Advertisement
ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಕೆಲವು ಓಣಿಗಳಲ್ಲಿರುವ ಡಾಮರು ರಸ್ತೆಯು ಕೆಂಪು ಬಣ್ಣದಿಂದ ಕಂಗೊಳಿಸಲಿದೆ. ಯಾಕೆಂದರೆ; ಸ್ಮಾರ್ಟ್‌ಸಿಟಿಯಲ್ಲಿ ಸೈಕಲ್ ಟ್ರ್ಯಾಕ್ ಯೋಜನೆಗೆ ಗುರುತಿಸಲಾದ ರಸ್ತೆ ಕೆಂಪು ಬಣ್ಣದಲ್ಲಿರಲಿದೆ. ನಗರದ ಮೋರ್ಗನ್ಸ್‌ಗೇಟ್ ನ ಓಣಿಕೆರೆಯಲ್ಲಿ ಕೆಲವು ಮೀಟರ್‌ವರೆಗೆ ಸದ್ಯ ಇಂತಹ ಡಾಮರು ಹಾಕಲಾಗಿದೆ.
Related Articles
Advertisement
ಕೆಂಪು, ಹಳದಿ ಎಂಬ ಎರಡು ಪ್ರತ್ಯೇಕ ಪಥವಿರಲಿವೆ. ಕೆಂಪು ಪಥ ಸುಮಾರು 8 ಕಿ.ಮೀ. ಇರಲಿದ್ದು, ಇದು ನಗರದ ಓಣಿ ರಸ್ತೆಗಳಲ್ಲಿ ಸಾಗಲಿದೆ.
ʼಓಣಿ’ಗಳಿಗೆ ಹೊಸ ರೂಪ
ಹಳದಿ ಪಥ ಸುಮಾರು 4 ಕಿ.ಮೀ. ಇರಲಿದೆ. ಇದು ರಸ್ತೆ ಬದಿಯಲ್ಲಿ ಸಾಗಲಿದೆ. ನಗರದೊಳಗೆ ಅಲ್ಲಲ್ಲಿ ಇರುವ ಓಣಿಗಳನ್ನೇ ಸೈಕಲ್ ಪಥಗಳಾಗಿ ಮಾಡ ಲಾಗುತ್ತದೆ. ಈ ಪರಿಕಲ್ಪನೆಯಲ್ಲಿ ಮೂಡಿರುವುದೇ ಸೈಕಲ್ ಓಣಿ ಯೋಜನೆ. ನಮ್ಮಲ್ಲಿರುವ ಹಳೆಯ, ಜನರು ಕಾಲ್ನಡಿಗೆಗೆ ಬಳಸುವಂತಹ ಸುವ್ಯವಸ್ಥಿತ ಓಣಿಗಳು ಅದೃಷ್ಟವಷಾತ್ ಇನ್ನೂ ಉಳಿದುಕೊಂಡಿವೆ. ಇಲ್ಲಿ ಹೆಚ್ಚು ವಾಹನಗಳ ಭರಾಟೆಯಿಲ್ಲ; ಅವುಗಳನ್ನು ಬಳಸಿದರೆ ಸುರಕ್ಷಿತವಾಗಿ ಸೈಕಲ್‌ನಲ್ಲಿ ತೆರಳುವುದು ಸಾಧ್ಯ.
ಸೈಕಲ್ ಲೇನ್‌ಗಳನ್ನು ವಿದ್ಯಾರ್ಥಿಗಳೂ ಸಹಿತ ನಾಗರಿಕರು ಬಳಸಬಹುದಾಗಿದೆ. ಈ ಮೂಲಕ ನಗರದ ವಾಹನದಟ್ಟಣೆ ಕಡಿಮೆಗೊಳಿಸುವುದು, ಪರಿಸರ ಮಾಲಿನ್ಯ ಮುಕ್ತಗೊಳಿಸುವುದು ಗುರಿ.
