Advertisement

ಪ್ರಧಾನಿ ಮೋದಿ ಸ್ವಾಗತಕ್ಕೆ ಕುಡ್ಲ ಸಜ್ಜು

01:33 AM Sep 02, 2022 | Team Udayavani |

ಮಂಗಳೂರು: ಗೋಲ್ಡ್‌ಫಿಂಚ್‌ ಮೈದಾನದಲ್ಲಿ ನಡೆಯುವ ಪ್ರಧಾನಿಯವರ ಸಮಾವೇಶಕ್ಕೆ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸುಮಾರು 1.5 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ.

Advertisement

ಒಂದುವೇಳೆ ಮಳೆ ಬಂದರೂ ಕಾರ್ಯಕ್ರಮಕ್ಕೆ ಅಡ್ಡಿಯಾಗಬಾರದೆಂದು ತಾತ್ಕಾ ಲಿಕ ಸಭಾಂಗಣಕ್ಕೆ ಶೀಟ್‌ ಅಳವಡಿಸಿ ಬೃಹತ್‌ ಚಪ್ಪರ ಹಾಕಲಾಗಿದೆ. ಮಳೆ ನೀರು ಸಭಾಂಗಣದೊಳಗೆ ನುಗ್ಗದೇ ಹರಿದು ಹೋಗಲು ತಾತ್ಕಾಲಿಕ ಚರಂಡಿ ನಿರ್ಮಿಸಲಾಗಿದೆ. ಕೆಸರಾಗದಂತೆಯೂ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಧಾನಿ ಯವರ ಭಾಷಣ ಆಲಿಸಲು ಅನುಕೂಲವಾಗುವಂತೆ 10ಕ್ಕೂ ಹೆಚ್ಚು ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಪಿಎಂ, ಸಿಎಂ ಭಾಷಣ:

ಸಮಾವೇಶದಲ್ಲಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡುವರು. ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ ಅವರು ಸ್ವಾಗತಿಸುವರು. ಶಿಷ್ಟಾಚಾರದಂತೆ ಪ್ರಧಾನಿಯವರು ಭಾಗವಹಿಸುವ ವೇದಿಕೆಯಲ್ಲಿ 10 ಮಂದಿಗೆ ಮಾತ್ರ ಅವಕಾಶ. ರಾಜ್ಯಪಾಲರು, ಮೂವರು ಕೇಂದ್ರ ಸಚಿವರು, ಮುಖ್ಯಮಂತ್ರಿ, ಮೂವರು ರಾಜ್ಯ ಸಚಿವರು, ಸಂಸದರು ಇರುತ್ತಾರೆ. ಸರಕಾರಿ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರನ್ನು ವೇದಿಕೆಯಲ್ಲಿ ಅವಕಾಶ ಕಲ್ಪಿಸಲು ಪ್ರಧಾನಿಯವರ ಕಾರ್ಯಾಲಯದಿಂದ ಅನುಮೋದನೆ ಕೋರಲಾಗಿದೆ.

ಮೂರು ಸಾವಿರ ಪೊಲೀಸ್‌:

Advertisement

ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಧಾನಿಯವರಿಗೆ ಗರಿಷ್ಠ ಭದ್ರತೆ ಒದಗಿಸಲು ಹೊಸದಿಲ್ಲಿಯಿಂದ ಆಗಮಿಸಿರುವ ಎಸ್‌ ಪಿಜಿ ತಂಡ (ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌) ಮೈದಾನದಲ್ಲಿ ಬೀಡು ಬಿಟ್ಟಿದ್ದು ಭದ್ರತಾ ವ್ಯವಸ್ಥೆ ಕುರಿತು ನಿಗಾ ವಹಿಸಿದೆ.

