ಮಂಗಳೂರು ಸೇರಿದಂತೆ ಕರಾವಳಿಯ ರೈಲು ಜಾಲವು ನೈಋತ್ಯ ರೈಲ್ವೇಗೆ ಸೇರ್ಪಡೆಗೊಳ್ಳುವುದರಿಂದ ಆಗುವ ಪ್ರಯೋಜನಗಳಲ್ಲಿ ಸರಕು ಸಾಗಣೆ, ಆ ಮೂಲದಿಂದ ಆದಾಯ ಗಳಿಕೆ, ಇದರಿಂದಾಗಿ ಸ್ಥಳೀಯರಿಗೆ ದೊರೆಯುವ ಔದ್ಯೋಗಿಕ – ಔದ್ಯಮಿಕ ಪ್ರಯೋಜನಗಳದ್ದು ಮತ್ತೂಂದು ಆಯಾಮ. ಅಷ್ಟೇ ಅಲ್ಲ , ಆಗ ಸರಕು ಜಾಲಕ್ಕೆ ನವಮಂಗಳೂರು ಬಂದರು ಪ್ರವೇಶ ದ್ವಾರ ಎನ್ನಿಸಿಕೊಳ್ಳುತ್ತದೆ.
ಮಂಗಳೂರು: ಮಂಗಳೂರು ಭಾಗವು ನೈಋತ್ಯ ಲಯಕ್ಕೆ ಸೇರುವುದರಿಂದ ಏನೇನು ಲಾಭ ಎಂಬುದನ್ನು ಈಗಾಗಲೇ ಹೇಳಲಾಗಿದೆ. ಬಹಳ ಮುಖ್ಯವಾಗಿ ಮಂಗಳೂರು ಭಾಗದ ರೈಲ್ವೇಗೆ ಒಂದು ಅಸ್ತಿತ್ವ ಬರಬಹುದು. ಅದಲ್ಲದೆ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಯೋಜನಗಳು ಹಲವು. ಇದರ ಪಟ್ಟಿಗೆ ಮತ್ತೂಂದು ಸೇರ್ಪಡೆ ಎಂದರೆ, ಈ ಆಲೋಚನೆಯು ನವಮಂಗಳೂರು ಬಂದರು (ಎನ್‌ಎಂಪಿಟಿ) ಜತೆಗೆ ಸಂಪರ್ಕ ಜಾಲ ವೃದ್ಧಿಸುವುದಕ್ಕೂ ಪೂರಕ.
ಹಾಗೆ ಹೇಳುವುದಾದರೆ ಭೂ, ವಾಯು ಮತ್ತು ಜಲ- ಈ ಮೂರೂ ಸಾರಿಗೆ ಸಂಪರ್ಕಕ್ಕೆ ತೆರೆದುಕೊಂಡಿರುವ ರಾಜ್ಯದ ಏಕೈಕ ನಗರ ಮಂಗಳೂರು. ವಾಣಿಜ್ಯ ದೃಷ್ಟಿಯಲ್ಲಿ ಇದು ವರವಾಗಿ ಪರಿಣಮಿಸ ಬೇಕು. ಅದಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು, ಶಿವಮೊಗ್ಗದ ಸಂಸದರು, ಜನ ಪ್ರತಿನಿಧಿಗಳು ಒಟ್ಟಾಗಿ ದನಿಗೂಡಿಸಿ ಕರಾವಳಿ ಭಾಗದಲ್ಲಿ ರೈಲು ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಿದರೆ, ಇದರ ಪ್ರಯೋಜನವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ಐದೂ ಜಿಲ್ಲೆಗಳ ಮಂದಿ ಪಡೆಯಬಹುದಾಗಿದೆ.
ಮಂಗಳೂರು ಸರ್ವಋತು ಬಂದರು, ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಸಂಚಾರ, ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ನಗರ. ಸದ್ಯದ ಪರಿಸ್ಥಿತಿಯಲ್ಲಿ ಮಂಗಳೂರು ರೈಲ್ವೇ ವ್ಯಾಪ್ತಿಯು ಚೆನ್ನೈಯಲ್ಲಿ ಕೇಂದ್ರ ಕಚೇರಿ ಹೊಂದಿರುವ ದಕ್ಷಿಣ ರೈಲ್ವೇ ವಲಯಕ್ಕೆ ಒಳಪಟ್ಟಿದೆ. ನವಮಂಗಳೂರು ಬಂದರಿನಿಂದ ಸರಕು ಸಾಗಾಟಕ್ಕೆ ಉತ್ತೇಜನ ಮತ್ತು ಅದಕ್ಕೆ ಪೂರಕವೆನಿಸುವ ಆಡಳಿ ತಾತ್ಮಕ ತೀರ್ಮಾನಗಳನ್ನು ಇದೇ ವಲಯ ಅಥವಾ ಪಾಲ್ಗಾಟ್‌ನಲ್ಲಿರುವ ರೈಲ್ವೇ ವಿಭಾಗ ಕೈಗೊಳ್ಳುತ್ತಿದೆ. ಇದರಲ್ಲಿ ಸ್ಥಳೀಯ ಲೆಕ್ಕಾಚಾರಗಳು, ಹಿತಾ ಸಕ್ತಿಗಳು ಪರಿಗಣನೆಗೆ ಬರುವುದು ತೀರಾ ಕಡಿಮೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಬಹುಪಾಲು ರೈಲ್ವೇ ಜಾಲವನ್ನು ಹೊಂದಿರುವ ನೈಋತ್ಯ ವಲಯಕ್ಕೆ ಮಂಗಳೂರು ವ್ಯಾಪ್ತಿ ಒಳಪಟ್ಟರೆ ಆಗುವ ಲಾಭವೆಂದರೆ, ಮಂಗಳೂರು ಮೂಲಕ ಬೆಂಗ ಳೂರು ಮತ್ತಿತರ ಭಾಗಗಳೊಂದಿಗೆ ಸರಕು ಸಾಗಾಟ ಜಾಲವನ್ನು ವಿಸ್ತರಿಸಬಹುದು. ಜತೆಗೆ ನೈಋತ್ಯ ರೈಲ್ವೇ ವಲಯಕ್ಕೆ ಬಂದರಿನ ನೇರ ಸಂಪರ್ಕ ಜಾಲ ದೊರಕುತ್ತದೆ. ಅದು ನವಮಂಗಳೂರು ಬಂದರಿನ ಅಭಿವೃದ್ಧಿಗೂ ಪೂರಕ. ಸ್ಥಳೀಯ ಆರ್ಥಿಕತೆ ಬೆಳೆಯಲೂ ಕಾರಣವಾಗಬಲ್ಲುದು. ಪ್ರಸ್ತುತ ಈ ಮಾರ್ಗ ದಲ್ಲಿ ಸರಕು ಸಾಗಾಟ ವೆಚ್ಚ ಹೆಚ್ಚಿದೆ ಎಂಬ ದೂರುಗಳಿವೆ. ಅದಕ್ಕೂ ಪರಿಹಾರ ಸಿಗಬಹುದು.
