಲ್‌ ಅವರು ಘಟನಾ ಸ್ಥಳಕ್ಕೆ ಮತ್ತು ಗಾಯಾಳು ಎಎಸ್‌ಐ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಉರ್ವ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿದ್ದು, ಎಸಿಪಿ ಉದಯ ನಾಯಕ್‌ ನೇತೃತ್ವದಲ್ಲಿ 3 ತಂಡಗಳು ಪ್ರಕರಣದ ತನಿಖೆ ನಡೆಸುತ್ತಿವೆ. 

ಅಪಾಯದಿಂದ ಪಾರು: ಐತಪ್ಪ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಡಾ| ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.

Advertisement

ಶೀಘ್ರ ಬಂಧನ: ಕಮಿಷನರ್‌
 ಎಎಸ್‌ಐ ಐತಪ್ಪ ಅವರ ಕೊಲೆ ಯತ್ನ ಘಟನೆಯ ಬಗ್ಗೆ ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆಯನ್ನು ಹೊಂದಿದ್ದೇವೆ ಎಂದು ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ತಿಳಿಸಿದ್ದಾರೆ.

ಲಾಠೀ ಚಾರ್ಜ್‌ಗೆ ಪ್ರತೀಕಾರ?
ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮಂಗಳವಾರ ನಗರದ ಪೊಲೀಸ್‌ ಕಮಿಷನರ್‌ ಕಚೇರಿ ಬಳಿ ನಡೆದ ಲಾಠಿ ಚಾರ್ಜ್‌ ಘಟನೆಗೆ ಪ್ರತೀಕಾರವಾಗಿ ಈ ಹಲ್ಲೆ ನಡೆದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next