Advertisement
ನಿಸರ್ಗಧಾಮದ ಒಂದು ಭಾಗದ ಸುಮಾರು 100ಕ್ಕೂ ಹೆಚ್ಚು ಎಕ್ರೆ ಜಾಗದಲ್ಲಿ ವನ ಸಂಪತ್ತು ಬೆಳೆಸಲಾಗುತ್ತಿದೆ. ಆ ಮೂಲಕ ಪಿಲಿಕುಳ ನಿಸರ್ಗಧಾಮವು ಭವಿಷ್ಯದಲ್ಲಿ ಅಮೂಲ್ಯವಾದ ನೈಸರ್ಗಿಕ ಸಂಪತ್ತು ಸೃಷ್ಟಿಸುವುದಕ್ಕೆ ಆದ್ಯತೆ ನೀಡುತ್ತಿದೆ.
ಗ್ರೀನ್‌ಬೆಲ್ಟ್ ಡೆವಲಪ್‌ಮೆಂಟ್ ಹೆಸರಿನಲ್ಲಿ ಪಿಲಿಕುಳ ನಿಸರ್ಗಧಾಮದ ಸುತ್ತಲಿನ ಪರಿಸರ ಹಸುರೀಕರಣ ವಾಗುತ್ತಿದ್ದು, ಈ ಯೋಜನೆಗೆ ಎಂಆರ್‌ಪಿಎಲ್ ಕೂಡ ಕೈಜೋಡಿಸುತ್ತಿದೆ. ಮೊದಲನೇ ಹಂತದ ಕೆಲಸ 2017ರಲ್ಲಿ ಪ್ರಾರಂಭಗೊಂಡಿದ್ದು, 20 ಎಕ್ರೆ ಪ್ರದೇಶದಲ್ಲಿ 5 ಸಾವಿರ ಸಸಿಗಳನ್ನು ನೆಡಲಾಗಿತ್ತು. ಇದಕ್ಕೆಂದು 29,97,473 ರೂ. ವ್ಯಯಿಸಲಾಗಿದೆ. ಅದೇ ರೀತಿ 2018ರ ಎರಡನೇ ಹಂತದ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, 30 ಎಕ್ರೆ ಪ್ರದೇಶದಲ್ಲಿ 3ಸಾವಿರ ಸಸಿಗಳನ್ನು ನೆಡಲಾಗಿದೆ. ಇದಕ್ಕಾಗಿ 39,85,000 ರೂ. ವ್ಯಯಿಸಲಾಗಿದೆ. ಪಿಲಿಕುಳ ನಿಸರ್ಗಧಾಮವನ್ನು ಹಸುರೀಕರಣಗೊಳಿಸುವ ಪ್ರಕ್ರಿಯೆಯ ಎರಡನೇ ಹಂತವೂ ಪೂರ್ಣಗೊಂಡಿದ್ದು, ಒಟ್ಟಾರೆ 50 ಎಕ್ರೆ ಪ್ರದೇಶದಲ್ಲಿ 7 ಸಾವಿರ ಸಸಿಗಳನ್ನು ನೆಡ ಲಾಗಿದೆ. ಕೆಲವೇ ತಿಂಗಳಲ್ಲಿ ಮೂರನೇ ಹಂತದ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಉದ್ಯಾನವನದಲ್ಲಿ ಹಲಸು, ಮಾವು, ತೇಗ, ಬೀಟೆ, ಗಂಧದ ಸಸಿಗಳನ್ನು ನೆಡುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿಟ್ಟೆಗಳ ಸಂತತಿ ಕಡಿಮೆಯಾಗುತ್ತಿದ್ದು, ಚಿಟ್ಟೆಗಳ ಸಂತಾನೋತ್ಪತ್ತಿ ಹೆಚ್ಚಿಸಲು ಮತ್ತು ಚಿಟ್ಟೆಗಳ ಆಕರ್ಷಣೆಗೆ, ಆಹಾರಕ್ಕೆಂದು ಸ್ಥಳೀಯ ಸಸಿಗಳು, ಬೆತ್ತದ ಸಸಿಗಳನ್ನು ನೆಡಲಾಗಿದೆ. ಇದಲ್ಲದೆ ಮರಗಳ ಇಕ್ಕೆಲಗಳಲ್ಲಿ ಕಬ್ಬು, ಬಾಳೆ, ಗೆಣಸು, ಅನಾನಸು, ತೊಂಡೆ, ಸಹಿತ ತರಕಾರಿ ಗಿಡಗಳನ್ನು ಬೆಳೆಸಲಾಗಿದೆ. ನೀರಾವರಿಗೆಂದು ಸ್ಪಿಂಕ್ಲರ್ ವ್ಯವಸ್ಥೆ ಮತ್ತು ರೇಜನ್ ಸ್ಪಿಂಕ್ಲರ್ ವ್ಯವಸ್ಥೆ ಅಳವಡಿಸಲಾಗಿದೆ. ಈಗಾಗಲೇ ಪಿಲಿಕುಳದಲ್ಲಿನ ಕೆರೆಗಳು ಅಭಿವೃದ್ಧಿಯಾಗಿದ್ದು, ತಾವರೆ, ನೈದಿಲೆಗಳು ನಳನಳಿಸುತ್ತಿದೆ. ಗಿಡಗಳನ್ನು ನೆಟ್ಟ ಬಳಿಕ ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಎಂಆರ್‌ಪಿಎಲ್ ಸಂಸ್ಥೆ ನಡೆಸುತ್ತಿದೆ.
