Advertisement

ಮಂಗಳೂರು ನಗರ: ಮಳೆ ಬರುವವರೆಗೂ ನೀರು ರೇಶನಿಂಗ್‌

09:47 AM Mar 31, 2017 | Team Udayavani |

ಮಂಗಳೂರು: ನಗರದ ನೀರಿನ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ಈಗಾಗಲೇ ಆರಂಭಿಸಲಾಗಿರುವ ನೀರಿನ ಪೂರೈಕೆಯ ರೇಶನಿಂಗ್‌ ವ್ಯವಸ್ಥೆ ಮಳೆ ಬರುವವರೆಗೂ ಮುಂದುವರಿಯಲಿದೆ. ಉತ್ತಮ ಮಳೆಯಾದ ಬಳಿಕ ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಮೇಯರ್‌ ಕವಿತಾ ಸನಿಲ್‌ ತಿಳಿಸಿದರು. 

Advertisement

ಗುರುವಾರ ನಡೆದ ಮಂಗಳೂರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸದಸ್ಯ ಪುರುಷೋತ್ತಮ ಚಿತ್ರಾಪುರ ಅವರು ವಿಷಯ ಪ್ರಸ್ತಾವಿಸುತ್ತಾ, ಸದ್ಯ ತುಂಬೆ ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹ ಹಾಗೂ ನೀರಿನ ಬೇಡಿಕೆ ಕುರಿತಂತೆ ಮಾಹಿತಿ ಒದಗಿಸಬೇಕೆಂದು ಆಗ್ರಹಿಸಿದರು. ಉತ್ತರಿಸಿದ ಮೇಯರ್‌, ಇಂದು ತುಂಬೆ ಅಣೆಕಟ್ಟಿನಲ್ಲಿ 4.72 ಮೀಟರ್‌ ನೀರು ಸಂಗ್ರಹವಿದೆ. ಶಂಭೂರಿನ ಎಎಂಆರ್‌ ಅಣೆಕಟ್ಟಿನಲ್ಲಿ ಸಮುದ್ರ ಮಟ್ಟದಿಂದ 18 ಮೀಟರ್‌ರವರೆಗೆ ನೀರಿದೆ. ಕಳೆದ ಸೋಮವಾರದಿಂದ ಮೂರು ದಿನ ನೀರು ಪೂರೈಕೆ ಹಾಗೂ ಎರಡು ದಿನ ಕಡಿತ ವ್ಯವಸ್ಥೆಯಡಿ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು. 

ತೆರೆದ ಬಾವಿ/ಕೊಳವೆ ಬಾವಿ ಸುಸ್ಥಿತಿಯಲ್ಲಿಡಲು ಮನವಿ
ಮನಪಾ ಆಯುಕ್ತ ಮುಹಮ್ಮದ್‌ ನಝೀರ್‌ ಮಾತನಾಡಿ, ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಈಗಾಗಲೇ ದಿಶಾ ಡ್ಯಾಂನಿಂದಲೂ ತುಂಬೆ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ. ಪ್ರಸ್ತುತ ಎಎಂಆರ್‌ ಅಣೆಕಟ್ಟಿನಿಂದ ಎಂಆರ್‌ಪಿಎಲ್‌ ಹಾಗೂ ಎಸ್‌ಇಝೆಡ್‌ನವರು ನೀರು ತೆಗೆಯುತ್ತಿದ್ದರೂ ಡ್ಯಾಂನಲ್ಲಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಶಾಸಕರು, ಮೇಯರ್‌ ಸಮಕ್ಷಮದಲ್ಲಿ ಸಭೆ ನಡೆಸಿ, ನಗರದಲ್ಲಿ ಲಭ್ಯವಿರುವ ಕೊಳವೆ ಬಾವಿ, ತೆರೆದ ಬಾವಿಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತೆರೆದ ಬಾವಿಗಳನ್ನು ಆಳ ಮಾಡುವುದು, ಪಂಪ್‌ ಅಳವಡಿಕೆ ಸಂಬಂಧಿಸಿಯೂ ಮನವಿ ಬಂದಲ್ಲಿ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿ ಪಾಲಿಕೆಯಲ್ಲಿ ಹಣದ ಕೊರತೆ ಇಲ್ಲ ಎಂದು ಮುಹಧಿಮ್ಮದ್‌ ನಝೀರ್‌ ಹೇಳಿದರು. 

ಸಭಾತ್ಯಾಗ- ಸಭೆ ಮುಂದುವರಿಕೆ
ಇದಕ್ಕೂ ಮುನ್ನ ಸಭೆ ಆರಂಭವಾಗುತ್ತಿದ್ದಂತೆ, “ಮೇಯರ್‌ ಅವರು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿ, ಆರೋಗ್ಯ ಸ್ಥಾಯೀ ಸಮಿತಿ ನೂತನ ಅಧ್ಯಕ್ಷೆ ನಾಗವೇಣಿ ಅವರು ಧರಣಿ ನಡೆಸಿ ಬಳಿಕ ಇತರ ಸದಸ್ಯರ ಜತೆಗೆ ಸಭಾತ್ಯಾಗ ಮಾಡಿದ ಘಟನೆ ಸಂಭವಿಸಿತು. ಉಪ ಮೇಯರ್‌, ವಿಪಕ್ಷ ಹಾಗೂ ಆಡಳಿತ ಪಕ್ಷದ ಕೆಲವು ಸದಸ್ಯರು ಸಭಾತ್ಯಾಗ ನಡೆಸಿದ ಬಳಿಕವೂ ಕೋರಂ ಪ್ರಕಾರ ಸಭೆ ಮುಂದುವರಿಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next