ಉಳ್ಳಾಲ: ತೊಕ್ಕೊಟ್ಟಿನಿಂದ ದೇರಳಕಟ್ಟೆ ಸಂಪರ್ಕಿಸುವ ಮಾಣಿ- ಉಳ್ಳಾಲ ರಸ್ತೆಯ ಪಂಡಿತ್ ಹೌಸ್ ಜಂಕ್ಷನ್‌ನಲ್ಲಿ ಮಳೆಯಿಂದ ಹೊಂಡ ರಚನೆಯಾಗಿ ದ್ವಿಚಕ್ರ ಸಹಿತ ಇತರ ವಾಹನ ಸಂಚಾರಕ್ಕೆ ಅಡೆತಡೆಯಾಗಿದ್ದು, ಲೋಕೋಪಯೋಗಿ ಇಲಾಖೆ ಮತ್ತು ಸಂಬಂಧಿತ ಗುತ್ತಿಗೆದಾರರ ನಿರ್ಲಕ್ಷ್ಯವನ್ನು ವಿರೋಧಿಸಿ ಪಂಡಿತ್‌ಹೌಸ್‌ನ ವಿಜಯ ಗೇಮ್ಸ್ ಟೀಂ ತಂಡದ ನೇತೃತ್ವದಲ್ಲಿ ಸ್ಥಳೀಯರು ರಸ್ತೆ ಹೊಂಡದ ನೀರಿನಲ್ಲಿ ಕಾಗದದ ದೋಣಿ ಬಿಡುವ ಮೂಲಕ ಪ್ರತಿಭಟನೆ ನಡೆಸಿದರು.
ನೂತನ ಡಾಮರೀಕರಣವಾಗಿ ವರ್ಷ ಕಳೆದಿದ್ದು ಮಳೆ ಆರಂಭವಾಗುವ ಮುನ್ನವೇ ರಸ್ತೆ ಡಾಮರು ಕಿತ್ತುಹೋಗಿತ್ತು. ಮಳೆ ನಂತರ ಹೊಂಡ ದೊಡ್ಡದಾಗುತ್ತಲೇ ಈಗ ಈಜುಕೊಳದಂತೆ ಆಗಿದೆ. ದಿನನಿತ್ಯ ಸಾವಿರಾರು ವಾಹನಗಳು ತೆರಳುವ ರಸ್ತೆಯಲ್ಲಿ ಹೊಂಡದಿಂದಾಗಿ ಹಲವು ಅಪಘಾತಗಳು ಸಂಭವಿಸುತ್ತಲೇ ಇದೆ. ರಾತ್ರಿ ಹೊತ್ತಿನಲ್ಲಿ ಅನೇಕ ದ್ವಿಚಕ್ರ ವಾಹನಗಳು ಹೊಂಡದೊಳಕ್ಕೆ ಬಿದ್ದು ರಸ್ತೆಗೆ ಅಡ್ಡವಾಗಿ ಬೀಳುತ್ತಿದೆ. ನಿರಂತರ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ರಸ್ತೆ ದುರಸ್ತಿ ನಿರ್ವಹಿಸಬೇಕಾದ ಗುತ್ತಿಗೆದಾರರು ಮೌನ ಧೋರಣೆಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ ಪೇಪರ್ ದೋಣಿಯನ್ನು ಬಿಡುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ತಂಡದ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ತಂಡದಿಂದ ಹೊಂಡವನ್ನು ಕಲ್ಲು, ಮಣ್ಣು, ಜಲ್ಲಿಕಲ್ಲಿನ ಮೂಲಕ ಮುಚ್ಚುವ ಪ್ರಯತ್ನ ಹಲವು ಬಾರಿ ನಡೆದಿತ್ತು. ಆದರೆ ಯಾವುದೇ ಪ್ರಯೋ ಜನವಿಲ್ಲ . ಮತ್ತೆ ನೀರು ಇಕ್ಕಟ್ಟಾಗಿ ಪುನಃ ಹೊಂಡ ನಿರ್ಮಾಣವಾಗುತ್ತಿದೆ. ಸಮೀ ಪದಲ್ಲೇ ಕಾಂಕ್ರೀಟಿಕರಣಗೊಳಿಸಿದ ಒಳ ಚರಂಡಿಯನ್ನು ನಿರ್ಮಿ ಸಲಾಗಿದೆ. ಅದು ಮಣ್ಣಿನಿಂದ ಮುಚ್ಚಿಹೋಗಿರುವುದರಿಂದ ರಸ್ತೆಯಲ್ಲೇ ನೀರು ಹರಿದು, ನಿಂತು ಹೊಂಡ ನಿರ್ಮಾಣವಾಗುತ್ತಿದೆ. ಈ ಕುರಿತು ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು ವಿಜಯ ಗೇಮ್ಸ್ ಟೀಮ್ ನೇತೃತ್ವದಲ್ಲಿ ಉಳ್ಳಾಲ ನಗರಸಭೆ ಪೌರಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಆದರೆ ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಈಗ ನಡೆಸಿದ ಪ್ರತಿಭಟನೆ ಸಾಂಕೇತಿಕವಾಗಿದೆ. ಮುಂದೆ ಹೊಂಡವನ್ನು ಮುಚ್ಚದೇ ಇದ್ದಲ್ಲಿ ಉಗ್ರ ರೀತಿಯಾಗಿ ಹೋರಾಡುವುದು ಅನಿವಾರ್ಯ ಎಂದರು.
ರಾಜ್‌ಗೋಪಾಲ್ ಪಂಡಿತ್‌ಹೌಸ್, ರಾಘವೇಂದ್ರ, ಮಿತೇಶ್, ಜಿತೇಶ್, ಧನರಾಜ್, ಮನೋಹರ್, ನಿತೇಶ್, ಭರತ್, ಗಣೇಶ್, ಅಕ್ಷಯ್, ರಾಜೇಶ್, ಹಿರಿಯರಾದ ರಾಘವ ಪೂಜಾರಿ ಉಪಸ್ಥಿತರಿದ್ದರು.