Advertisement

ತಗ್ಗುತ್ತಿದೆ ಅಂತರ್ಜಲ; ಮುನ್ನೆಚ್ಚರಿಕೆ ವಹಿಸಲಿದು ಸಕಾಲ

12:30 AM Feb 07, 2019 | |

ಮಂಗಳೂರು: ಏರುತ್ತಿರುವ ಕಟ್ಟಡಗಳ ಸಂಖ್ಯೆ, ಜನಸಂಖ್ಯೆ, ಕಾಡುನಾಶ ಮುಂತಾದ ಕಾರಣಗಳಿಂದಾಗಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಶೇ. 50ರಷ್ಟು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿದೆ. ಆದರೆ ಸದ್ಯಕ್ಕೆ ತಾಲೂಕಿನಲ್ಲಿ ನೀರಿನ ಸಮಸ್ಯೆ ತಲೆದೋರಿಲ್ಲ ವಾದರೂ ಇನ್ನೆರಡು ತಿಂಗಳು ಗಳಲ್ಲಿ ಜೀವಜಲದ ಕೊರತೆ ಎದುರಾಗದಂತೆ ಈಗಿಂದಲೇ ಎಚ್ಚರ ಅಗತ್ಯವಾಗಿದೆ.

Advertisement

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮರವೂರು, ಅದ್ಯಪಾಡಿ, ಮೂಡುಬಿದಿರೆ ಅಣೆಕಟ್ಟಿನಿಂದ ತಾಲೂಕು ವ್ಯಾಪ್ತಿಗೆ ನೀರು ಪೂರೈಕೆಯಾಗುತ್ತಿದೆ. ಕೊಳವೆ ಬಾವಿ ಮತ್ತು ತೆರೆದ ಬಾವಿಗಳ ನೀರನ್ನೂ ಬಳಸಲಾಗುತ್ತಿದೆ. ಅಲ್ಲದೆ ಮಂಗಳೂರು ನಗರಕ್ಕೆ ಪ್ರತಿದಿನ ತುಂಬೆ ಅಣೆ ಕಟ್ಟಿನಿಂದ ಪೂರೈಕೆಯಾಗುವ 160 ಎಂಎಲ್‌ಡಿ ನೀರಿನಲ್ಲಿ 1 ಎಂಜಿಡಿ ನೀರು ಮೂಲ್ಕಿ, 2 ಎಂಜಿಡಿ ನೀರು ಉಳ್ಳಾಲಕ್ಕೆ ಪೂರೈಕೆಯಾಗುತ್ತಿದೆ.

ಹಿಂದಿನ ವರ್ಷ ಮೇ ತಿಂಗಳಿಗಾಗುವಾಗ ನೀರಿನ ಸಮಸ್ಯೆ ಬಹುವಾಗಿಯೇ ಕಾಡಿತ್ತು. ಆದರೆ ಮಂಗಳೂರು ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 2018ರಲ್ಲಿ ಮಳೆಯ ಪ್ರಮಾಣ 856.3 ಮಿ.ಲೀ. ಹೆಚ್ಚಾಗಿದೆ. ಮಳೆ ಹೆಚ್ಚಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸದು ಎಂಬ ನಿರಾಳತೆಯಲ್ಲಿ ಜನರಿದ್ದಾರೆ. ಆದರೆ ಜನವರಿ ವೇಳೆಗೇ ಬಹುತೇಕ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿರುವುದರಿಂದ ಬಿಸಿಲಿನ ತೀವ್ರತೆ ಜಾಸ್ತಿಯಾದಲ್ಲಿ ನೀರಿನ ಸಮಸ್ಯೆ ಬಾಧಿಸದು ಎಂದು ಸುಮ್ಮನಾಗುವಂತಿಲ್ಲ.
ಮಂಗಳೂರು ತಾಲೂಕು ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟು 55 ಗ್ರಾಮ ಪಂಚಾಯತ್‌ಗಳಿವೆ. ಕಳೆದ ಮೂರು ವರ್ಷಕ್ಕಿಂತ ಹಿಂದೆ ಕೊಳವೆ ಬಾವಿಗಳಲ್ಲಿ 400 ಅಡಿಯಲ್ಲಿ ನೀರು ಸಿಗುತ್ತಿತ್ತು. ಪ್ರಸ್ತುತ ನೀರಿಗಾಗಿ 750-800 ಅಡಿಯ ವರೆಗೂ ಕೊರೆಯಬೇಕಾಗುತ್ತದೆ. ಈ ಹಿಂದಿನ ಸ್ಥಿತಿಗತಿಗಳನ್ನು ಅವಲೋಕಿಸಿಕೊಂಡು  ಈ ವರ್ಷ ನೀರಿನ ಗರಿಷ್ಠ ಉಳಿಕೆಗೆ ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರಯತ್ನ ಮಾಡಲಾಗುತ್ತದೆ.ಹರೇಕಳದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಲ್ಲಿ 20 ಪಂಚಾಯತ್‌ ವ್ಯಾಪ್ತಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.