ಪ್ರಸ್ತುತ ನವಮಂಗಳೂರು ಬಂದರು ಮೂಲಕ ಬರುವ ಸರಕುಗಳು, ಇಂಧನ ಮತ್ತು ಖಾದ್ಯ ತೈಲ ಎಲ್ಲವನ್ನೂ ದಕ್ಷಿಣ ರೈಲ್ವೇ ಮತ್ತು ಕೊಂಕಣ ರೈಲ್ವೇ ಮೂಲಕ ಸಾಗಿಸಲಾಗುತ್ತಿದೆ. ಆದಾಯವೆಲ್ಲ ದಕ್ಷಿಣ ರೈಲ್ವೇಯ ಬೊಕ್ಕಸಕ್ಕೆ ಹೋಗುತ್ತಿದ್ದರೂ ಹೆಚ್ಚುವರಿ ಸೌಲಭ್ಯ ಕೊಡುವತ್ತ ಆಸಕ್ತಿ ತೋರುತ್ತಿಲ್ಲ. ಪಾಲ್ಗಾಟ್ ವಿಭಾಗವೂ ಈ ಬಗ್ಗೆ ಯೋಚಿಸುತ್ತಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ನೈಋತ್ಯ ರೈಲ್ವೇ ವಲಯದ ಕೇಂದ್ರ ಕಚೇರಿ ಕರ್ನಾಟಕದ ಹುಬ್ಬಳ್ಳಿಯಲ್ಲೇ ಇದೆ. ದಕ್ಷಿಣ ರೈಲ್ವೇಯ ಕಚೇರಿ ದೂರದ ಚೆನ್ನೈಯಲ್ಲಿದೆ. ಪ್ರಸ್ತುತ ನವಮಂಗಳೂರು ಬಂದರು ಪ್ರದೇಶದಲ್ಲಿ ಯಾವುದೇ ಕೆಲಸವಾಗಬೇಕಾದರೂ ಚೆನ್ನೈಯನ್ನು ಸಂಪರ್ಕಿಸಬೇಕು.
ಸರಕು ವಹಿವಾಟಿನಿಂದ ಆದಾಯ
ನವಮಂಗಳೂರು ಬಂದರಿನ ಸರಕು ವಹಿವಾಟು ರೈಲ್ವೇ ಪಾಲಿಗೆ ಗಣನೀಯ ಆದಾಯ ತರುವ ಒಂದು ಮೂಲ. ಕಂಟೈನರ್ ಸಾಗಾಟಕ್ಕೆ ವಿಪುಲ ಅವಕಾಶವಿರುವ ತಾಣ. ಮುಖ್ಯವಾಗಿ ಇಲ್ಲಿಂದ ಕಲ್ಲಿದ್ದಲು, ರಸಗೊಬ್ಬರ, ಸಿಮೆಂಟ್ ಮುಂತಾದ ಉತ್ಪನ್ನಗಳು ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಸಾಗಾಟವಾಗುತ್ತಿವೆ. ಮಾಸಿಕವಾಗಿ ದಕ್ಷಿಣ ರೈಲ್ವೇಗೆ ಸುಮಾರು 60 ರೇಕ್‌ಗಳಷ್ಟು ರಸಗೊಬ್ಬರ ಮತ್ತು 10 ರೇಕ್‌ಗಳಷ್ಟು ಕಲ್ಲಿದ್ದಲು ಲೋಡ್ ಆಗುತ್ತದೆ. ಇತ್ತೀಚೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಖಾದ್ಯ ತೈಲವನ್ನು ದೇಶದ ಪೂರ್ವ ಮತ್ತು ಉತ್ತರ ಭಾಗದ ಪ್ರದೇಶಗಳಿಗೆ ರೈಲು ಮೂಲಕ ಸಾಗಾಟ ನಡೆಸಿದ್ದು ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಇದು ಈ ಹಿಂದೆ ರಸ್ತೆ ಮೂಲಕ ಸಾಗಾಟವಾಗುತ್ತಿತ್ತು.