Advertisement

ಮಂಗಳೂರು ಉತ್ತರ : ಈ ಕ್ಷೇತ್ರದಲ್ಲಿ ಮಾತಿಗೆ ಮೌನದ ಮೂಗುತಿ

03:09 AM Apr 12, 2019 | sudhir |

ಮಂಗಳೂರು: ಅದು ನಗರದಿಂದ ಅನತಿ ದೂರದಲ್ಲಿರುವ ಅಡ್ಯಾರ್‌ ಎಂಬಲ್ಲಿನ ಸಣ್ಣ ಗೂಡಂಗಡಿ. ಅಲ್ಲಿ ಪತ್ರಿಕೆಯತ್ತ ಕಣ್ಣಾಯಿಸುತ್ತಿದ್ದ ಶೇಖರ್‌ರಲ್ಲಿ ಚುನಾವಣೆ ಹೇಗಿದೆ ಎಂದಾಗ, ನೇರವಾಗಿ ಮಾತು ಆರಂಭಿಸಿದ್ದು ದೇಶದ ವಿಚಾರದಿಂದಲೇ. “ದೇಶ ಇದ್ದರೆ ಉಳಿದೆಲ್ಲವೂ‌’ ಎನ್ನುವುದು ಅವರ ವಾದ. ಆದರೆ, ಪಕ್ಕದಲ್ಲಿದ್ದ ಕೇಶವ ಅವರು ಮಧ್ಯಪ್ರವೇಶಿಸಿ “ದೇಶ ಮೊದಲು ಸರಿ; ಆದರೆ ಈ ಬಾರಿ ಒಮ್ಮೆ ಬದಲಾವಣೆ ತಂದರೆ ಹೇಗೆ?’ ಎಂದಾಗ ಚರ್ಚೆ ಮತ್ತೂಂದು ಬದಿಗೆ ಹೊರಳಿತು.

Advertisement

ಚುನಾವಣೆಯ ರಂಗು ಹೇಗಿದೆ ಎಂದು “ಉದಯವಾಣಿ’ಯ ತಿರುಗಾಟ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹೊರಟಾಗ, ಕೇಳಿಬಂದಿದ್ದು ತರಹೇವಾರಿ ಅಭಿಪ್ರಾಯಗಳು. ಅದರಿಂದ ವೇದ್ಯವಾದದ್ದೆಂದರೆ, ಮತದಾರನ ಗುಟ್ಟು ಫ‌ಲಿತಾಂಶದಂದೇ ರಟ್ಟು ಎಂಬುದು.

ಅಂದಹಾಗೆ, ಸ್ಥಳೀಯ ಸಂಗತಿ-ಸಮಸ್ಯೆಗಳ ಬಗ್ಗೆ ಮಾತನಾಡಿದವರು ಕಡಿಮೆ. ಆದರೂ ಸುರತ್ಕಲ್‌ನ ಕುಳಾç ಭಾಗ ದಲ್ಲಿ ಕೆಲವರನ್ನು ವಿಚಾರಿಸಿದಾಗ ಕುಳಾç ಮೀನು ಗಾರಿಕಾ ಜೆಟ್ಟಿ ಆರಂಭದ ಬಗ್ಗೆ ಉಲ್ಲೇಖ ವಾಯಿತು. ಕೆಲವರು “ಜೆಟ್ಟಿ ಆದರೆ ಒಳ್ಳೆ ಯದು’ ಅಂದರೆ ಇನ್ನೂ ಕೆಲವರು “ಯಾವಾಗ ಆಗುವುದು?’ ಎಂದು ಮರು ಪ್ರಶ್ನಿಸಿದರು. ಜೋಕಟ್ಟೆ ಭಾಗದಲ್ಲಿ ಕೆಲವರು ಎಂಆರ್‌ಪಿಎಲ್‌ ನಿಂದ ಆಗುತ್ತಿರುವ ಸಮಸ್ಯೆ ಪ್ರಸ್ತಾವಿಸಿದರು. “ಬೃಹತ್‌ ಕಂಪೆನಿಯ ಧೂಳು-ಕಶ್ಮಲದಿಂದ ಬದುಕು ಕಷ್ಟ ವಾಗಿದೆ. ಆಳುವವರು ನಮ್ಮ ಬಗ್ಗೆ ಗಮನಿಸು ತ್ತಿಲ್ಲ’ ಎಂದು ದೂರಿದರು. ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಇನ್ನಷ್ಟು ಸೇವಾ ಸೌಲಭ್ಯ ಪ್ರಯಾಣಿಕರಿಗೆ ದೊರೆಯುವಂತೆ ಆಗಬೇಕೆಂಬುದು ಪ್ರಯಾಣಿಕ ರೊಬ್ಬರ ಅನಿಸಿಕೆ.

