ಮಹಾನಗರ: ವಿಧಾನ ಪರಿಷತ್ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾನ ಪ್ರಕ್ರಿಯೆಯು ಶುಕ್ರವಾರ ನಡೆದಿದ್ದು ಮತದಾನ ಶಾಂತಿಯುತವಾಗಿ ನಡೆಯಿತು. ಉಳ್ಳಾಲ: ವಿಧಾನ ಪರಿಷತ್‌ನ ಪದವೀಧರ, ಶಿಕ್ಷಕ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲ ಹೋಬಳಿಯಲ್ಲಿ ಶಿಕ್ಷಕ ಕ್ಷೇತಕ್ಕೆ 72.70, ಪದವೀಧರ ಕ್ಷೇತ್ರಕ್ಕೆ 67.08 ಮತದಾನವಾಗಿದೆ.
ಕ್ಷೇತ್ರ ವ್ಯಾಪ್ತಿಯ ಕೊಣಾಜೆ ವಿಶ್ವಮಂಗಳ ಶಾಲೆಯ ಕೇಂದ್ರದಲ್ಲಿ 132 ಶಿಕ್ಷಕ ಮತದಾರರಲ್ಲಿ 89 ಮಂದಿ ಮತದಾನ ಮಾಡಿದರೆ, 230 ಪದವೀಧರ ಮತದಾರರಲ್ಲಿ 173 ಮಂದಿ ಮತದಾನ ಮಾಡಿದ್ದಾರೆ. ಬಬ್ಬುಕಟ್ಟೆಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ 260 ಶಿಕ್ಷಕ ಮತದಾರರಲ್ಲಿ 196 ಮತದಾನವಾಗಿದ್ದು, 563 ಪದವೀಧರ ಮತದಾರರಲ್ಲಿ 356 ಮತದಾನವಾಗಿದೆ.
ಮೂಡಬಿದಿರೆ: ಚುನಾವಣೆಗೆ ಮೂಡಬಿದಿರೆ ತಾಲೂಕು ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಪುರಸಭಾ ಕಾರ್ಯಾಲಯದ ತಳ ಅಂತಸ್ತಿನಲ್ಲಿ ತಾಲೂಕಿನ 1139 ನೋಂದಾಯಿತ ಪದವೀಧರರಿಗಾಗಿ 9 ಮತ್ತು 9ಎ ಹೀಗೆ 2 ಮತಗಟ್ಟೆಗಳನ್ನೂ ಪ್ರಧಾನ ಕಚೇರಿಯಲ್ಲಿ 779 ಮಂದಿ ನೋಂದಾಯಿತ ಶಿಕ್ಷಕರಿಗಾಗಿ 9 ಸಂಖ್ಯೆಯ ಮತಗಟ್ಟೆಯನ್ನು ವ್ಯವಸ್ಥೆ ಮಾಡಲಾಗಿತ್ತು.
779 ಮಂದಿ ಶಿಕ್ಷಕರರಲ್ಲಿ 600 ಮಂದಿ ಮತ ಚಲಾಯಿಸುವ ಮೂಲಕ ಶೇ. 77.02 ಹಾಗೂ 1139 ಪದವೀಧರರಲ್ಲಿ 719 ಮಂದಿ ಮತ ಚಲಾಯಿಸುವ ಮೂಲಕ ಶೇ. 63.12 ಪ್ರಮಾಣದಲ್ಲಿ ಮತದಾನಗೈದರು. ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಪುರಸಭೆಯ ಹತ್ತಿರದ ಪ್ರವಾಸಿ ಬಂಗ್ಲೆಯ ಬಳಿ ವಿವಿಧ ಪಕ್ಷಗಳ ಬೂತ್‌ಗಳೂ ಭರ್ಜರಿ ಶಾಮಿಯಾನ ಹಾಕಿಕೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿತ್ತು.
ಮೂಲ್ಕಿ: ಮೂಲ್ಕಿ ಹೋಬಳಿ ಮಟ್ಟದ ಮತದಾರರು ಮೂಲ್ಕಿ ನಗರ ಪಂಚಾಯತ್ ನಲ್ಲಿ ಮತ ಚಲಾಯಿಸಿದರು. ಪದವೀಧರ ಕ್ಷೇತ್ರದಲ್ಲಿ ಶೇ.67 ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಶೇ. 79 ಮತದಾನ ನಡೆಯಿತು. ಮತದಾನ ಶಾಂತಿಯುತವಾಗಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆದಿದ್ದು ಪೊಲೀಸ್ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು
ಮತದಾರರ ಓಲೈಕೆ ಯತ್ನ
ಕಡಿಮೆ ಮತದಾರರಿದ್ದರು, ಈ ಎರಡೂ ಕೇಂದ್ರದಲ್ಲಿ ಮತದಾನ ಮಾಡಲು ಬರುವ ಮತದಾರರ ಓಲೈಕೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತೊಡಗಿದ್ದರೆ ಪಕ್ಷೇತರ ಅಭ್ಯರ್ಥಿ ಅಲೋಷಿಯಸ್ ಡಿ’ಸೋಜಾ ಪರವೂ ಮತ ಚಲಾಯಿಸುವಂತೆ ಓಲೈಕೆ ಮಾಡುವುದು ಕಂಡು ಬಂತು.
ಸರತಿ ಇಲ್ಲ
ಕೊಣಾಜೆ ವಿಶ್ವ ಮಂಗಳ ಮತ್ತು ಬಬ್ಬು ಕಟ್ಟೆ ಶಾಲೆ ಮತ ಕೇಂದ್ರಗಳಲ್ಲಿ ಬೆಳಗ್ಗಿನಿಂದಲೇ ನೀರಸ ಪ್ರತಿಕ್ರಿಯೆಯಿದ್ದು, ಯಾವುದೇ ಸರತಿ ಸಾಲಿಲ್ಲದೆ ಸಂಜೆವರೆಗೆ ಮತದಾರರು ನೇರ ಮತದಾನದ ಕೇಂದ್ರದೊಳಗೆ ಹೋಗಿ ತಮ್ಮ ಹಕ್ಕು ಚಲಾಯಿಸಿದರು. ಉಳ್ಳಾಲ, ಕೊಣಾಜೆ ಪೊಲೀಸರು ಭದ್ರತೆ ಏರ್ಪಡಿಸಿದ್ದರು.