Advertisement
ಬೈಕಂಪಾಡಿ ವ್ಯಾಪ್ತಿಯಲ್ಲಿರುವ ಒಟ್ಟು ಕೈಗಾರಿಕೆಗಳ ಪೈಕಿ ಸುಮಾರು 400ಕ್ಕೂ ಅಧಿಕ ಕೈಗಾರಿಕೆಗಳು ಪಾಲಿಕೆ ನೀರನ್ನು ಅವಲಂಬಿಸಿದೆ. ವಾರ್ಷಿಕವಾಗಿ ಸುಮಾರು 4 ಕೋ. ರೂ.ಗಳಷ್ಟು ಹಣವನ್ನು ಕೈಗಾರಿಕೆಗಳು ಪಾಲಿಕೆಗೆ ಪಾವತಿಸುತ್ತಿದೆ. ಮಂಗಳೂರಿನಲ್ಲಿ ನೀರು ರೇಷನಿಂಗ್ ಜಾರಿಯಾಗುವ ಸುಳಿವು ಸದ್ಯ ಎದುರಾಗಿದ್ದು, ಹೀಗಾಗಿ ಕೈಗಾರಿಕೆಗಳಿಗೆ ನೀರಿನ ಕೊರತೆ ಕಾಡುವ ಅಪಾಯ ಉಂಟಾಗಿದೆ.
ಇದರಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ಶುರುವಾಗಿದೆ.
Related Articles
ಮಂಗಳೂರಿನ ಬೈಕಂಪಾಡಿ ಹಾಗೂ ಯೆಯ್ನಾಡಿಯಲ್ಲಿ ಕಿರು ಹಾಗೂ ಸಣ್ಣ ಕೈಗಾರಿಕೆಗಳು ಕಾರ್ಯ ನಡೆಸುತ್ತಿವೆ. ಆಹಾರ ಮತ್ತು ತಂಪು ಪಾನೀಯ, ಜವಳಿ, ಮರದ ಉತ್ಪನ್ನ, ಪ್ರಿಂಟಿಂಗ್ ಮತ್ತು ಲೇಖನ ಸಾಮಗ್ರಿ, ಚರ್ಮದ ಉತ್ಪನ್ನ, ರಬ್ಬರ್ ಮತ್ತು ಪ್ಲಾಸ್ಟಿಕ್, ರಾಸಾಯನಿಕ, ಗ್ಲಾಸ್ ಮತ್ತು ಸಿರಾಮಿಕ್, ಮೂಲ ಲೋಹದ ಉತ್ಪನ್ನ, ಜನರಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಸಾರಿಗೆ ಉತ್ಪನ್ನ ಸೇರಿದಂತೆ ಇತರೆ ಉತ್ಪನ್ನಗಳು ಇಲ್ಲಿ ಉತ್ಪಾದನೆಯಾಗುತ್ತವೆ. ಬೈಕಂಪಾಡಿಯಲ್ಲಿ ಕಿರು ಹಾಗೂ ಸಣ್ಣ ಸೇರಿದಂತೆ ಸುಮಾರು 650 ರಷ್ಟು ಕೈಗಾರಿಕೆಗಳು ಹಾಗೂ ಯೆಯ್ನಾಡಿಯಲ್ಲಿ ಸುಮಾರು 45ರಷ್ಟು ಕೈಗಾರಿಕೆಗಳಿವೆ. ಸುಮಾರು 20,000ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
Advertisement
ಎಂಆರ್‌ಪಿಎಲ್, ಎಂಸಿಎಫ್-ಸದ್ಯಕ್ಕೆ ಬಚಾವ್!ನೀರಿನ ಕೊರತೆ ಕಾರಣದಿಂದ ಎಂಆರ್‌ಪಿಎಲ್ 2012, 2016, 2019ರಲ್ಲಿ ಶಾಟ್‌ಡೌನ್ ಆಗಿತ್ತು. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಉತ್ಪಾದನೆ ಆ ವರ್ಷ ಶೇ.40ರಷ್ಟು ಕಡಿಮೆಯಾಗಿತ್ತು. ಸದ್ಯ ಎಂಆರ್‌ಪಿಎಲ್‌ಗೆ ನೀರು ಪೂರೈಕೆ ಪಾಲಿಕೆ ಸ್ಥಗಿತ ಮಾಡಿದೆ. ಇದರಿಂದಾಗಿ ಟೌನ್‌ಶಿಪ್‌ನ ನಿವಾಸಿಗಳಿಗೆ ಅಘೋಷಿತ
ಲೋಡ್‌ಶೆಡ್ಡಿಂಗ್ ಆರಂಭಿಸಲಾಗಿದೆ. ಆದರೆ, ತಣ್ಣೀರುಬಾವಿಯಲ್ಲಿ ಉಪ್ಪು ನೀರು ಸಂಸ್ಕರಣ ಘಟಕ ಕಾರ್ಯನಿರ್ವಹಿಸುವುದರಿಂದ ಘಟಕ ನಿರ್ವಹಣೆಗೆ ನೀರಿನ ಕೊರತೆ ಈ ಬಾರಿ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ. ಈ ಮಧ್ಯೆ ಎಂಸಿಎಫ್, ಕೆಐಒಸಿಎಲ್ ಕಾರ್ಯನಿರ್ವಹಣೆಗೂ ನೀರಿನ ಕೊರತೆ ಸದ್ಯಕ್ಕೆ ಇಲ್ಲವಾದರೂ, ಕೆಲವೇ ದಿನದಲ್ಲಿ ಮಳೆಯಾಗದಿದ್ದರೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಶಾಟ್‌ಡೌನ್ ಎದುರಾದರೆ ರಸಗೊಬ್ಬರ, ಕಬ್ಬಿಣದ ಉಂಡೆ ಉತ್ಪಾದನೆಗೆ ಹೊಡೆತ ಬೀಳಲಿದೆ. ಬೇಗ ಮಳೆಯಾಗದಿದ್ದರೆ ಆತಂಕ
ಸದ್ಯಕ್ಕೆ ಕೈಗಾರಿಕೆಗಳಿಗೆ ನೀರಿನ ಸಮಸ್ಯೆ ಇಲ್ಲ. ಆದರೆ, ಮೇ ಪ್ರಥಮ ವಾರದವರೆಗೆ ಮಳೆಯಾಗದಿದ್ದರೆ ಮತ್ತೆ ಸಮಸ್ಯೆ ಎದುರಾಗುವ ಆತಂಕವಿದೆ. ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಜನರು ಹಾಗೂ ಕೈಗಾರಿಕೆಗಳ ಹಿತದೃಷ್ಟಿಯಿಂದ ಮುಂಜಾಗೃತೆ ವಹಿಸಬೇಕಿದೆ. – ಗಣೇಶ್ ಕಾಮತ್, ಅಧ್ಯಕ್ಷರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸದ್ಯಕ್ಕಿಲ್ಲ ಸಮಸ್ಯೆ
ಸಮಸ್ಯೆ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಸದ್ಯಕ್ಕೆ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ, ಇನ್ನೂ ಕೆಲವು ದಿನ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾದರೆ, ಕೈಗಾರಿಕೆಗಳು ನೀರಿನ ಕೊರತೆ ಎದುರಿಸಬೇಕಾಗಬಹುದು.
– ಅನಂತೇಶ್ ಪ್ರಭು, ಅಧ್ಯಕ್ಷರು, ಕೆನರಾ ಕೈಗಾರಿಕೆಗಳ ಸಂಘ *ದಿನೇಶ್ ಇರಾ