Advertisement

ಮಂಗಳೂರು ಸ್ಮಾರ್ಟ್‌ಸಿಟಿ :958.57 ಕೋ.ರೂ. ಕಾಮಗಾರಿ ಪ್ರಸ್ತಾವನೆ ಅಂತಿಮ

09:13 AM Jun 27, 2019 | sudhir |

ಮಂಗಳೂರು: ಮಂಗಳೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 958.57 ಕೋಟಿ ರೂ.ಗಳ 44 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ ಎಂದು ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಚ್. ನಾರಾಯಣಪ್ಪ ಹೇಳಿದ್ದಾರೆ.

Advertisement

ಇಲ್ಲಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ಸ್ಮಾರ್ಟ್‌ಸಿಟಿ ಕುರಿತ ವಿಡಿಯೋ ಕಾನ್ಫರೆನ್ಸ್‌ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಲಾ 100 ಕೋಟಿ ರೂ.ಗಳನ್ನು ಐದು ವರ್ಷಗಳಲ್ಲಿ ಬಿಡುಗಡೆಗೊಳಿಸಲಿವೆ. ಒಟ್ಟು 1 ಸಾವಿರ ಕೋಟಿ ರೂ. ಮೊತ್ತಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ಸಿಗುವ ಪ್ಯಾನ್‌ ಸಿಟಿಯೂ ಸೇರಿದೆ. ಈ ಎಲ್ಲ ಕಾಮಗಾರಿಗಳನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಜಲಾಭಿಮುಖ ಪ್ರದೇಶ ಅಭಿವೃದ್ಧಿ

ಜಲಾಭಿಮುಖ ಪ್ರದೇಶ ಅಭಿವೃದ್ಧಿ ಪರಿ ಕಲ್ಪನೆಯ ಯೋಜನಾ ವರದಿ ಸಿದ್ಧಪಡಿಸ ಲಾಗುತ್ತಿದ್ದು, ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶವಿದೆ. ಮಂಗಳೂರು ಧಕ್ಕೆ ಪ್ರದೇಶಕ್ಕೆ ನಡಿಗೆ ಪಥ ನಿರ್ಮಿಸಿ ವಿಹಾರ ತಾಣವನ್ನಾಗಿಸುವ ಯೋಜನೆ ಇದೆ. ಧಕ್ಕೆಯಲ್ಲಿ ಕೃತಕ ದ್ವೀಪವಾಗಿ ಮಾರ್ಪಟ್ಟಿರುವ ಜಾಗವನ್ನು ಪ್ರವಾಸಿ ತಾಣವಾಗಿಸುವುದು ಸೇರಿದೆ. ಸುಮಾರು 235 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಕುರಿತಾದ ವರದಿ ಸಿದ್ಧಪಡಿಸಲಾಗುತ್ತಿದೆ ಎಂದರು.

Advertisement

ಸಹಭಾಗಿತ್ವದ ಯೋಜನೆ

ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ 912.17 ಕೋಟಿ ರೂ.ಗಳಲ್ಲಿ 7 ಕಾಮಗಾರಿಗಳು ನಡೆಯಲಿವೆ. ಪ್ರಸ್ತುತ 101.08 ಕೋಟಿ ರೂ.ಗಳ ಎರಡು ಕಾಮಗಾರಿಗಳಿಗೆ ಕಾರ್ಯಾದೇಶವಾಗಿದೆ. ಸರಕಾರಿ ಕಟ್ಟಡಗಳ ಮೇಲೆ 2ನೇ ಹಂತದಲ್ಲಿ ಸೌರ ಘಟಕಗಳ ಸ್ಥಾಪನೆಗೆ 7.08 ಕೋಟಿ ರೂ. ನಿಗದಿಪಡಿಸಲಾಗಿದೆ. 94 ಕೋಟಿ ರೂ.ಗಳಲ್ಲಿ ಹಂಪನಕಟ್ಟೆ ಜಂಕ್ಷನ್‌ನಲ್ಲಿ ಮಲ್ಟಿಲೆವೆಲ್ ಕಾರ್‌ ಪಾರ್ಕಿಂಗ್‌ ಅಭಿವೃದ್ಧಿ ನಡೆಯಲಿದೆ ಎಂದರು.

ಸುಮಾರು 214.35 ಕೋಟಿ ರೂ.ಗಳ 2 ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆ. ಕೇಂದ್ರ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆ ಗಳನ್ನು 145 ಕೋಟಿ ರೂ.ಗಳಲ್ಲಿ ಪುನರ್‌ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದ್ದು, ಟೆಂಡರ್‌ ಬಾಕಿ ಇದೆ. ಸುಮಾರು 69.35 ಕೋಟಿ ರೂ.ಗಳಲ್ಲಿ ನಗರದ ಎಲ್ಲ ಬೀದಿದೀಪಗಳನ್ನು ಎಲ್ಇಡಿ ಯಾಗಿ ಪರಿವರ್ತಿಸಲಾಗುವುದು ಎಂದರು.

ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಕದ್ರಿಪಾರ್ಕನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಹೈಟೆಕ್‌ ಸ್ಪರ್ಶ ನೀಡಲಾಗುವುದು. ಎಮ್ಮೆಕೆರೆಯಲ್ಲಿ 24.94 ಕೋ.ರೂ. ವೆಚ್ಚದಲ್ಲಿಅಂತಾರಾಷ್ಟ್ರೀಯ ಈಜುಕೊಳ ಕೂಡ ನಿರ್ಮಾಣವಾಗಲಿದೆ. ಒಟ್ಟು 2 ಕೋ.ರೂ. ವೆಚ್ಚದಲ್ಲಿ ಕಾವೂರು ಮತ್ತು ಗುಜ್ಜರಕೆರೆಗಳು ಪುನರುಜ್ಜೀವನಗೊಳ್ಳಲಿವೆ. ಮಂಗಳಾ ಕ್ರೀಡಾಂಗಣದ ಸಂಪೂರ್ಣ ಉನ್ನತೀಕರಣಕ್ಕೆ ಯೋಜಿಸಲಾಗಿದ್ದು, 10 ಕೋ.ರೂ. ಮೀಸಲಿರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯು ಪಡೀಲ್ಗೆ ಸ್ಥಳಾಂತರಗೊಳ್ಳಲಿದ್ದು, ಈಗಿರುವ ಕಚೇರಿಯನ್ನು ಮ್ಯೂಸಿಯಂ ಮತ್ತು ಗ್ರಂಥಾಲಯವಾಗಿ ಪರಿವರ್ತಿಸಲಾಗುವುದು. ಕಾರ್‌ಸ್ಟ್ರೀಟ್ ಮತ್ತು ವೆಂಕಟರಮಣ ದೇವಾಲಯ ಧಾರ್ಮಿಕ ವಲಯದ ಮರು ಸುಧಾರಣೆ, ಜೆಪ್ಪುಬಳಿಯ ರಾ.ಹೆ. 66ರಿಂದ ಮೋರ್ಗನ್ಸ್‌ಗೇಟ್ ರೈಲ್ವೇ ಕೆಳ ಸೇತುವೆ ಸೇರಿದಂತೆ ಸಂಪರ್ಕ ರಸ್ತೆ30 ಕೋ.ರೂ. ವೆಚ್ಚದಲ್ಲಿ ಆಗಲಿದೆ ಎಂದರು.

ಬಹುಮಹಡಿ ಕಾರು ಪಾರ್ಕಿಂಗ್‌

ಹಂಪನಕಟ್ಟೆ ಜಂಕ್ಷನ್‌ನ ಚಿಲ್ಲರೆ ವ್ಯಾಪಾರಸ್ಥ ರಿಗೆ ಬಹುಮಹಡಿ ಕಟ್ಟಡದ ಜತೆಗೆ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್‌ ಮಾಡಲು ಟೆಂಡರ್‌ ಕರೆಯ ಲಾಗಿದೆ. ಶೇ. 99ರಷ್ಟು ಅಂಗಡಿ ಮಾಲಕರು ಸಮ್ಮತಿಸಿದ್ದಾರೆ. ವಿನ್ಯಾಸವೂ ಅಂಗೀಕಾರ ಗೊಂಡಿದೆ. ಇದರಿಂದ ಮನಪಾಕ್ಕೆ ಸುಮಾರು 2 ಕೋ.ರೂ. ಆದಾಯ ಬರಲಿದೆ ಎಂದರು.

ಸಮಗ್ರ ಸಾರಿಗೆ ಕೇಂದ್ರವಾಗಿ ನಿಲ್ದಾಣ ನಿರ್ಮಾಣವಾಗಲಿದೆ. ಸದ್ಯ ಈ ಯೋಜನೆ ಪರಿಕಲ್ಪನೆ ವರದಿಯ ಹಂತದಲ್ಲಿದ್ದು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿದೆ ಎಂದರು.

ಯೋಜನೆಯ ಕಾ.ನಿ. ಎಂಜಿನಿಯರ್‌ಗಳಾದ ಚಂದ್ರಕಾಂತ್‌, ಅಬ್ದುಲ್ ರೆಹಮಾನ್‌ ಉಪಸ್ಥಿತರಿದ್ದರು.

ಬಸ್‌ ನಿಲ್ದಾಣ ಪಂಪ್‌ವೆಲ್ನಿಂದ ಪಡೀಲ್ಗೆ

ಸುಸಜ್ಜಿತ ಬಸ್ಸು ನಿಲ್ದಾಣ ಯೋಜನೆಯು ಪಂಪ್‌ವೆಲ್ನಿಂದ ಪಡೀಲ್ಗೆ ಸ್ಥಳಾಂತರಗೊಂಡಿದೆ. ಪಂಪ್‌ವೆಲ್ ಏಳು ಎಕರೆ ಜಾಗವನ್ನು ಹೊಂದಿದ್ದರೆ, ಪಡೀಲ್ನಲ್ಲಿ 20 ಎಕರೆ ಗುರುತಿಸಿ ಯೋಜನೆ ರೂಪಿಸಲಾಗಿದೆ. ನೂತನ ಜಿಲ್ಲಾಧಿಕಾರಿ ಸಂಕೀರ್ಣದ ಸಮೀಪದಲ್ಲೇ ಜಾಗ ಇದೆ.
– ಬಿ.ಎಚ್. ನಾರಾಯಣಪ್ಪ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ
Advertisement

Udayavani is now on Telegram. Click here to join our channel and stay updated with the latest news.

Next