ಗಂಜಿಮಠದಲ್ಲಿದ್ದ ಕಿಶೋರ್‌ , “ಪ್ಲಾಸ್ಟಿಕ್‌ ಪಾರ್ಕ್‌ ನಮಗೆ ಬರಲಿದೆ. ಹೀಗಾಗಿ ಉದ್ಯೋಗ ದೊರೆಯಲಿದೆ’ ಎಂದು ಆಶಾವಾದ ವ್ಯಕ್ತಪಡಿಸಿದರು. ಆದರೆ, ಅಲ್ಲೇ ಇದ್ದ ಸೋಮನಾಥ ಎಂಬವರು, “ಪಾರ್ಕ್‌ ಆರಂಭ ವಾಗುತ್ತದೆಂದು ಹೇಳಿ ವರ್ಷ ಹಲವು ಆಗಿದೆ. ಇನ್ನೂ ಶುರು ಆಗಿಲ್ಲ’ ಅಂದು ಬಿಟ್ಟರು!

ಈ ಮಧ್ಯೆ, ಕ್ಷೇತ್ರ ವ್ಯಾಪ್ತಿಯ ನಗರ ಭಾಗದ ಬಹುತೇಕ ರಸ್ತೆಗಳು ಕಾಂಕ್ರೀಟ್‌ಗೊಂಡಿವೆ. ಆದರೆ, ಅಡ್ಯಾರ್‌, ಕೂಳೂರು, ಸುರತ್ಕಲ್‌ ಭಾಗದ ಹೆದ್ದಾರಿಯ ಪಕ್ಕ ಸರ್ವಿಸ್‌ ರೋಡ್‌, ಚರಂಡಿ ವ್ಯವಸ್ಥೆ ಸರಿಯಾಗಿಲ್ಲ ಎಂಬ ದೂರು ವ್ಯಕ್ತವಾಯಿತು. ಗ್ರಾಮೀಣ ಭಾಗದ ಕಥೆ ಇನ್ನೊಂದು; ಅಲ್ಲಿ ಇರುವ ಡಾಮರು ರಸ್ತೆಗಳೂ ಕೆಲವೆಡೆ ಜೀರ್ಣಗೊಂಡಿದೆ.

Advertisement

ಇದು ಆರ್ಥಿಕ ಸದೃಢ ಕ್ಷೇತ್ರ. ಎಂಆರ್‌ಪಿಎಲ್‌, ಎಸ್‌ಇಝಡ್‌, ಎನ್‌ಎಂಪಿಟಿ, ಪೆರ್ಮುದೆ ಭೂಗತ ಕಚ್ಚಾತೈಲ ಸ್ಥಾವರ ಸೇರಿದಂತೆ ಹಲವು ಉದ್ಯಮಗಳಿವೆ. ಬೇರೆ ಬೇರೆ ಊರಿನಿಂದ ಬಂದವರು ನೆಲೆಸಿದ್ದಾರೆ. ಸ್ಥಳೀಯರಿಗೂ ಉದ್ಯೋಗ ದೊರಕಿದ್ದರೂ, ಭೂಮಿ ಕಳೆದುಕೊಂಡ ರೈತರು ಬವಣೆ ಪಡುತ್ತಿದ್ದಾರೆ.

