ಮಂಗಳೂರು: ನಗರದ ಮಂಗಳಾದೇವಿಯ ರಾಮಕೃಷ್ಣ ಮಠದ ಆವರಣದಲ್ಲಿ ಮಠದ ವತಿಯಿಂದ ಅಭಿವೃದ್ಧಿ ಪಡಿಸಲಾಗುತ್ತಿರುವ ಔಷಧೀಯ ಗುಣಗಳುಳ್ಳ 500 ಗಿಡಗಳ ಮಿಯಾವಕಿ ಮಾದರಿಯ “ವಿವೇಕಾನಂದ ವೃಕ್ಷಾಲಯ’ವನ್ನು ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸೀ ಗೌಡ ಅವರು ಶನಿವಾರ ಲೋಕಾರ್ಪಣೆ ಮಾಡಿದರು.
ಮಠದ ಆವರಣದಲ್ಲಿ ಈಗಾಗಲೇ ಪಶ್ಚಿಮ ಘಟ್ಟದ 500 ಗಿಡಗಳ ಒಂದು ಮಿಯಾವಕಿ ಅರ್ಬನ್ ಫಾರೆಸ್ಟ್ ಅನ್ನು ಬೆಳೆಸಲಾಗಿದ್ದು, ಇದೀಗ ವಿವೇಕಾನಂದ ವೃಕ್ಷಾಲಯವು ಎರಡನೆಯದಾಗಿದೆ.
ಗಿಡ ನೆಡುವುದೆಂದರೆ ನನಗೆ ಹಿಂದಿನಿಂದಲೂ ತುಂಬ ಖುಷಿಯ ಸಂಗತಿ. ನನ್ನಿಂದ ಸಾಧ್ಯವಾದಷ್ಟು ಎಲ್ಲ ಬಗೆಯ ಗಿಡಗಳನ್ನು ನೆಟ್ಟು ಪೋಷಿಸುತ್ತ ಬಂದಿದ್ದೇನೆ. ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಎಲ್ಲರಿಗೂ ಪ್ರಯೋಜನವಾಗುತ್ತದೆ ಎಂದು ತುಳಸೀ ಗೌಡ ಹೇಳಿದರು. ತುಳಸೀ ಗೌಡ ಅವರನ್ನು ಈ ಸಂದರ್ಭದಲ್ಲಿ ರಾಮಕೃಷ್ಣ ಮಠದ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.
50 ಕೆರೆ ಅಭಿವೃದ್ಧಿ
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ರವಿಶಂಕರ ಮಿಜಾರು ಮಾತನಾಡಿ, ತನ್ನ ಅಧಿಕಾರಾವಧಿ ಮುಗಿಯುವ ಮುಂದಿನ ಒಂದೂವರೆ ವರ್ಷದೊ ಳಗೆ 50 ಕೆರೆಗಳನ್ನು ಅಭಿವೃದ್ಧಿಗೊಳಿಸಿ ಲೋಕಾರ್ಪಣೆ ಮಾಡುವ ಉದ್ದೇಶ ಇದೆ. ಈಗಾಗಲೇ 20 ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳ ಲಾಗಿದೆ ಎಂದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ, ಪ್ರಗತಿಪರ ಕೃಷಿಕ ವಸಂತ ಕಜೆ, ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರು ಉಪಸ್ಥಿತರಿದ್ದರು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರು ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ಏಕಗಮ್ಯಾನಂದಜಿ ಸ್ವಾಗತಿಸಿದರು. ಸ್ಮಿತಾ ಶೆಣೈ ಅವರು ಕಾರ್ಯಕ್ರಮ ನಿರ್ವಹಿಸಿದರು.