ಕೆಎಸ್‌ಆರ್‌ಪಿ, ಎಎನ್‌ಎಫ್‌, ಸಿಎಆರ್‌, ಗಡಿಭದ್ರತಾ ಪಡೆ, ಡಿಎಆರ್‌, ಆರ್‌ಎಎಫ್‌, ಐಎಸ್‌ಜಿ, ಗರುಡ ಪಡೆ ಸೇರಿದಂತೆ ಮೂರು ಸಾವಿರ ಪೊಲೀಸ್‌ ಸಿಬಂದಿಯನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ. ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ) ಅಲೋಕ್‌ ಕುಮಾರ್‌ ಅವರು ಗುರುವಾರ ನಗರಕ್ಕೆ ಆಗಮಿಸಿದ್ದು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಮೈದಾನದ ಸುತ್ತ 1.ಕಿ.ಮೀ. ವ್ಯಾಪ್ತಿಯಲ್ಲಿ 13 ರಕ್ಷಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ.  ಫಲಾನುಭವಿಗಳನ್ನು ಕರೆತರಲು ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಸುಮಾರು 1,000 ಬಸ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಜತೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಆಗಮಿಸುವ ಸಾಧ್ಯತೆಯಿದ್ದು, ಅವರನ್ನು ಕರೆತರಲು 3,000 ಕ್ಕೂ ಹೆಚ್ಚು ಬಸ್‌ಗಳನ್ನು ಒದಗಿಸಲಾಗುತ್ತಿದೆ. ಇದರಿಂದಾಗಿ ಬಸ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು ಹಾಸನ, ಶಿರಸಿ, ಚಿಕ್ಕಮಗಳೂರು, ಶಿವಮೊಗ್ಗ ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಖಾಸಗಿ ಸಂಸ್ಥೆಗಳಿಂದ ಬಸ್‌ಗಳನ್ನು ತರಿಸಲಾಗುತ್ತಿದೆ. ಸಮಾವೇಶದಲ್ಲಿ ಭಾಗವಹಿಸುತ್ತಿರುವ ಪ್ರಮುಖರ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

ಗೃಹ ಸಚಿವರಿಂದ ಪರಿಶೀಲನೆ :

ಮಂಗಳೂರು: ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಗುರುವಾರ ನಗರಕ್ಕೆ ಆಗಮಿಸಿ ಭದ್ರತ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಸಮಾವೇಶ ನಡೆಯುವ ಕೂಳೂರಿನ ಗೋಲ್ಡ್‌ ಫಿಂಚ್‌ ಮೈದಾನಕ್ಕೆ ಆಗಮಿಸಿ  ಪೊಲೀಸ್‌ ಅಧಿಕಾರಿಗಳ ಜತೆ ಸಮಾ ಲೋಚಿ ಸಿದರು. ಸಿವಿಲ್‌ ಪೊಲೀಸರು, ಕೆಎಸ್‌ಆರ್‌ಪಿ, ಎಎನ್‌ಎಫ್‌, ಸಿಎಆರ್‌, ಗಡಿಭದ್ರತ ಪಡೆ, ಡಿಎಆರ್‌, ಆರ್‌ಎಎಫ್‌, ಐಎಸ್‌ಜಿ, ಗರುಡ ಪಡೆ ಸೇರಿದಂತೆ 3 ಸಾವಿರ ಮಂದಿಯಿಂದ ಭದ್ರತೆ ಕಲ್ಪಿಸಲಾಗಿದೆ. ಡಿಜಿಪಿ ಹಾಗೂ ಎಡಿಜಿಪಿ ಇರುತ್ತಾರೆ. 100 ಮಂದಿ ಅಧಿಕಾರಿಗಳು, 2 ಸಾವಿರ ಮಂದಿ ಸಿವಿಲ್‌ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸುದ್ದಿಗಾರರಿಗೆ ವಿವರಿಸಿದರು.

ಭದ್ರತೆ ಲೋಪ ಆಗದಂತೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ಸಂಸದ ನಳಿನ್‌ ಕುಮಾರ್‌ ಕಟೀಲು ವಿಶೇಷ ಆದ್ಯತೆಯೊಂದಿಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದರು.

ಸೆ.2 ರಂದು ಮಂಗಳೂರಿನಲ್ಲಿ 3,800 ಕೋಟಿ ರೂ.ಗಳ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಸೇರುವ ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಹೇಳಿದರು. ಸಂಸದ ನಳಿನ್‌ ಕುಮಾರ್‌ ಕಟೀಲು ಉಪಸ್ಥಿತರಿದ್ದರು.