Related Articles
ಪಿಲಕುಳ ಜೈವಿಕ ಉದ್ಯಾನವನಗಳಲ್ಲಿ ಒಟ್ಟಾರೆ 150 ಎಕ್ರೆ ಜಾಗವಿದ್ದು, ಕೆಲವು ಪ್ರದೇಶಗಳಲ್ಲಿ ಅಕೇಶಿಯಾ ಗಿಡಗಳಿವೆ. ಮುಂದಿನ ದಿನಗಳಲ್ಲಿ ಅಕೇಶಿಯಾ ಮುಕ್ತ ಪರಿಸರ ನಿರ್ಮಾಣವಾಗಲಿದೆ. ಇದೇ ಕಾರಣಕ್ಕೆ ಈಗಾಗಲೇ ಪೂರ್ಣಗೊಂಡ ಎರಡು ಹಂತ ದಲ್ಲಿಯೂ ಅಕೇಶಿಯಾ ಗಿಡಗಳ ಮಧ್ಯೆ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಸಸ್ಯ ಗಳನ್ನು ನೆಡಲಾಗಿದೆ. ಈ ಸಸ್ಯಗಳು ದೊಡ್ಡ ದಾದ ಬಳಿಕ ಅಕೇಶಿಯಾ ಗಿಡಗಳನ್ನು ಮುಕ್ತವಾಗಿಸುವ ಚಿಂತನೆಯಿದೆ.
Advertisement
ಪಿಲಿಕುಳಕ್ಕೆ ಬರಲಿದೆ ಕಾಡುಕೋಣಕೆಲವು ದಿನಗಳಲ್ಲಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಎರಡು ಕಾಡುಕೋಣಗಳು ಬರಲಿವೆ. ಅದಕ್ಕೆಂದು ಚೆನ್ನೈಯ ಉದ್ಯಾನವನ ವೊಂದರ ಜತೆ ಮಾತುಕತೆ ನಡೆಸಲಾಗಿದ್ದು, ಅಲ್ಲಿಂದ ಕಾಡುಕೋಣ ತಂದರೆ ಪಿಲಿಕುಳದಿಂದ ಕಾಳಿಂಗ ಸರ್ಪ, ಇನ್ನಿತರ ಪ್ರಾಣಿಗಳ ಕೊಡು- ಕೊಳ್ಳುವಿಕೆ ನಡೆಯಲಿದೆ. ಪಿಲಿಕುಳ ಹಸುರೀಕರಣ
ಪ್ರಾಣಿಗಳು ಕಾಡಿನ ಪರಿಸರದಲ್ಲಿರಬೇಕು ಎಂಬ ಕಲ್ಪನೆಯಲ್ಲಿ ಉದ್ಯಾನವನ ಸುತ್ತಲೂ ಹಸುರೀಕರಣ ಮಾಡಲಾಗುತ್ತಿದೆ. ಈಗಾಗಲೇ ಎರಡನೇ ಹಂತ ಪೂರ್ಣಗೊಂಡಿದೆ. ಎರಡು ಹಂತದಲ್ಲಿ 7,000ದಷ್ಟು ಪಶ್ಚಿಮಘಟ್ಟದಲ್ಲಿರುವ ಮತ್ತು ಸ್ಥಳೀಯ ಸಸಿಗಳನ್ನು ನೆಡಲಾಗಿದೆ.
– ಎಚ್. ಜಯಪ್ರಕಾಶ್ ಭಂಡಾರಿ,
ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಕಾಡಿನ ಮಧ್ಯೆ ಪ್ರಾಣಿ ಗೂಡು
ಪಿಲಿಕುಳ ಜೈವಿಕ ಉದ್ಯಾನವನ ಸುತ್ತಮುತ್ತಲೂ ಈಗಾಗಲೇ ಸಸಿಗಳನ್ನು ನೆಡಲು ಪ್ರಾರಂಭಿಸಿದ್ದು, ಕೆಲವು ವರ್ಷಗಳ ಬಳಿಕ ಸುತ್ತಲಿನ ಪ್ರದೇಶ ಹಸಿರಿನಿಂದ ಕಂಗೊಳಿಸಲಿದೆ. ಬಳಿಕ, ಉದ್ಯಾನವನವು ಸಂಪೂರ್ಣ ಕಾಡಾಗಿ ಮಾರ್ಪಾಡಾಗುವುದರಿಂದ ಈಗಿರುವ ಪ್ರಾಣಿಗಳ ಗೂಡು ಕಾಡಿನ ಮಧ್ಯೆ ಇರುವಂತೆ ಕಾಣಲಿದೆ. ಇದರೊಂದಿಗೆ ಪ್ರಾಣಿಗಳು ಕಾಡಿನ ಒಳಗೆ ಇರಬೇಕು ಎಂಬ ಕಲ್ಪನೆ ಸಾಕಾರವಾಗಲಿದೆ. ••ನವೀನ್ ಭಟ್ ಇಳಂತಿಲ