ಕೊರತೆಗೆ ಕಾರಣ
ತಾಲೂಕಿನಲ್ಲಿ ಹರಿಯುವ ನೀರನ್ನು ಇಂಗಿಸುವುದಕ್ಕೆ ಯಾವುದೇ ಕ್ರಮಗಳಾಗುತ್ತಿಲ್ಲ. ನೀರಿನ ಮೂಲ ಸಂರಕ್ಷಿಸುವ ಕೆಲಸ ನಡೆಯುತ್ತಿಲ್ಲ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಭವಿಷ್ಯ ದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ತಾ.ಪಂ. ವತಿಯಿಂದ ನರೇಗಾ ಯೋಜನೆಯಡಿ ಬೋರ್‌ವೆಲ್‌ ಮರುಪೂರಣ ಯೋಜನೆ ಮಾಡುವ ಕೆಲಸ ನಡೆಯುತ್ತಿದೆ. ಇದರಂತೆ ನೀರು ಕಡಿಮೆಯಾದ ಕೊಳವೆ ಬಾವಿಗಳ ಸುತ್ತ ಗುಂಡಿಗಳನ್ನು ಕೊರೆದು ನೀರಿಂಗಿಸುವ ಕೆಲಸ ನಡೆಯುತ್ತಿದೆ. ಜಲಾನಯನ ಇಲಾಖೆ ವತಿಯಿಂದಲೂ ಇಂಗುಗುಂಡಿಗಳನ್ನು ರಚಿಸಿ ನೀರಿಂಗಿಸುವ ಕೆಲಸ ನಡೆಯುತ್ತಿದೆ.

ಕುಸಿತ ತಡೆಗೆ ಕ್ರಮ ಅಗತ್ಯ 
ಇದೀಗ ತಾಲೂಕಿನಲ್ಲಿ 2.4 ಮೀಟರ್‌ನಷ್ಟು ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ಭವಿಷ್ಯದಲ್ಲಿ ನೀರಿನ ಕೊರತೆ ಬಾರದಿರಲು ಇದನ್ನು ಮತ್ತೆ ಮೇಲೆತ್ತುವುದು ಹೇಗೆ ಎಂಬ ಯೋಜನೆಯನ್ನು ಆಡಳಿತ ವ್ಯವಸ್ಥೆ ಮಾಡಬೇಕಿದೆ.

Advertisement

40 ಲಕ್ಷ ರೂ.
ನೀರಿನ ಕೊರತೆ ಉಂಟಾಗದಂತೆ ತಡೆಯಲು ಪ್ರತಿವರ್ಷ ಸಾಕಷ್ಟು  ಶ್ರಮ ವಹಿಸಲಾಗುತ್ತಿದೆ. ಟಾಸ್ಕ್ ಪೋರ್ಸ್‌ ಯೋಜನೆಯಡಿ ತುರ್ತು ಕೊಳವೆ  ಬಾವಿ ಕೊರೆಯಲು, ಪೈಪ್‌ಲೈನ್‌ ದುರಸ್ತಿ, ಬೋರ್‌ವೆಲ್‌ ಆಳ ಮಾಡಲು ಮುಂತಾದ ಕೆಲಸಗಳಿಗಾಗಿ ಪ್ರತಿ ವರ್ಷ 40 ಲಕ್ಷ  ರೂ. ಸರಕಾರದಿಂದ ಬಿಡುಗಡೆಯಾಗುತ್ತದೆ. ಮುಂದಿನ ಮಾರ್ಚ್‌ ತಿಂಗಳೊಳಗೆ ಆ ಅನುದಾನ ಬಿಡುಗಡೆಯಾಗುವ ನಿರೀಕ್ಷೆ  ಇರುವುದರಿಂದ ತತ್‌ಕ್ಷಣದ ನೀರಿನ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯವಾಗುತ್ತದೆ.
– ಮೊಹಮ್ಮದ್‌ ಮೋನು, ಅಧ್ಯಕ್ಷರು, ಮಂಗಳೂರು ತಾಲೂಕು ಪಂಚಾಯತ್‌

ಗ್ರಾಮಗಳ ಪಟ್ಟಿ ಸಿದ್ಧ
ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಪ್ರದೇಶಗಳಿಗೆ ಸರಕಾರದ  ಟಾಸ್ಕ್ಪೋರ್ಸ್‌ ಮಾರ್ಗಸೂಚಿಯಡಿ ಕಡ್ಡಾಯ ವಾಗಿ ಕುಡಿಯುವ ನೀರಿನ ವ್ಯವಸ್ಥೆ  ಕಲ್ಪಿಸಬೇಕು ಎಂದು ಮಂಗಳೂರು ತಾಪಂ ವ್ಯಾಪ್ತಿಯ ಎಲ್ಲ ಗ್ರಾಪಂಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲ್ಲದೆ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದ್ದು, ಆ ಪ್ರಕಾರ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ತಯಾರಿ ನಡೆಸಿದ್ದೇವೆ. 
– ರಘು ಎ. ಇ.,ತಾಪಂ ಕಾರ್ಯನಿರ್ವಹಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next