Advertisement

ಸ್ಮಾರ್ಟ್‌ಸಿಟಿಯಡಿ ಬಂದರು ದಕ್ಕೆ ಕಾಮಗಾರಿ

12:30 AM Jan 24, 2019 | |

ಮಂಗಳೂರು: ಅನುದಾನದ ಕೊರತೆಯಿಂದಾಗಿ ಆಮೆಗತಿಯಲ್ಲಿ ಸಾಗಿರುವ ಮಂಗಳೂರು ಮೀನುಗಾರಿಕಾ ದಕ್ಕೆಯ ತೃತೀಯ ಹಂತದ ವಿಸ್ತರಣೆ ಕಾಮಗಾರಿಯನ್ನು ಈಗ ಸ್ಮಾರ್ಟ್‌ಸಿಟಿ ಯೋಜನೆಯ ಏರಿಯಾ ಬೇಸ್ಡ್ ಡೆವಲಪ್‌ಮೆಂಟ್(ಎಬಿಡಿ)ನಡಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಎಂಟು ವರ್ಷಗಳಿಂದ ಹಿನ್ನಡೆ ಅನುಭವಿಸುತ್ತಿರುವ ಈ ದಕ್ಕೆಯ ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಳ್ಳಲಿದೆ.

Advertisement

ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ಧಿಯಲ್ಲಿ ಕೈಗೊಳ್ಳುವ ಯೋಜನೆಗಳ ಕುರಿತಂತೆ ಇತ್ತೀಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೀನುಗಾರರ ಮುಖಂಡರ ಜತೆ‌ ನಡೆದ ಸಮಾಲೋಚನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಈ ತೀರ್ಮಾನಕ್ಕೆ ಬರಲಾಗಿದೆ.

ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ಎಬಿಡಿಯಡಿ ಈಗಾಗಲೇ ಮಂಗಳೂರು ಮೀನುಗಾರಿಕಾ ಬಂದರು ಹಾಗೂ ಹಳೆಯ ವಾಣಿಜ್ಯ ಬಂದರಿನ ಸಮಗ್ರ ಅಭಿವೃದ್ಧಿ ಒಳಗೊಂಡಿದೆ. ಇದರಲ್ಲಿ ನಿರ್ಮಾಣದಲ್ಲಿರುವ ಮೂರನೇ ಹಂತದ ಮೀನುಗಾರಿಕಾ ಜೆಟ್ಟಿಯನ್ನು ಕೂಡ ಸೇರಿಸಿ ಸಮಗ್ರವಾಗಿ ಮೀನುಗಾರಿಕಾ ಬಂದರಿಗೆ ಹೊಸ ರೂಪ ನೀಡುವ ಯೋಜನೆಯಿದೆ. ಮೀನುಗಾರಿಕಾ ಚಟುವಟಿಕೆಗಳ ಜತೆಗೆ ಗೋವಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇರುವ ಮಾದರಿಯಲ್ಲೇ ಪ್ರವಾಸಿಗರನ್ನು ಕೂಡ ಆಕರ್ಷಿಸಲು ನಿರ್ಧರಿಸಲಾಗಿದೆ.

ಆರಂಭದಲ್ಲೇ ವಿಘ್ನ
ಮೀನುಗಾರಿಕಾ ಬೋಟ್‌ಗಳ ದಟ್ಟಣೆಯಿಂದಾಗಿ 2010ರಲ್ಲಿ 3ನೇ ಹಂತದ ವಿಸ್ತರಣೆಗೆ ಚಾಲನೆ ನೀಡಲಾಗಿತ್ತು. ಯೋಜನೆಯಂತೆ 2015ಕ್ಕೆ ಪೂರ್ಣಗೊಂಡು ಉಪಯೋಗಕ್ಕೆ ಬಿಟ್ಟುಕೊಡಬೇಕಾಗಿತ್ತು. ಆರಂಭದಲ್ಲಿ ಯೋಜನಾ ವೆಚ್ಚ 57 ಕೋ.ರೂ. ಇತ್ತು. ಆದರೆ ಅನುಷ್ಠಾನ ಹಂತದಲ್ಲಿದ್ದಾಗ ಹಸಿರುಪೀಠದಲ್ಲಿ ದಾವೆ ದಾಖಲಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ವಾದ-ವಿವಾದಗಳ ಬಳಿಕ ನ್ಯಾಯಾಲಯ ಕಾಮಗಾರಿ ಮುಂದುವರಿಸಲು ಹಸಿರು ನಿಶಾನೆ ತೋರಿಸಿತ್ತು. ಆದರೆ ಯೋಜನಾ ವೆಚ್ಚದಲ್ಲಿ ಆಗಿರುವ ಏರಿಕೆ ಮತ್ತು ಕಾಮಗಾರಿಯಲ್ಲಿ ಕೆಲವು ಬದಲಾವಣೆ ಮಾಡಿ ಯೋಜನೆಯನ್ನು 80 ಕೋ.ರೂ. ವೆಚ್ಚಕ್ಕೆ ಪರಿಷ್ಕರಿಸಲಾಗಿತ್ತು.

