Advertisement

ಕುವೈಟ್‌ನಲ್ಲಿ ಸಂಕಷ್ಟದಲ್ಲಿರುವ ಯುವಕರು ಶೀಘ್ರ ತಾಯ್ನಾಡಿಗೆ?

02:15 AM May 31, 2019 | sudhir |

ಮಂಗಳೂರು: ಕುವೈಟ್‌ನಲ್ಲಿ ಉದ್ಯೋಗ ಲಭಿಸದೆ ಸಂಕಷ್ಟದಲ್ಲಿರುವ ಕರ್ನಾಟಕ ಮತ್ತು ಇತರ ರಾಜ್ಯಗಳ 75 ಮಂದಿ ಯುವಕರ ಕೆಲಸದ ಪರವಾನಿಗೆಗೆ ಸಂಬಂಧಿಸಿದಂತೆ ವಂಚಿಸಿರುವ ಕಂಪೆನಿಯ ಕಚೇರಿಯಲ್ಲಿ ಕುವೈಟ್‌ನ ಕಾರ್ಮಿಕ ಹಿತರಕ್ಷಣ ಸಂಸ್ಥೆ (ಶೋನ್‌) ಗುರುವಾರ ವಿಚಾರಣೆ ನಡೆಸಿದ್ದು, ಪ್ರಕರಣ ಬಹುತೇಕ ಸುಖಾಂತ್ಯದ ಹಂತದಲ್ಲಿದೆ. ಯುವಕರು ಶೀಘ್ರ ತಾಯ್ನಾಡಿಗೆ ವಾಪಸಾಗುವ ಸಾಧ್ಯತೆಯಿದೆ.

Advertisement

4 ಗಂಟೆಗಳ ಸುದೀರ್ಘ‌ ವಿಚಾರಣೆಯಲ್ಲಿ ಸಂತ್ರಸ್ತರು, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ವಂಚನೆ ಮಾಡಿರುವ ಕಂಪೆನಿ ಪ್ರತಿನಿಧಿಗಳು ಮತ್ತು ಪಬ್ಲಿಕ್‌ ಅಥಾರಿಟಿ ಮ್ಯಾನ್‌ ಪವರ್‌ ಸದಸ್ಯರು ಭಾಗಿಯಾಗಿದ್ದರು.

ರವಿವಾರ ಸಭೆ
ಸಂತ್ರಸ್ತರ ವೀಸಾ ರದ್ದತಿಗೆ ಸಂಬಂಧಿಸಿ ರವಿವಾರ ಶೋನ್‌ ಸಭೆ ಕರೆದಿದೆ. ಸಂತ್ರಸ್ತರಿಂದ ಮತ್ತು ವಂಚಿಸಿದ ಕಂಪೆನಿಯಿಂದ ಶೋನ್‌ನಲ್ಲಿ ಪರಸ್ಪರ ದೂರು ದಾಖಲಾಗಿದೆ. ಈ ಬಗ್ಗೆ ವಿಚಾರಣೆ ನಡೆಯಲಿದ್ದು, ಬಳಿಕ ಯುವಕರ ವೀಸಾ ರದ್ದತಿ ಸಂಬಂಧ ಚರ್ಚೆಯಾಗಲಿದೆ. ವೀಸಾ ರದ್ದುಗೊಂಡರೆ ಕೂಡಲೇ ತಾಯ್ನಾಡಿಗೆ ಬರುವ ನಿರೀಕ್ಷೆಯಿದೆ.

ಕೆಲವು ಯುವಕರಿಗೆ ಏಜೆನ್ಸಿಯು ಆಹಾರ ಸರಬರಾಜು ಕಂಪೆನಿಯಲ್ಲಿ ಕೆಲಸ ಕೊಟ್ಟಿದ್ದರಿಂದ ಅಂಥವ‌ರಿಗೆ ಈಗಾಗಲೇ ದ್ವಿಚಕ್ರ ವಾಹನ ನೀಡಲಾಗಿದೆ.

ರವಿವಾರದ ಒಳಗೆ ಅವುಗಳನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಯುವಕರು ಪುನಃ ಕೆಲಸ ಮಾಡುವುದಾದರೆ ಸಮರ್ಪಕವಾಗಿ ಸಂಬಳ ನೀಡುತ್ತೇವೆ ಎಂದು ಸಂಸ್ಥೆಯು ಭರವಸೆ ನೀಡಿದೆಯಾದರೂ ಯುವಕರು ಆಸಕ್ತಿ ತೋರಲಿಲ್ಲ.

Advertisement

“ಜೂ. 2ರಂದು ಕುವೈಟ್‌ನ ಕಾರ್ಮಿಕ ಹಿತರಕ್ಷಣಾ ಸಂಸ್ಥೆ ನಡೆಸುವ ಸಭೆಯಲ್ಲಿ 75 ಯುವಕರ ವೀಸಾ ರದ್ದುಗೊಳಿಸಿದರೆ, ಕೆಲವು ದಿನಗಳಲ್ಲಿ ಯುವಕರು ತಾಯ್ನಾಡಿಗೆ ಮರಳಬಹುದು. ಈ ವೇಳೆ ಯುವಕರಿಗೆ ಭಾರತಕ್ಕೆ ಮರಳಲು ವಿಮಾನ ಟಿಕೆಟ್‌ ವ್ಯವಸ್ಥೆಯನ್ನು ವಂಚಿಸಿದ ಸಂಸ್ಥೆ ಮಾಡಬೇಕು. ಒಂದು ವೇಳೆ ಟಿಕೆಟ್‌ ವ್ಯವಸ್ಥೆ ಮಾಡದಿದ್ದರೆ, ಸಂಸದ ನಳಿನ್‌ ಕುಮಾರ್‌ ಕಟೀಲು ಹಾಗೂ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು’ ಎಂದು ಕುವೈಟ್‌ನಲ್ಲಿರುವ ಅನಿವಾಸಿ ಕನ್ನಡಿಗರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next