 

ಮಂಗಳೂರು ಭೇಟಿ: ಟ್ವೀಟ್‌ :

“ಸೆಪ್ಟಂಬರ್‌ 2ರಂದು ಮಂಗಳೂರಿನ ಸಹೋದರರು ಮತ್ತು ಸಹೋದರಿಯರೊಂದಿಗೆ ಇರುವ ಸಂದರ್ಭವನ್ನು ಎದುರು ನೋಡುತ್ತಿರುವೆ. 3,800 ಕೋಟಿ ರೂ. ಮೌಲ್ಯದ ಪ್ರಮುಖ ಯೋಜನೆಗಳ ಉದ್ಘಾಟನೆ ಅಥವಾ ಶಿಲಾನ್ಯಾಸ ನೆರವೇರಿಸುವೆ. ಈ ಮುಖ್ಯವಾದ ಯೋಜನೆಗಳು ಯಾಂತ್ರೀಕರಣ ಮತ್ತು ಕೈಗಾರಿಕೀಕರಣಕ್ಕೆ ಸಂಬಂಧಿಸಿದವು’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರು ಭೇಟಿಯ ಬಗ್ಗೆ ಸೆ. 1ರಂದು ಟ್ವೀಟ್‌ ಮಾಡಿದ್ದಾರೆ.

ಐದನೇ ಬಾರಿ ಮೋದಿ ಜಿಲ್ಲೆಗೆ :

ಮಂಗಳೂರು: ನರೇಂದ್ರ ಮೋದಿಯವರು ಪ್ರಧಾನಿಯಾಗಿ 5ನೇ ಬಾರಿಗೆ ದ. ಕ. ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಆದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದೇ ಪ್ರಥಮ ಬಾರಿ.  ಈ ಹಿಂದೆ 2017ರ ಅ. 29ರಂದು ಉಜಿರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗವಹಿಸಿದ್ದರು. 2021ರ ಜ. 5ರಂದು ಮಂಗಳೂರಿನಲ್ಲಿ ನಿಗದಿಯಾಗಿದ್ದ ಕೊಚ್ಚಿನ್‌- ಮಂಗಳೂರು ಅನಿಲ ಕೊಳವೆ ಮಾರ್ಗ ಯೋಜನೆಯನ್ನು ಹೊಸದಿಲ್ಲಿಯಿಂದಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ್ದರು. 2016ರಲ್ಲಿ ಕೇರಳದ ಕೊಚ್ಚಿಗೆ ತೆರಳುವ ಮಧ್ಯೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿದ್ದರು. 2017ರ ಡಿ.18ರಂದು ಲಕ್ಷದ್ವೀಪಕ್ಕೆ ತೆರಳುವ ಹಾದಿಯಲ್ಲಿ ಮಂಗಳೂರಿನ ಸರ್ಕ್ನೂಟ್‌ ಹೌಸ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. 2018ರ ವಿಧಾನಸಭಾ ಚುನಾವಣೆ ಸಂದರ್ಭ ಪಕ್ಷದ ಪರವಾಗಿ ಪ್ರಚಾರಕ್ಕೆ ಆಗಮಿಸಿ ಮಂಗಳೂರಿಗೆ ಆಗಮಿಸಿ ನೆಹರೂ ಮೈದಾನದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದರು.

3,800 ಕೋ.ರೂ ಯೋಜನೆಗಳಿಗೆ ಚಾಲನೆ :

ಮಂಗಳೂರು: ರಾಜ್ಯದಲ್ಲೇ ಮೊದಲ ಸಮುದ್ರ ನೀರು ಸಂಸ್ಕರಣ ಸ್ಥಾವರ, ನವ ಮಂಗಳೂರು ಬಂದರಿನಲ್ಲಿ 14ನೇ ಜೆಟ್ಟಿಯ ಯಾಂತ್ರೀಕರಣ ಸೇರಿದಂತೆ ಹಲವು ಪ್ರಮುಖ ಯೋಜನೆ ಗಳ ಲೋಕಾರ್ಪಣೆ ಮತ್ತು ಇತರ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಸೇರಿ ದಂತೆ ಎಂಆರ್‌ಪಿಎಲ್‌ ಹಾಗೂ ನವಮಂಗಳೂರು ಬಂದರು ಪ್ರಾಧಿಕಾರ ವ್ಯಾಪ್ತಿಯ ಒಟ್ಟು ಸುಮಾರು 3,800 ಕೋ.ರೂ. ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.