ಆ ಪೈಕಿ ಸುಮಾರು 56 ಕೋ.ರೂ. ಕಾಮಗಾರಿ ನಡೆದಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ 51 ಕೋ.ರೂ. ಬಿಡುಗಡೆಯಾಗಿದೆ. ಇನ್ನೂ ಸುಮಾರು 5 ಕೋ.ರೂ. ಬಿಡುಗಡೆಗೆ ಬಾಕಿಯಿದೆ.

Advertisement

ಪ್ರಸ್ತುತ ತೃತೀಯ ಹಂತದ ಜೆಟ್ಟಿ ಕಾಮಗಾರಿ ಅಪೂರ್ಣವಾಗಿದ್ದರೂ ದೋಣಿಗಳ ಕಾರ್ಯಾಚರಣೆ ಆರಂಭವಾಗಿದೆ. ಮೀನಿನ ಎಣ್ಣೆ ಹಾಗೂ ಗೊಬ್ಬರಕ್ಕೆ ಹೋಗುವ ಮೀನುಗಳನ್ನು ಅಲ್ಲಿ ಇಳಿಸಲಾಗುತ್ತಿದೆ. ದ್ವಿತೀಯ ಹಂತದ ಜೆಟ್ಟಿಯಿಂದ ತೃತೀಯ ಹಂತದ ಜೆಟ್ಟಿಗೆ ಹೋಗಲು ಸೇತುವೆ ನಿರ್ಮಾಣವಾಗಿದೆ. ಆದರೆ ಇದಕ್ಕೆ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ. ಸದ್ಯಕ್ಕೆ ಹೊಗೆ ಬಜಾರ್‌ನಲ್ಲಿ ಇರುವ ಸಂರ್ಪಕ ರಸ್ತೆಯನ್ನು ತೃತೀಯ ಹಂತದ ಜೆಟ್ಟಿಗೆ ಸಂಪರ್ಕ ರಸ್ತೆಯಾಗಿ ಬಳಸಲಾಗುತ್ತಿದೆ. ಮೀನುಗಾರರೇ ತಾತ್ಕಾಲಿಕವಾಗಿ ಈ ರಸ್ತೆಯನ್ನು ಬಳಕೆಗೆ ಸಿದ್ಧಗೊಳಿಸಿದ್ದಾರೆ. ಇದೇ ರೀತಿ ಬೆಂಗರೆ ಬದಿಯಲ್ಲಿರುವ ಮೀನುಗಾರಿಕಾ ಜೆಟ್ಟಿಯಲ್ಲಿ ದೋಣಿಗಳು ತಂಗುತ್ತಿವೆ.

ತುರ್ತು ಕಾಮಗಾರಿಗಳು
ತೃತೀಯ ಹಂತದ ಮೀನುಗಾರಿಕಾ ಜೆಟ್ಟಿಯ ಪೂರ್ಣಪ್ರಮಾಣದಲ್ಲಿ ಬಳಕೆಗೆ ಯೋಜನೆಯಲ್ಲಿ ಒಳಗೊಂಡಿರುವ ಕೆಲವು ಕಾಮಗಾರಿಗಳು ತುರ್ತಾಗಿ ನಡೆಯಬೇಕಿದೆ. ರಸ್ತೆ, ನೀರು, ವಿದ್ಯುತ್‌ ಸಂಪರ್ಕ, ಆವರಣಗೋಡೆ, ಮೈನಸ್‌ 3 ಮೀಟರ್‌ ಡ್ರೆಜ್ಜಿಂಗ್‌, ಶೌಚಾಲಯ ಸೌಲಭ್ಯಗಳು ಮುಖ್ಯವಾದವುಗಳು.

ಜತೆಗೆ ಮೀನುಗಾರರ ವಿಶ್ರಾಂತಿಕೊಠಡಿ, ಬಲೆ ದುರಸ್ತಿ ಶೆಡ್‌ ನಿರ್ಮಾಣವೂ ಮೂಲ ಯೋಜನೆಯಲ್ಲಿ ಒಳಗೊಂಡಿದೆ. ಇದಕ್ಕೆ ಇನ್ನೂ ಸುಮಾರು 25 ಕೋ.ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಬಾಕಿಯಿರುವ ಈ ಹಣವನ್ನು ಸ್ಮಾರ್ಟ್‌ಸಿಟಿ ಅನುದಾನದಡಿ ವಿನಿಯೋಗಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಮಂಗಳೂರಿನ ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಇದರಲ್ಲಿ ಮೂರನೇ ಹಂತವನ್ನು ಸೇರಿಸಿ ಅಭಿವೃದ್ಧಿಗೊಳಿಸಲಾಗುವುದು.
-ಶಶಿಕಾಂತ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

– ಕೇಶವ ಕುಂದರ್‌
 

Advertisement

Udayavani is now on Telegram. Click here to join our channel and stay updated with the latest news.

Next