ಮಧ್ಯಮ ವರ್ಗದ ಜನರು ಹೆಚ್ಚಿರುವ ಪ್ರದೇಶವಿದು. ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದ‌ ಪಣಂಬೂರು ಸಮುದ್ರ ಕಿನಾರೆಯೂ ಇಲ್ಲಿನ ಹಿರಿಮೆ.
ಕ್ಷೇತ್ರ ವ್ಯಾಪ್ತಿಯ ಒಂದೆರಡು ಭಾಗಕ್ಕೆ-ಒಂದೆರಡು ಬಾರಿ ನಳಿನ್‌ ಹಾಗೂ ಮಿಥುನ್‌ ರೈ ಅವರು ಬಂದು ಮತ ಕೇಳಿದ್ದಾರೆ. ಉಳಿದಂತೆ ಪಕ್ಷದ ಕಾರ್ಯಕರ್ತರದ್ದೇ ಪ್ರಚಾರ. ದೊಡ್ಡ ಮಟ್ಟದ ಪ್ರಚಾರ ಸಭೆ ಯಾವ ಪಕ್ಷದಿಂದಲೂ ನಡೆದಿಲ್ಲ. ಎಸ್‌ಡಿಪಿಐ ಯೂ ಪ್ರಚಾರ ನಿರತವಾಗಿದೆ.

ಹಾಗೆಂದು, ಮನೆ ಮನೆ ಭೇಟಿಯೂ ಅಪೂರ್ಣ. ಅಡ್ಯಾರ್‌ ಭಾಗದಲ್ಲಿ ಯಾವುದೇ ಪಕ್ಷದವರು ಮನೆಗಳಿಗೆ ಬಂದಿಲ್ಲ. ಈ ಬಗ್ಗೆ ಗುರುಪುರದಲ್ಲಿದ್ದ ಪಕ್ಷದ ಕಾರ್ಯಕರ್ತರೊಬ್ಬರನ್ನು ಕೇಳಿದಾಗ, “ಬಿಸಿಲು ಜೋರಾಗಿರುವ ಕಾರಣಕ್ಕಾಗಿ ಮನೆ ಮನೆ ಭೇಟಿ ಕಷ್ಟವಾಗುತ್ತಿದೆ. ಕಾರ್ಯಕರ್ತರೂ ಕೆಲಸಕ್ಕೆ ಹೋಗುವವರಿದ್ದರೆ, ಇನ್ನೂ ಕೆಲವೆಡೆ ಮನೆಯಲ್ಲಿ ಯಾರೂ ಇರುವುದಿಲ್ಲ.

ಹಾಗಾಗಿ ಸಾಮಾಜಿಕ ಮಾಧ್ಯಮಗಳೂ ನೆರವಿಗೆ ಬಂದಿವೆ. “ಕರಾವಳಿ ಭಾಗದ ಜನರು ಮೊದಲೇ ಮತ ನೀಡುವುದನ್ನು ನಿರ್ಧರಿಸಿರುತ್ತಾರೆ. ಆದರೂ, ಮನೆ ಮನೆ ಭೇಟಿ ದಿನಪೂರ್ಣ ಮಾಡುವ ಬದಲು ಬೆಳಗ್ಗೆ 7ರಿಂದ 10 ಹಾಗೂ ಸಂಜೆ 4ರಿಂದ ರಾತ್ರಿಯವರೆಗೆ ಎಂಬ ನಿಯಮವನ್ನು ಅನುಸರಿಸಿದ್ದೇವೆ’ ಎಂದರು.