ಲೋಕಾರ್ಪಣೆಗೊಳ್ಳಲಿರುವ ಯೋಜನೆ :

  • ಎನ್‌ಎಂಪಿಎಯಲ್ಲಿ ಕಂಟೈನರ್‌ಗಳು ಹಾಗೂ ಇತರ ಸರಕು ನಿರ್ವಹಣೆಗೆ ಬರ್ತ್‌ ಸಂಖ್ಯೆ 14ರ ಯಾಂತ್ರೀಕರಣ. 2,200 ಜನರಿಗೆ ಉದ್ಯೋಗ ದೊರೆಯಲಿದೆ. 281 ಕೋ.ರೂಗಳ ಯೋಜನೆ ಇದು. 6.02 ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯ ಹೊಂದಲಿದೆ.
  • ಎಂಆರ್‌ಪಿಎಲ್‌ನಲ್ಲಿ ಬಿಎಸ್‌ 6 ಉನ್ನತೀಕರಣ ಯೋಜನೆ. 1,829 ಕೋ.ರೂ ವೆಚ್ಚ. ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣ ಇದರ ಉದ್ದೇಶ.
  •  ಎಂಆರ್‌ಪಿಎಲ್‌ನ ಉಪ್ಪುನೀರಿನ ಸಂಸ್ಕ ರಣ ಘಟಕ ತಣ್ಣೀರುಬಾವಿಯಲ್ಲಿ 677ಕೋ.ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ. ಎಂಆರ್‌ಪಿಎಲ್‌ಗೆ ಪ್ರತಿದಿನ 30 ಎಂಎಲ್‌ಡಿ ನೀರು ದೊರೆಯಲಿದೆ. ಈ ಮೂಲಕ ಶುದ್ಧ ನೀರಿನ ಸಂರಕ್ಷಣೆ ಸಾಧ್ಯ.

ಶಿಲಾನ್ಯಾಸಗೊಳ್ಳಲಿರುವ ಯೋಜನೆ :

  • ಎನ್‌ಎಂಪಿಎಯಲ್ಲಿ ಶೇಖರಣ ಟ್ಯಾಂಕ್‌ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ. 100 ಕೋ.ರೂ ವೆಚ್ಚದ ಈ ಯೋಜನೆಯಿಂದ 700 ಜನರಿಗೆ ಉದ್ಯೋಗ ದೊರೆಯಲಿದೆ. ಖಾದ್ಯ ತೈಲದ ಆಮದು ವೆಚ್ಚ ಇಳಿಕೆಯಾಗಲಿದೆ.
  •  100 ಕೋ.ರೂ ವೆಚ್ಚದಲ್ಲಿ ಎನ್‌ಎಂಪಿಎ ಯಲ್ಲಿ ಬಿಟುಮೆನ್‌ ಶೇಖರಣ ಘಟಕ ನಿರ್ಮಾಣ. ಬಿಟುಮೆನ್‌ ಸಾಗಣೆಯಲ್ಲಿ ಸುಧಾ ರಣೆ ಆಗಿ ಒಟ್ಟು ದರದಲ್ಲಿ ಇಳಿಕೆ ಯಾಗಲಿದೆ. 275 ಮಂದಿಗೆ ಉದ್ಯೋಗಾವ ಕಾಶ ದೊರೆಯಲಿದೆ.
  • ಎನ್‌ಎಂಪಿಎಯಲ್ಲಿ 100 ಕೋ.ರೂ ವೆಚ್ಚದಲ್ಲಿ ಬಿಟುಮೆನ್‌, ಖಾದ್ಯ ತೈಲ ಶೇಖರಣ ಟ್ಯಾಂಕ್‌ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ. ದರ-ಸಾಮರ್ಥ್ಯ ಸುಧಾರಣೆ ಆಗಲಿದೆ. 275 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.
  • ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ 196.51 ಕೋ.ರೂ ವೆಚ್ಚದಲ್ಲಿ ಬಂದರು ಅಭಿವೃದ್ಧಿ. 8,500 ಜನರಿಗೆ ಉದ್ಯೋಗ ದೊರೆಯಲಿದೆ. ಕರಾವಳಿ ಮೀನುಗಾರಿಕಾ ಸಮುದಾಯದವರಿಗೆ 192 ಕೋ.ರೂ ವಾರ್ಷಿಕ ಆದಾಯ ನಿರೀಕ್ಷಿಸಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next