Advertisement

ಮಂಗಳೂರು: ನಾಲ್ವರ ಹಂತಕ ಪ್ರವೀಣ್‌ ಬಿಡುಗಡೆಗೆ ಸಿದ್ಧತೆ; ಸಂತ್ರಸ್ತರ ಸಂಬಂಧಿಕರಿಂದ ಆಕ್ಷೇಪ

11:23 PM Aug 04, 2022 | Team Udayavani |

ಮಂಗಳೂರು: ಸೋದರತ್ತೆ ಸಹಿತ ಅವರ ಕುಟುಂಬದ ನಾಲ್ವರನ್ನು  1994ರಲ್ಲಿ ವಾಮಂಜೂರಿನಲ್ಲಿ   ಹತ್ಯೆ ಮಾಡಿದ್ದ  ಪ್ರವೀಣ್‌ ಕುಮಾರ್‌ನನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸರಕಾರ ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಸಂತ್ರಸ್ತರ  ಕುಟುಂಬದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಈತನನ್ನು ಬಿಡುಗಡೆ ಮಾಡುವ ಕುರಿತು ಬಂಧುಗಳ ಅಭಿಪ್ರಾಯ ಪಡೆಯಲು   ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ  ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರವೀಣ್‌ನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದೆಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು  ಸಂತ್ರಸ್ತರ ಕುಟುಂಬದವರು ನಿರ್ಧರಿಸಿದ್ದಾರೆ.

ಪ್ರಕರಣದ ವಿವರ :

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ಪ್ರವೀಣ್‌ ಕುಮಾರ್‌ 1994ರ ಫೆ.23ರ ಮಧ್ಯರಾತ್ರಿ ವಾಮಂಜೂರಿನಲ್ಲಿದ್ದ ತನ್ನ ಅತ್ತೆ (ತಂದೆಯ ತಂಗಿ) ಅಪ್ಪಿ ಶೇರಿಗಾರ್ತಿ, ಅವರ ಪುತ್ರ  ಗೋವಿಂದ, ಪುತ್ರಿ  ಶಕುಂತಳಾ ಹಾಗೂ ಶಕುಂತಾಳರ ಪುತ್ರಿ ದೀಪಿಕಾಳನ್ನು  ಕೊಲೆ ಮಾಡಿದ್ದ. ಈ ಪ್ರಕರಣ  ದೇಶದಲ್ಲೇ ದೊಡ್ಡ ಸಂಚಲನ ಮೂಡಿಸಿತ್ತು.  ಕೆಳ ಹಂತದ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್‌ನಲ್ಲೂ ಪ್ರವೀಣ್‌ ಮೇಲಿನ ಆರೋಪ  ಸಾಬೀತಾಗಿತ್ತು. 2003ರಲ್ಲಿ ಸುಪ್ರೀಂ ಕೋರ್ಟ್‌ ಈತನಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು.  ಇದನ್ನು ಪ್ರಶಿಸಿದ್ದ ಪ್ರವೀಣ್‌ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗೆ ಮನವಿ ಮಾಡಿದ್ದು, ಅದು  10 ವರ್ಷಗಳ ಕಾಲ  ವಿಲೇವಾರಿಯಾಗದೆ ಬಾಕಿ ಉಳಿದಿತ್ತು.

Advertisement

ಈ ನಡುವೆ ಮಾಜಿ ಪ್ರಧಾನಿ ದಿ| ರಾಜೀವ್‌ ಗಾಂಧಿಯನ್ನು ಕೊಂದಿದ್ದ  ಮೂವರ ಗಲ್ಲು ಶಿಕ್ಷೆ ರದ್ದು ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿತ್ತು. ಇದನ್ನೇ ಆಧಾರವಾಗಿಟ್ಟು ಪ್ರವೀಣ್‌  ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದ.  ಸುಪ್ರೀಂಕೋರ್ಟ್‌ ಗಲ್ಲು ಶಿಕ್ಷೆಯನ್ನು  ಜೀವಾವಧಿಗೆ ಪರಿವರ್ತಿಸಿತ್ತು.

ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿ ನಲ್ಲಿರುವ ಪ್ರವೀಣ್‌ನನ್ನು ಸನ್ನಡತೆ ಕಾರಣ  ಬಿಡುಗಡೆ ಮಾಡುವ ಕುರಿತು ಅಭಿಪ್ರಾಯ ವರದಿಯನ್ನು ಸಂಗ್ರಹಿಸಲು ಜಿಲ್ಲಾ ಎಸ್ಪಿ ಕಚೇರಿಗೆ ಜು.23ರಂದು ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯಿಂದ ಆದೇಶ ಮಾಡಲಾಗಿದೆ. ಇದಕ್ಕೆ ಸಂತ್ರಸ್ತ ಕುಟುಂಬದವರ ಪರವಾಗಿ ಗುರುಪುರದ ಸೀತಾರಾಮ ಅವರು ಆತಂಕ ಹಾಗೂ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಹಣದ ಆಸೆಗಾಗಿ ಬಾಲಕಿ ಸಹಿತ ನಾಲ್ವರನ್ನು ಅಮಾನುಷವಾಗಿ ಕೊಲೆಗೈದಿರುವ ಆತ ಜೈಲಿನಿಂದ ಹೊರ ಬಂದರೆ ಸಮಾಜಕ್ಕೆ ಅಪಾಯವಿದೆ. ಸ್ವತಃ ಆತನ ಕುಟುಂಬದವರಿಗೂ  ಅವನು ಬಂಧಮುಕ್ತನಾಗುವುದರ ಬಗ್ಗೆ ಆತಂಕವಿದೆ. ಆತನನ್ನು ಬಿಡುಗಡೆ ಮಾಡಬಾರದು. ಇಂಥ ವ್ಯಕ್ತಿಯನ್ನು ಬಿಡುಗಡೆ ಮಾಡುವುದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಅವಮಾನ ಎಂದವರು ತಿಳಿಸಿದ್ದಾರೆ.

ಅಪರಾಧಿಯ ಬಿಡುಗಡೆ ಕುರಿತು ನಮಗೆ ಪತ್ರ ಬಂದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ. ಹೃಷಿಕೇಶ್‌ ಸೊನಾವಣೆ,  ದ.ಕ. ಎಸ್ಪಿ

 

Advertisement

Udayavani is now on Telegram. Click here to join our channel and stay updated with the latest news.

Next