ಒಂದಂತೂ ಸತ್ಯ. ಕೋಮು ವಿಷಯದಲ್ಲಿ ಈ ಭಾಗ ಕೆಲವು ಸಮಯ ನಲುಗಿತ್ತು. ಆದರೆ, ಈಗ ಪರಿಸ್ಥಿತಿಯೆಲ್ಲ ತಿಳಿಯಾಗಿದೆ. ಸೌಹಾರ್ದ ವಾತಾವರಣ ಸದಾ ನೆಲೆಗೊಳ್ಳಲಿ ಎಂದು ಹಲವರು ಆಶಿಸುತ್ತಿದ್ದಾರೆ. ಹಾಗಾಗಿ ಸ್ಥಳೀಯ ಸಮಸ್ಯೆಗಳು ಮುಖ್ಯ ನೆಲೆಯಲ್ಲಿ ಚರ್ಚೆಯಾಗುತ್ತಿದ್ದರೂ ಬೇಡಿಕೆ-ಆಗ್ರಹದ ನೆಲೆ ತಲುಪುತ್ತಿಲ್ಲ. ರಾಷ್ಟ್ರೀಯ ವಿಷಯಗಳು ಪ್ರಧಾನ ನೆಲೆಯನ್ನು ಆವರಿಸಿಕೊಂಡು ಚರ್ಚೆಯ ನೆಲೆಯನ್ನೇ ಬದಲಿಸುತ್ತಿರುವುದು ಸ್ಪಷ್ಟ.

ಅಬ್ಬರವೇ ಇಲ್ಲದ ಚುನಾವಣೆ
ಪ್ರಚಾರ ಹೇಗಿದೆ ಎಂಬುದನ್ನು ಪರಿಶೀಲಿಸಿ ದಾಗ ಅಷ್ಟೇನೂ ಅಬ್ಬರ  ಕಾಣಲಿಲ್ಲ.ಯಾವುದೇ ಭಾಗ ದಲ್ಲೂ ಪಕ್ಷಗಳ ಕಾರ್ಯಕರ್ತರು ಪ್ರಚಾರದಲ್ಲಿ ಕಂಡು ಬಂದಿಲ್ಲ. ಅಬ್ಬರದ ಪ್ರಚಾರ ಸಭೆಯೂ ಈ ವ್ಯಾಪ್ತಿಯಲ್ಲಿ ನಡೆದಿಲ್ಲ. ಇನ್ನು ಅನು ಮತಿ ಪಡೆದು ಬ್ಯಾನರ್‌ ಹಾಕಲು ಅವಕಾಶವಿದ್ದರೂ ತೋರುತ್ತಿಲ್ಲ.

ಕಾವೂರಿನ ಹೊಟೇಲ್‌ನಲ್ಲಿ ಚಾ ಹೀರುತ್ತಾ ಮಾತನಾಡಿದ ಹಿರಿಯರೊಬ್ಬರ ಪ್ರಕಾರ, “ಈ ಬಾರಿಯ ಎಲೆಕ್ಷನ್‌ ಬರೀ ಚಪ್ಪೆ. ಹಿಂದೆ ಚುನಾವಣೆ ಅಂದರೆ ಅದು ಬಹುದೊಡ್ಡ ಜಾತ್ರೆ. ಈಗ ಎಲ್ಲದಕ್ಕೂ ನೀತಿಸಂಹಿತೆಯ ಹಿಡಿತದಿಂದಾಗಿ ಖಾಸಗಿ ಕಾರ್ಯಕ್ರಮ ಮಾಡಲೂ ಸಮಸ್ಯೆ. ಈ ಕಾರಣಕ್ಕಾಗಿ ಒಮ್ಮೆ ಮತದಾನ ಮುಗಿದರೆ ಸಾಕು’ ಎಂದು ಹೇಳಿ ಕೈಮುಗಿದರು.

  • ದಿನೇಶ್‌ ಇರಾ
Advertisement

Udayavani is now on Telegram. Click here to join our channel and stay updated with the latest news.

Next