Advertisement

ಪೊಲೀಸ್‌ ಫೋನ್‌ ಇನ್‌

01:11 PM Feb 10, 2018 | |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು-ಸುರತ್ಕಲ್‌ ನಡುವಣ ರಸ್ತೆ ಹದಗೆಟ್ಟಿದ್ದು, ಸಂಚಾರ ಕಷ್ಟಕರವಾಗಿದೆ. ರಸ್ತೆಯ ಅಲ್ಲಲ್ಲಿ ಡಾಮರು ಎದ್ದು ಹೋಗಿದ್ದು, ಹಲವು ತಿಂಗಳಿನಿಂದ ಈ ಸಮಸ್ಯೆ ಇದೆ. ಕೂಡಲೇ ದುರಸ್ತಿ ಮಾಡಬೇಕು ಎಂದು ಶುಕ್ರವಾರ ಮಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಒತ್ತಾಯಿಸಿದರು.

Advertisement

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಫೋನ್‌ ಕರೆಗಳನ್ನು ಸ್ವೀಕರಿಸಿದ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ತಿಳಿಸಿದರು.

ಜ್ಯೋತಿ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಜಾಂ ಆಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಫಳ್ನೀರ್‌ ಕಡೆಯಿಂದ ಬಲ್ಮಠ ನ್ಯೂ ರೋಡ್‌ನ‌ಲ್ಲಿ ವಾಹನ ಪ್ರವೇಶವನ್ನು ನಿರ್ಬಂಧಿಸುವ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಈ ರಸ್ತೆಯಲ್ಲಿ ಫಳ್ನೀರ್‌ ಕಡೆಯಿಂದ ಈ ರಸ್ತೆಯಲ್ಲಿ ಜ್ಯೋತಿ ಜಂಕ್ಷನ್‌ ಗೆ ವಾಹನ ಸಂಚಾರ ನಿಷೇಧವನ್ನು ಕೂಡಲೇ ಅನುಷ್ಠಾನಿಸುವಂತೆ ಟ್ರಾಫಿಕ್‌ ಎಸಿಪಿ ಮಂಜುನಾಥ ಶೆಟ್ಟಿ ಅವರಿಗೆ ಸೂಚಿಸಿದರು. 

ನಂದಿನಿ ಹಾಲಿಗೆ ಕೆಲವು ಅಂಗಡಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಜಾಸ್ತಿ ಹಣ ವಸೂಲು ಮಾಡಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು. ಅಧಿಕ ದರ ವಸೂಲಿ ಮಾಡುವ ಅಂಗಡಿಗಳವರ ವಿರುದ್ಧ ಕರ್ನಾಟಕ ಹಾಲು ಒಕ್ಕೂಟಕ್ಕೆ ಹಾಗೂ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಪೊಲೀಸ್‌ ಕಮಿಷನರ್‌ ಸಲಹೆ ಮಾಡಿದರು.

ರಿಕ್ಷಾ ತಂಗುದಾಣ
ನಗರದಲ್ಲಿ ಇರುವ ಆಟೋ ರಿಕ್ಷಾ ತಂಗುದಾಣಗಳ ಸಮೀಕ್ಷೆ ನಡೆಸಲಾಗಿದ್ದು, ಅವುಗಳಲ್ಲಿ ಅಧಿಕೃತ ರಿಕ್ಷಾ ಪಾರ್ಕ್‌ಗಳನ್ನು ಗುರುತಿಸಿ ನಾಮ ಫಲಕವನ್ನು ಅಳವಡಿಸುವಂತೆ ಮಹಾನಗರ ಪಾಲಿಕೆಯನ್ನು ಕೋರಲಾಗಿದೆ ಎಂದು ಆಯುಕ್ತರು ತಿಳಿಸಿದರು.

Advertisement

ಅತ್ರೆಬೈಲ್‌ಗೆ ಸರಕಾರಿ ಬಸ್‌ಗೆ ಪತ್ರ
ನಗರದ ಅತ್ರೆಬೈಲ್‌ಗೆ ಬಸ್‌ ಬರುತ್ತಿಲ್ಲ ಎಂದು ಸ್ಥಳೀಯರು ಇಂದಿನ ಫೋನ್‌ ಇನ್‌ ಕಾರ್ಯಕ್ರಮದಲ್ಲಿಯೂ ದೂರು ನೀಡಿದರು.

ಇದಕ್ಕೆ ಉತ್ತರಿಸಿದ ಪೊಲೀಸ್‌ ಆಯುಕ್ತರು ಸಾರ್ವಜನಿಕರ ಬೇಡಿಕೆ ಇರುವುದರಿಂದ ಅತ್ರೆಬೈಲ್‌ಗೆ ತಾತ್ಕಾಲಿಕ ಪರವಾನಿಗೆ ಆಧಾರದಲ್ಲಿ ಸರಕಾರಿ ಬಸ್‌ ಓಡಿಸುವಂತೆ ಕೆ.ಎಸ್‌.ಆರ್‌.ಟಿ.ಸಿ. ಅಧಿಕಾರಿಗಳಿಗೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರ ಸರಕಾರಿ ಬಸ್‌ ಓಡಾಡುವ ನಿರೀಕ್ಷೆ ಇದೆ ಎಂದರು. ಇದು 70ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 27 ಕರೆಗಳು ಬಂದವು.

ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌, ಎಸಿಪಿ ಮಂಜುನಾಥ ಶೆಟ್ಟಿ , ಟ್ರಾಫಿಕ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಗಳಾದ ಶಿವ ಪ್ರಕಾಶ್‌ ಮತ್ತು ಎ.ಎ. ಅಮಾನುಲ್ಲಾ, ಎಎಸ್‌ಐ ಯೂಸುಫ್‌, ಹೆಡ್‌ಕಾನ್ಸ್‌ಟೆಬಲ್‌ ಪುರುಷೋತ್ತಮ ಅವರು ಉಪಸ್ಥಿತರಿದ್ದರು.

ಹೆಲ್ಮೆಟ್‌ ವಿತರಿಸಿ
ಹೆಲ್ಮೆಟ್‌ ಧರಿಸದೆ ವಾಹನ ಚಲಾಯಿಸುವುದನ್ನು ಕೆಲವರು ಮುಂದುವರಿಸಿದ್ದು, ಪೊಲೀಸರು ಅಂತಹ ವಾಹನಗಳನ್ನು ತಡೆದು ನಿಲ್ಲಿಸಿ ಸವಾರರಿಗೆ ದಂಡದ ರೂಪದಲ್ಲಿ ಹೆಲ್ಮೆಟ್‌ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳ ಬೇಕೆಂದು ವ್ಯಕ್ತಿಯೊಬ್ಬರು ಸಲಹೆ ಮಾಡಿದರು. ಪೊಲೀಸರು ಹೆಲ್ಮೆಟ್‌ ಮಾರಾಟ ಮಾಡುವಂತಹ ಕಾಯಕದಲ್ಲಿ ತೊಡಗಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ ಪೊಲೀಸ್‌ ಕಮಿಷನರ್‌ ಹೆಲ್ಮೆಟ್‌ ಧಾರಣೆ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next