ಉದ್ದೇಶಿತ ಸೈಕಲ್ ಟ್ರ್ಯಾಕ್ ರೂಟ್
*ಬೋಳಾರ ಬೋಟ್ ರಿಪೇರ್ ಯಾರ್ಡ್-ಕಾಸಿಯ ಸ್ಕೂಲ್-ಮಣಿಪಾಲ್ ಸ್ಕೂಲ್-ರೈಲ್ವೇ ನಿಲ್ದಾಣ-ಪುರಭವನ-ಸೆಂಟ್ರಲ್ ಮಾರುಕಟ್ಟೆ-ರಥಬೀದಿ ಹೂವಿನ ಮಾರುಕಟ್ಟೆ-ಬಿಇಎಂ ಶಾಲೆ-ಕೆನರಾ ಶಾಲೆ-ಶಾರದಾ ವಿದ್ಯಾಲಯ-ಕೆನರಾ ಕಾಲೇಜು-ಎಸ್‌ಡಿಎಂ ಕಾಲೇಜು-ಟಿಎಂಎ ಪೈ ಕನ್ವೆನ್ಷನ್ ಸೆಂಟರ್-ಶ್ರೀ ದೇವಿ ಕಾಲೇಜು
*ಮಾರ್ನಮಿಕಟ್ಟೆ ರೈಲ್ವೇ ಓವರ್ ಬ್ರಿಡ್ಜ್- ಸೈಂಟ್ ಜೋಸೆಫ್ ಕಾಲೇಜು-ರೋಶನಿ ನಿಲಯ-ಹೈಲ್ಯಾಂಡ್ ಕಾಫಿ ವರ್ಕ್-ತೆರಿಗೆ ಕಚೇರಿ.
ಏನಿದು ಬಣ್ಣದ ರಸ್ತೆ?
ಡಾಮರು ಸಿದ್ಧಪಡಿಸುವಾಗಲೇ ಅದಕ್ಕೆ ʼಪಿಗ್ಮೆಂಟೆಡ್ʼಎಂಬ ಕೆಮಿಕಲ್ ಸೇರಿಸಲಾಗುತ್ತದೆ. ಈ ಮೂಲಕ ಡಾಮರಿನ ಬಣ್ಣ ಬದಲಾಗುತ್ತದೆ. ಈ ಬಣ್ಣ ಮಳೆ-ಬಿಸಿಲಿಗೂ ಹೋಗುವುದಿಲ್ಲ. ಶಾಶ್ವತವಾಗಿ ಇರುತ್ತದೆ. ಈ ರಸ್ತೆಗಳು ಇತರ ರಸ್ತೆಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಸದ್ಯ ಓಣಿಕೆರೆಯಲ್ಲಿ ಇಂತಹ ರಸ್ತೆ ನಿರ್ಮಿಸಲಾಗಿದೆ. ಮುಂದೆ ಇದನ್ನು ಉಳಿದ ಕಡೆಯಲ್ಲಿಯೂ ಜಾರಿ ಮಾಡಲಾಗುತ್ತದೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಅರಣ್ ಪ್ರಭ.
ಆಕರ್ಷಕ ರಸ್ತೆ: ನಗರದ ಪ್ರಮುಖ ರಸ್ತೆಗಳಲ್ಲಿನ ವಾಹನದ ಭರಾಟೆಯಲ್ಲಿ ಸೈಕಲ್ ಬಳಸುವವರಿಗೆ ಜಾಗವಿಲ್ಲದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಎರಡು ಕಡೆಗಳಲ್ಲಿ ಪ್ರತ್ಯೇಕ ಸುಸಜ್ಜಿತ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದನ್ನು ಆಕರ್ಷಕವಾಗಿ ಮಾಡುವ ಕಾರಣದಿಂದ ರಸ್ತೆಗೆ ಕೆಂಪು ಬಣ್ಣ ಇರುತ್ತದೆ. – ಪ್ರೇಮಾನಂದ ಶೆಟ್ಟಿ, ಮೇಯರ್ ಪಾಲಿಕೆ